

ಬೆಂಗಳೂರು: ವಿದ್ಯುತ್ ದರ ಏರಿಕೆ ಆತಂಕದಲ್ಲಿದ್ದ ಗ್ರಾಹಕರಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ವಿದ್ಯುತ್ ದರ ಇಳಿಕೆ ಮಾಡುವ ಸಿಹಿ ಸುದ್ದಿ ನೀಡಿದೆ. ಒಂದೂವರೆ ದಶಕದ ಬಳಿಕ ವಿದ್ಯುತ್ ದರ ಇಳಿಸುವ ನಿರ್ಣಯ ಕೈಗೊಂಡಿರುವ ಕೆಇಆರ್ಸಿ, ಆ ಮೂಲಕ ದರ ಏರಿಕೆ ಪ್ರಸ್ತಾವನೆ ಸಲ್ಲಿಸಿದ್ದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಶಾಕ್ ನೀಡಿದೆ.
100 ಯುನಿಟ್ಗಿಂತ ಹೆಚ್ಚು ಉಪಯೋಗಿಸುವ ಗೃಹ ಬಳಕೆದಾರರಿಗೆ ಪ್ರತಿ ಯೂನಿಟ್ಗೆ 1.10 ರೂ ಕಡಿಮೆಯಾಗಿದ್ದು, ಹೊಸ ದರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಕೆಇಆರ್ಸಿ ಅಧ್ಯಕ್ಷ ಪಿ. ರವಿಕುಮಾರ್ 2024-25ನೇ ಸಾಲಿನ ವಿದ್ಯುಚ್ಛಕ್ತಿ ದರ ಪರಿಷ್ಕರಣೆಯನ್ನು ಬುಧವಾರ ಪ್ರಕಟಿಸಿದ್ದು, ಡಿಮ್ಯಾಂಡ್ ಶುಲ್ಕದಲ್ಲಿಯೂ ಶೇ.10 ಇಳಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಎಸ್ಕಾಂಗಳು 50 ರಿಂದ 163 ಪೈಸೆ ಏರಿಕೆ ಕೇಳಿದ್ದರೂ ಕೆಇಆರ್ಸಿ ಈ ಬಾರಿ ಸಮ್ಮತಿಸಿಲ್ಲ. ಅಷ್ಟೇ ಅಲ್ಲ, ಕೈಗಾರಿಕೆಗಳು ಮತ್ತು ವಾಣಿಜ್ಯ ಸ್ಥಾವರಗಳು ಹೆಚ್ಚು ವಿದ್ಯುತ್ ಬಳಸುವುದನ್ನು ಉತ್ತೇಜಿಸಲು, ಆ ವರ್ಗದವರಿಗೂ ವಿದ್ಯುತ್ ದರ ಇಳಿಕೆ ಮಾಡಲಾಗಿದೆ. ಆರ್ಥಿಕ ವರ್ಷ 2024-25ರಲ್ಲಿ ಅಲ್ಪ ಪ್ರಮಾಣದ ಹೆಚ್ಚಳವನ್ನು ಎಲ್ಲ ಪ್ರವರ್ಗಗಳ ಗ್ರಾಹಕರಿಗೆ ದರ ಮರು ಹೊಂದಾಣಿಕೆ ಮಾಡಲು ಉಪಯೋಗಿಸಲಾಗಿದೆ. ವಾಣಿಜ್ಯ ಕೈಗಾರಿಕಾ ಮತ್ತು ಗೃಹ ಬಳಕೆ ಗ್ರಾಹಕರ ವಿದ್ಯುತ್ ದರದಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಕೆಇಆರ್ಸಿ ತಿಳಿಸಿದೆ.
ಈಗ ಚಾಲ್ತಿಯಲ್ಲಿರುವಂತೆ ಸಂಜೆ 6 ರಿಂದ ರಾತ್ರಿ 10 ರವರೆಗಿನ ಗರಿಷ್ಠ ಬೇಡಿಕೆಗೆ ಸಮಯಾಧಾರಿತ ದರವನ್ನು (ಟೈಮ್ ಆಫ್ ಡೇ-ಟಿಒಡಿ) ಬೆಳಗ್ಗೆ 6 ರಿಂದ 9 ಗಂಟೆಯವರೆಗಿನ ಗರಿಷ್ಠ ಬೇಡಿಕೆಗೂ ಅನ್ವಯಿಸಲಾಗಿದೆ.
