

ಕೊಡಗು: ಹಬ್ಬದ ಹಿನ್ನೆಲೆ ಮನೆಗೆ ವಿದ್ಯುತ್ ದೀಪ ಅಳವಡಿಸುವಾಗ ವಿದ್ಯುತ್ ಅವಘಡ ಸಂಭವಿಸಿದ್ದು, ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಕೊಡಗಿನಲ್ಲಿ ಸಂಭವಿಸಿದೆ.
ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಹೊಸಬೀದಿ ನಿವಾಸಿ ಎಚ್.ಎಂ.ಗಿರೀಶ್(35) ಮೃತರು. ಶಿಕ್ಷಕ ಗಿರೀಶ್ ಚಿಕ್ಲಿಹೊಳೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.
ಇಂದು(ಶುಕ್ರವಾರ) ರಾತ್ರಿ ಹೆಬ್ಬಾಲೆಯ ಬನಶಂಕರಿ ಅಮ್ಮನವರ ಹಬ್ಬ ನಡೆಯುತ್ತಿದ್ದ ಹಿನ್ನೆಲೆ ಗಿರೀಶ್, ಮನೆಗೆ ವಿದ್ಯುತ್ ದೀಪ ಅಳವಡಿಸುತ್ತಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ ಶಿಕ್ಷಕ ಅಸುನೀಗಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಮಿಂದೇಳಬೇಕಿದ್ದ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.