

ಸೊರಬ: ತಾಲೂಕಿನ ಹಾಲಗಳಲೆ ಗ್ರಾಮದ ಊರೊಳಗೆ ಇದ್ದಕ್ಕಿದ್ದಂತೆ ವಿದ್ಯುತ್ ಕಂಬಗಳು ತಂತಿ ಹರಿದುಕೊಂಡು ಬೀಳುತ್ತಿವೆ. ಈಗಾಗಲೆ ಮೂರ‌್ನಾಲ್ಕು ಕಂಬಗಳು ನೆಲಕಚ್ಚಿವೆ ಎಂದು ಗ್ರಾಮಸ್ಥರು ಸಾಗರ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತ ಚಂದ್ರಶೇಖರ್ ಅವರ ಗಮನಕ್ಕೆ ತಂದರು.
ಪಟ್ಟಣದ ಮೆಸ್ಕಾಂ ಉಪವಿಭಾಗೀಯ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮನವಿ ಸಲ್ಲಿಸಿದ ಗ್ರಾಮಸ್ಥರು, 70ರ ದಶಕದಲ್ಲಿ ನೆಟ್ಟ ಕಂಬಗಳು ಈಗ ದಿಢೀರ್ ಬೀಳುತ್ತಿವೆ. ಇದರಿಂದ ಮಕ್ಕಳು, ಸಾರ್ವಜನಿಕರು ಓಡಾಡಲು ಭಯಪಡುವಂತಾಗಿದೆ. ಗ್ರಾಮದ ಸುತ್ತಲು ವಿದ್ಯುತ್ ಲೈನ್ ಸರಿಪಡಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ತಾಲೂಕಿನ ಉದ್ರಿ ಗ್ರಾಮಕ್ಕೆ ನಿರಂತರ ಜ್ಯೋತಿ ಸಂಪರ್ಕವಿಲ್ಲದೆ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ, ತ್ರಿೇಸ್ ಇಲ್ಲವೇ ಸಿಂಗಲ್ ೇಸ್ ವಿದ್ಯುತ್ ಅನ್ನು ನಿಗದಿತ ಸಮಯದಲ್ಲಿ ನೀಡಲಾಗುತ್ತದೆ. ಉಳಿದ ಸಮಯದಲ್ಲಿ ವಿದ್ಯುತ್ ಇಲ್ಲದೆ ರಾತ್ರಿ ವೇಳೆ ಕತ್ತಲು ಆವರಿಸುತ್ತದೆ. ಗೃಹ ಬಳಕೆಗೆ ಹಾಗೂ ವಿದ್ಯಾರ್ಥಿಗಳ ಓದಿಗೆ ತೀವ್ರ ತೊಂದರೆಯಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಈ ಭಾಗದ ಗ್ರಾಮಗಳಿಗೆ ನಿರಂತರ ಜ್ಯೋತಿ ಸೌಲಭ್ಯ ಒದಗಿಸಬೇಕೆಂದು ಗ್ರಾಮಸ್ಥ ಸದಾಶಿವ ಮನವಿ ಮಾಡಿದರು.
ಪಟ್ಟಣದ ಕಾನಕೇರಿ ಉರ್ದು ಶಾಲೆ ಮತ್ತು ಸುತ್ತಮತ್ತಲಿನ ವಾರ್ಡ್‌ಗಳಲ್ಲಿ ಆಗಾಗ್ಗೆ ಅತಿಯಾಗಿ ವಿದ್ಯುತ್ ಪ್ರವಹಿಸಿ ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್, ಮಿಕ್ಸಿ ಮತ್ತಿತರರ ವಸ್ತುಗಳು ಸುಟ್ಟುಹೋಗುತ್ತಿವೆ. ಸಮಸ್ಯೆ ಸರಿಪಡಿಸುವಂತೆ ನಿವಾಸಿಗಳು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರ ಚಂದ್ರಶೇಖರ್, ತಾಲೂಕಿನ ಹರೀಶಿ, ಉದ್ರಿ ಹಾಗೂ ಚಿಟ್ಟೂರು ಗ್ರಾಮಗಳ ಮಾರ್ಗವಾಗಿ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇವುಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು, ಕೂಡಲೇ ಸಮಸ್ಯೆ ಪರಿಹರಿಸಲು ಸಿಬ್ಬಂದಿಗೆ ಸೂಚಿಸಲಾಗುವುದು ಎಂದು ಹೇಳಿದರು.
ಸೊರಬ ಮೆಸ್ಕಾಂ ಎಇಇ ಎಸ್.ಸತ್ಯಪ್ರಕಾಶ್, ಸಹಾಯಕ ಅಭಿಯಂತ ಗಿರೀಶ್, ಸೊರಬ ಶಾಖಾಧಿಕಾರಿ ಬಿ.ಕೆ.ಸುರೇಶ್, ಉಳವಿ ಮತ್ತು ಚಂದ್ರಗುತ್ತಿ ಶಾಖಾಧಿಕಾರಿ ಪ್ರವೀಣ್‌ಕುಮಾರ್, ಸಹಾಯಕ ಲೆಕ್ಕಾಧಿಕಾರಿ ಸತೀಶ್ ಇತರರಿದ್ದರು.