ಪ್ರೋತ್ಸಾಹಧನ 1 ರೂ. ಇಳಿಕೆ: ಪ್ರೋತ್ಸಾಹಕ ದರವನ್ನು ಪ್ರತಿ ಯುನಿಟ್ಗೆ ರೂ 2ರಿಂದ ರೂ 1ಕ್ಕೆ ಇಳಿಸಿ ಪ್ರೋತ್ಸಾಹ ಯೋಜನೆ (ಎಸ್ಐಎಸ್) ಈ ವರ್ಷ ಮುಂದುವರಿಸಲಾಗಿದೆ. 2026ಕ್ಕೆ ಈ ಯೋಜನೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ ಕ್ರಾಸ್ ಸಬ್ಸಿಡಿ ದರವನ್ನು ಕಡಿಮೆ ಮಾಡಲಾಗಿದೆ.
ಸ್ವಯಂ ರೀಡಿಂಗ್ಗೆ ಅವಕಾಶ: ಗ್ರಾಹಕರು ತಾವೇ ವಿದ್ಯುತ್ ಮೀಟರ್ ರೀಡಿಂಗ್ ಮಾಡಿ ಬಿಲ್ ಕಟ್ಟುವ ಹೊಸ ಯೋಜನೆಯನ್ನು ಎಲ್.ಟಿ. ಗ್ರಾಹಕರಿಗೆ (ಆಪ್ ಮೂಲಕ) ಪರಿಚಯಿಸಲಾಗಿದೆ. ಇಂಧನ ಬಳಕೆಗೆ ಈಗ ಒಂದೇ ಸ್ಲ್ಯಾಬ್ ಪರಿಚಯಿಸಿರುವುದರಿಂದ ಗ್ರಾಹಕರು ತಮ್ಮ ಆವರಣದಲ್ಲಿ ಒಂದಕ್ಕಿಂತ ಹೆಚ್ಚಿನ ಸ್ಥಾವರಗಳಿಗೆ ವಿದ್ಯುತ್ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ಎಸ್ಕಾಂಗಳ ನಿಲುವೇನು ?: ಕೆಇಆರ್ಸಿ ಮೊದಲ ಬಾರಿಗೆ 2008ರಲ್ಲಿ ವಿದ್ಯುತ್ ದರ ಪ್ರತಿ ಯೂನಿಟ್ಗೆ 50 ಪೈಸೆ ಇಳಿಸಿದರೂ ಗ್ರಾಹಕರು ವಂಚಿತರಾದರು. ಕೆಇಆರ್ಸಿ ಈ ನಿರ್ಧಾರದ ವಿರುದ್ಧ ಎಸ್ಕಾಂಗಳು ಮೇಲ್ಮನವಿ ಪ್ರಾಧಿಕಾರದಿಂದ ತಡೆಯಾಜ್ಞೆ ತಂದಿದ್ದವು. ಈಗ ಎಲ್ಲ ವರ್ಗಗಳಿಗೆ ಮತ್ತೆ ದರ ಇಳಿಕೆ ಮಾಡಿದ್ದು, ಎಸ್ಕಾಂಗಳು ಒಪ್ಪಿಕೊಳ್ಳುತ್ತವೆಯೋ ಅಥವಾ ಹಿಂದಿನಂತೆ ಮೇಲ್ಮನವಿ ಪ್ರಾಧಿಕಾರಕ್ಕೆ ಮೊರೆ ಹೋಗಲಿ ವೆಯೇ? ಎನ್ನುವುದನ್ನು ಕಾದು ನೋಡಬೇಕಿದೆ.
