

ರಾಣೆಬೆನ್ನೂರ: ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ ಲೋಡ್ ಶೆಡ್ಡಿಂಗ್ ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿ ಮಂಗಳವಾರ ತಾಲೂಕಿನ ಹೊಸಹೊನ್ನತ್ತಿ ಹಾಗೂ ಗುಡಗೂರು ಗ್ರೀಡ್ ಬಳಿ ಅಲ್ಲಿನ ಸುತ್ತಮುತ್ತಲಿನ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಗ್ರೀಡ್ ಬಳಿ ಜಮಾವಣೆಗೊಂಡ ರೈತರು ಕೆಇಬಿ ಗ್ರೀಡ್‌ನ ಬಾಗಿಲು ಹಾಕಿ ಸರ್ಕಾರದ ವಿರುದ್ಧ ಹಾಗೂ ಕೆಇಬಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ವಿದ್ಯುತ್ ಪೂರೈಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟುಹಿಡಿದರು.
ಸಾಲ ಮಾಡಿಕೊಂಡು ವಿವಿಧ ಬೆಳೆಗಳನ್ನು ಬೆಳೆದಿದ್ದೇವೆ. ಆದರೆ, ಸರಿಯಾಗಿ ಮಳೆ ಬಾರದೆ ಒಂದು ಶಾಪವಾದರೆ ಇತ್ತ ವಿದ್ಯುತ್ ಕೂಡ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಹೀಗಾದರೆ ನಮ್ಮ ಪರಸ್ಥಿತಿ ಬೀದಿ ಪಾಲಾಗುತ್ತದೆ. ರೈತರ ಬಗ್ಗೆ ನಿಷ್ಕಾಳಜಿವಹಿಸಿ ರೈತರೊಂದಿಗೆ ವಿದ್ಯುತ್ ಚೆಲ್ಲಾಟವಾಡುತ್ತಿರುವ ಕೆಇಬಿ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂದಿನಿಂದಲೇ ಸಮರ್ಪಕವಾಗಿ ಯಾವುದೆ ಲೋಡ್ ಶೆಡ್ಡಿಂಗ್ ಇಲ್ಲದೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.
ಘಟನಾ ಸ್ಥಳಕ್ಕೆ ಬಂದ ಹೆಸ್ಕಾಂ ವಿಭಾಗೀಯ ಎಇ ಎನ್. ಬೆಳಕೇರಿ ಮಾತನಾಡಿ, ವೈಟಿ ಹೊನ್ನತ್ತಿ ಗ್ರೀಡ್‌ಗೆ ಸಂಬಂಧಪಡುವ ಕೆಲ ಗ್ರಾಮಗಳ ರೈತರಿಗೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಒಟ್ಟು 6 ತಾಸು ವಿದ್ಯುತ್ ಪೂರೈಸುತ್ತೇವೆ. ಇನ್ನೂಳಿದ ಕೆಲ ಗ್ರಾಮಗಳ ರೈತರಿಗೆ ಮಧ್ಯಾಹ್ನ 2ರಿಂದ ಸಂಜೆ 6ಗಂಟೆಯವರೆಗೆ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ತಾಲೂಕಿನ ಚೌಡಯ್ಯದಾನಪುರ, ಚಂದಾಪುರ, ಹೊನ್ನತ್ತಿ, ಮಾದಾಪುರ, ನೂಕಾಪುರ, ವೈಟಿ ಹೊನ್ನತ್ತಿ, ಗುಡೂರ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿದ್ದರು.