ವಿದ್ಯುತ್ ತಿದ್ದುಪಡಿ ಮಸೂದೆ ಜಾರಿ ವಿರೋಧಿಸಿ ರೈತರ ಪ್ರತಿಭಟನೆ

IMG_1350
Published on

ಶಿವಮೊಗ್ಗ: ರೈತರ ಹಾಗೂ ಗ್ರಾಹಕರ ವಿರೋಧಿಯಾಗಿರುವ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರದಂತೆ ಒತ್ತಾಯಿಸಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡುವುದೇ ತಿದ್ದುಪಡಿ ಉದ್ದೇಶವಾಗಿದೆ. ಈ ಮಸೂದೆ ತಿದ್ದುಪಡಿ ರೈತರಿಗೆ, ಗ್ರಾಹಕರಿಗೆ ಮರಣಶಾಸನವಾಗಿದೆ. ಕೂಲಿ ಕಾರ್ಮಿಕರು, ಕುಟೀರ ಜ್ಯೋತಿ, ಭಾಗ್ಯಜ್ಯೋತಿ, ಕೃಷಿ ಪಂಪ್‌ಸೆಟ್, ಬೀದಿದೀಪ ಮುಂತಾದ ಕಡೆಗಳಲ್ಲಿ ವಿದ್ಯುತ್ ಉಚಿತವಾಗಿ ಸಿಗುವುದಿಲ್ಲ. ಈ ಯೋಜನೆಗಳಿಗೆ ವಿದ್ಯುತ್ ಬಂದ್ ಆಗುವ ಸಾಧ್ಯತೆ ಇದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಹಕರು ಮೊದಲು ವಿದ್ಯುತ್ ಶುಲ್ಕ ಪಾವತಿಸಿ ಬಳಿಕ ಸರ್ಕಾರದ ಸಬ್ಸಿಡಿ ಪಡೆಯಬೇಕಾಗುತ್ತದೆ. ಈ ಹಿಂದೆ ಇದೇ ರೀತಿ ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡಿ ಅದನ್ನು ಹಿಂಪಡೆದುಕೊಳ್ಳಲಾಗಿತ್ತು. ಹಾಗೆಯೇ ಇದು ಕೂಡ ಆಗಲಿದೆ. ರೈತರು ತಮ್ಮ ಪಂಪ್‌ಸೆಟ್‌ಗಳಿಗೆ ಪ್ರೀಪೇಯ್ಡ್ ಶುಲ್ಕ ಪಾವತಿಸಿ ವಿದ್ಯುತ್ ಪಡೆಯಬೇಕಾಗುತ್ತದೆ ಎಂದು ರೈತರು ದೂರಿದರು.

ರೈತರ ಉತ್ಪನ್ನಗಳಿಗೆ ಪರಿಹಾರಕ್ಕೆ ಆಗ್ರಹ: ಈ ಬಾರಿ ಅತಿವೃಷ್ಟಿಯಿಂದ ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿದ್ದು ರೈತರ ಉತ್ಪನ್ನಗಳಿಗೆ ಪರಿಹಾರ ನೀಡಬೇಕು. ರಾಜ್ಯದಲ್ಲಿ ಭೀಕರ ಮಳೆಯಾಗಿದ್ದು, 3 ಸಾವಿರ ಕೋಟಿ ರೂ.ಗೂ ಅಧಿಕ ಬೆಳೆಗಳು ಹಾನಿಗೀಡಾಗಿವೆ. 9 ಲಕ್ಷ ಹೆಕ್ಟೇರ್‌ನಷ್ಟು ಬೆಳೆ ನಾಶವಾಗಿದ್ದರೂ ಸರ್ಕಾರ ಇದುವರೆಗೂ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಕೂಡಲೇ ಸರ್ಕಾರ ರೈತರ ಉತ್ಪನ್ನಗಳಿಗೆ ಪರಿಹಾರ ನೀಡಬೇಕು. ಕಳೆದ ವರ್ಷ ಬಿದ್ದಂತಹ ಮನೆಗಳಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಆ ಮನೆಗಳಿಗೆ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಉಪಾಧ್ಯಕ್ಷರಾದ ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಇ.ಬಿ.ಜಗದೀಶ್, ಕಾರ್ಯಾಧ್ಯಕ್ಷರಾದ ಡಿ.ಎಚ್.ರಾಮಚಂದ್ರಪ್ಪ, ಪಿ.ಡಿ.ಮಂಜಪ್ಪ, ಕೆ.ರಾಘವೇಂದ್ರ, ಪ್ರಮುಖರಾದ ಎಂ.ಮಂಜಪ್ಪ ಕಾಚಿಕೊಪ್ಪ, ಕೆ.ಎನ್.ಜ್ಞಾನೇಶ್, ಸಿ.ಚಂದ್ರಪ್ಪ, ಕಸಟ್ಟಿ ರುದ್ರೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net