

ತುಮಕೂರು: ಮಾಜಿ ಶಾಸಕ ಬಿ.ಸುರೇಶ್ಗೌಡ ಕೊಲೆಗೆ ಸುಪಾರಿ ನೀಡಿದ ಆರೋಪ ಹಿನ್ನೆಲೆಯಲ್ಲಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಕ್ಯಾತಸಂದ್ರ ಠಾಣೆಯಲ್ಲಿ ಗುರುವಾರ ಎಫ್ಐಆರ್ ದಾಖಲಾಗಿದೆ. ಅತ್ತ ಸುರೇಶ್ಗೌಡ ವಿರುದ್ಧವೂ ಹೆಬ್ಬೂರು ಠಾಣೆಯಲ್ಲಿ ಶುಕ್ರವಾರ ಎಫ್ಐಆರ್ ದಾಖಲಾಗಿದೆ!
ಗೌರಿಶಂಕರ್ ದೂರು: ಶಾಸಕ ಡಿ.ಸಿ.ಗೌರಿಶಂಕರ್ ಉದ್ಯಮಿ ಬೊಮ್ಮನಹಳ್ಳಿ ಬಾಬು ಹಾಗೂ ವಕೀಲ ಹಿರೇಹಳ್ಳಿ ಮಹೇಶ್ ಅವರು ನನ್ನ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ಕುಮಾರ್ಗೆ ಮಾಜಿ ಶಾಸಕ ಬಿ.ಸುರೇಶ್ಗೌಡ ದೂರು ನೀಡಿದ್ದರು. ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ತುಮಕೂರು ತಾಲೂಕು ಅರೆಯೂರಿನಲ್ಲಿ ಇತ್ತೀಚಿಗೆ ನಡೆದಿದ್ದ ಕಾರ್ಯಕ್ರಮದಲ್ಲಿ ಸುರೇಶ್ಗೌಡ ಮಾಡಿದ ಆರೋಪ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪರಸ್ಪರ ಆರೋಪ, ಪ್ರತ್ಯಾರೋಪದ ಜತೆಗೆ ದೂರು ಕೂಡ ದಾಖಲಿಸಿದ್ದರು.
ಸುರೇಶ್ಗೌಡ ನೀಡಿದ ದೂರಿನ ಹಿನ್ನೆಲೆಯಲ್ಲಿ ಗುರುವಾರಷ್ಟೇ ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕ್ಷೇತ್ರದ ಇಬ್ಬರೂ ನಾಯಕರ ಸ್ವಪ್ರತಿಷ್ಠೆಗೆ ಪೊಲೀಸರು ಹೈರಾಣಾಗಿದ್ದಾರೆ.
ಶಾಸಕ ಗೌರಿಶಂಕರ್ ರಾಜಕೀಯ ವೈಷಮ್ಯದಿಂದ ಕೊಲೆ ಮಾಡಲು ಜೈಲಿನಲ್ಲಿರುವ ಕೈದಿಗೆ 5ಕೋಟಿ ರೂ. ಸುಪಾರಿ ನೀಡಿದ್ದಾರೆ ಎಂದು ಸುರೇಶಗೌಡ ದೂರು ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಸುರೇಶ್ಗೌಡ ಮಾತನಾಡಿದ್ದಾರೆ ಎಂಬ ಆಡಿಯೋವನ್ನು ಶಾಸಕ ಡಿ.ಸಿ.ಗೌರಿಶಂಕರ್ ಬಿಡುಗಡೆ ಮಾಡಲಾಗಿದ್ದು, ಈ ಆಡಿಯೋದಲ್ಲಿ ಲಾರಿ ಹತ್ತಿಸಿ ಕೊಲೆ ಮಾಡುವ ಬಗ್ಗೆ ಮಾತನಾಡಿದ್ದಾರೆ ಎಂದು ದೂರಿದ್ದರು. ಈ ಆಡಿಯೋ ನಕಲಿ ಎಂದು ಸುರೇಶ್ಗೌಡ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪ್ರಸ್ತುತ ತುಮಕೂರು ತಾಲೂಕು ಹೆಬ್ಬೂರು ಠಾಣೆಯಲ್ಲಿ ಸುರೇಶ್ಗೌಡ ವಿರುದ್ಧ ಕಲಂ120(ಬಿ),ಐಪಿಸಿ 506ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.