ನೀತಿಸಂಹಿತೆ ತೂಗುಗತ್ತಿ: ಏಪ್ರಿಲ್ 1ರಿಂದ ಅನ್ವಯವಾಗುವ ಹೊಸ ದರವನ್ನು ಕೆಇಆರ್ಸಿ ಸಾಮಾನ್ಯವಾಗಿ ಮಾರ್ಚ್ನಲ್ಲಿ ಪ್ರಕಟಿಸುತ್ತಿತ್ತು. ಆದರೆ, ಈ ಬಾರಿ ಮಾರ್ಚ್ನಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಾಗುವ ಅಪಾಯವಿತ್ತು. ಸಾಲದೆಂಬಂತೆ ಆಯೋಗದ ಅಧ್ಯಕ್ಷ ಸೇರಿ ಮೂವರು ಸದಸ್ಯರ ಪೈಕಿ ಒಬ್ಬ ಸದಸ್ಯರು ನಿವೃತ್ತರಾಗಿದ್ದಾರೆ. ಮತ್ತೊಬ್ಬ ಸದಸ್ಯರ ಅವಧಿ ಮಾ.12ಕ್ಕೆ ಮುಗಿಯಲಿದ್ದು, ಅಧ್ಯಕ್ಷರೊಬ್ಬರೇ ಉಳಿಯಲಿರುವ ಕಾರಣ ಸಾಕಷ್ಟು ಮುಂಚಿತವಾಗಿ ಪರಿಷ್ಕೃತ ವಿದ್ಯುತ್ ದರ ಪ್ರಕಟಿಸಲಾಯಿತು ಎಂದು ವಿಶ್ಲೇಷಿಸಲಾಗಿದೆ.
ಮುಖ್ಯಾಂಶಗಳು
1. ಎಲ್.ಟಿ. ಗೃಹಬಳಕೆಯಲ್ಲಿ 100 ಯುನಿಟ್ಗಿಂತ ಹೆಚ್ಚು ವಿದ್ಯುತ್ಗೆ ಬಳಕೆ ಮಾಡುವವರಿಗೆ 1.10 ರೂ. ಇಳಿಕೆಯಾಗಿದೆ.
2. ಎಚ್.ಟಿ ವಾಣಿಜ್ಯ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ಗೆ 1.25 ರೂ. ಡಿಮ್ಯಾಂಡ್ ಶುಲ್ಕ ಪ್ರತಿ ಕೆವಿಎಗೆ 10 ರೂ. ಇಳಿಕೆ
3. ಎಚ್.ಟಿ. ಕೈಗಾರಿಕೆ: ಇಂಧನ ಬಳಕೆ ಶುಲ್ಕ, ಪ್ರತಿ ಯೂನಿಟ್ಗೆ 50 ಪೈಸೆ, ಡಿಮ್ಯಾಂಡ್ ಶುಲ್ಕ ಪ್ರತಿ ಕೆವಿಎಗೆ 10 ರೂ ಇಳಿಕೆ
4. ಎಚ್.ಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಇಂಧನ ಬಳಕೆ ಶುಲ್ಕ ಪ್ರತಿ ಯುನಿಟ್ಗೆ 40 ಪೈಸೆ, ಡಿಮ್ಯಾಂಡ್ ಶುಲ್ಕ ಪ್ರತಿ ಕೆವಿಎಗೆ 10 ರೂ. ಇಳಿಕೆ
5. ಎಚ್.ಟಿ ಖಾಸಗಿ ಏತ ನೀರಾವರಿ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ 2.00 ರೂ. ಇಳಿಕೆ.
6. ಎಚ್.ಟಿ ವಸತಿ ಅಪಾರ್ಟ್ವೆುಂಟ್ಗಳ ಇಂಧನ ಬಳಕೆ ಶುಲ್ಕ, ಪ್ರತಿ ಕೆವಿಎಗೆ ಡಿಮಾಂಡ್ ಶುಲ್ಕವನ್ನು 10 ರೂ.ಗಳಷ್ಟು ಇಳಿಕೆ.
7. ಎಲ್.ಟಿ.ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳುಇಂಧನ ಬಳಕೆ ಶುಲ್ಕ ಪ್ರತಿ ಯುನಿಟ್ಗೆ 50 ಪೈಸೆ ಇಳಿಕೆ
8. ಎಲ್.ಟಿ. ಕೈಗಾರಿಕಾ ಸ್ಥಾವರಗಳ ಇಂಧನ ಬಳಕೆ ಶುಲ್ಕ ಪ್ರತಿ ಯುನಿಟ್ಗೆ 1.00 ರೂ. ಇಳಿಕೆ
9ಎಲ್.ಟಿ ವಾಣಿಜ್ಯ ಸ್ಥಾವರಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ಗೆ 50 ಪೈಸೆ ಇಳಿಕೆ