

ನವದೆಹಲಿ: ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನಗಳ ಚಿಲ್ಲರೆ ಮಾರಾಟ ಜುಲೈನಲ್ಲಿ ಶೇ. 93ರಷ್ಟು ಏರಿಕೆಯಾಗಿದೆ ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಫಾಡಾ) ಶುಕ್ರವಾರ ತಿಳಿಸಿದೆ. ಕಳೆದ ತಿಂಗಳು ಒಟ್ಟು ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನ ನೋಂದಣಿ 15,528 ಯೂನಿಟ್ಗಳಿಗೆ ಏರಿಕೆಯಾಗಿದೆೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು 8,037 ಯೂನಿಟ್ ಇತ್ತು. ಟಾಟಾ ಮೋಟಾರ್ಸ್ 6,047 ಯೂನಿಟ್ಗಳ ಮಾರಾಟದೊಂದಿಗೆ ಮುಂಚೂಣಿಯಲ್ಲಿದೆ. ಕಳೆದ ವರ್ಷ ಜುಲೈನ 5,100 ಯೂನಿಟ್ಗಳಿಗೆ ಹೋಲಿಸಿದರೆ ಇದು ಶೇ. 19ರಷ್ಟು ಏರಿಕೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಜುಲೈನಲ್ಲಿ 1,02,973 ಮಾರಾಟ. ಕಳೆದ ವರ್ಷದ ಇದೇ ತಿಂಗಳಲ್ಲಿ 1,07,655 ಇ-ಬೈಕ್ ಮಾರಾಟವಾಗಿದ್ದವು.
ಅದಕ್ಕೆ ಹೋಲಿಸಿದರೆ ಇದು ಶೇ. 4ರ ಕುಸಿತವಾಗಿದೆ. ಟಿವಿಎಸ್ ಮೋಟಾರ್ ಕಂಪನಿಯ 22,256 ಯೂನಿಟ್ಗಳ ನೋಂದಣಿ ಆಗಿದೆ. 2024ರ ಜುಲೈನಲ್ಲಿನ 19,655 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ. 13ರಷ್ಟು ಏರಿಕೆ. ಎಲೆಕ್ಟ್ರಿಕ್ ತ್ರಿಚಕ್ರವಾಹನ ವಿಭಾಗ ಶೇ. 9ರಷ್ಟು ಬೆಳವಣಿಗೆಯಾಗಿದೆ. ಕಳೆದ ವರ್ಷದ ಜುಲೈನಲ್ಲಿ 63,675 ಯೂನಿಟ್ ಮಾರಾಟವಾಗಿದ್ದರೆ, ಈ ಜುಲೈನಲ್ಲಿ 69,146 ಯೂನಿಟ್ ಮಾರಾಟವಾಗಿವೆ. ಮಹೀಂದ್ರಾ ಗ್ರೂಪ್ 9,766 ಯೂನಿಟ್ಗಳ ನೋಂದಣಿಯೊಂದಿಗೆ ಶೇ.40ರಷ್ಟು ಏರಿಕೆ ದಾಖಲು. ಎಲೆಕ್ಟ್ರಿಕ್ ವಾಣಿಜ್ಯ ವಾಹನ ಚಿಲ್ಲರೆ ಮಾರಾಟ ಜುಲೈನಲ್ಲಿ ಶೇ. 52ರ ಏರಿಕೆಯೊಂದಿಗೆ 1,244 ಯೂನಿಟ್ಗಳಿಗೆ ತಲುಪಿದೆ. ಟಾಟಾ ಮೋಟಾರ್ಸ್ 333 ಯೂನಿಟ್ಗಳ ನೋಂದಣಿಯೊಂದಿಗೆ ಈ ವಿಭಾಗದಲ್ಲಿ ಮುಂಚೂಣಿಯಲ್ಲಿದೆ ಎಂದು ಫಾಡಾ ಅಧ್ಯಕ್ಷ ಸಿ.ಎಸ್. ವಿಘ್ನೇಶ್ವರ್ ತಿಳಿಸಿದ್ದಾರೆ.
ಭಾರಿ ವಾಹನಗಳಿಗೆ ಪಿಎಂ ಇ-ಡ್ರೖೆವ್ 2 ವರ್ಷ ವಿಸ್ತರಣೆ: ಎಲೆಕ್ಟ್ರಿಕ್ ಬಸ್, ಇ-ಆಂಬುಲೆನ್ಸ್, ಇ-ಟ್ರಕ್ಗಳಂತಹ ವಾಹನಗಳಿಗೆ 10,900 ಕೋಟಿ ರೂ. ಮೌಲ್ಯದ ಪಿಎಂ ಇ-ಡ್ರೖೆವ್ ಯೋಜನೆಯ ಪ್ರಯೋಜನವನ್ನು ಇನ್ನೂ 2 ವರ್ಷಗಳವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ. ಪಿಎಂ ಎಲೆಕ್ಟ್ರಿಕ್ ಡ್ರೖೆವ್ ರೆವಲ್ಯೂಷನ್ ಇನ್ ಇನೊವೇಟಿವ್ ವೆಹಿಕಲ್ ಎನ್ಹಾನ್ಸ್ಮೆಂಟ್ (ಪಿಎಂ ಇ-ಡ್ರೖೆವ್) ಯೋಜನೆಯ ಗೆಜೆಟ್ ಅಧಿಸೂಚನೆ ಪ್ರಕಾರ, ಯೋಜನೆಯ ನಿಬಂಧನೆಗಳು ಈಗ 2026ರ ಮಾರ್ಚ್ ಬದಲಿಗೆ 2028ರ ಮಾರ್ಚ್ವರೆಗೆ ಜಾರಿಯಲ್ಲಿರುತ್ತವೆ. ಆದರೆ ನೋಂದಾಯಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಇ-ರಿಕ್ಷಾ, ಇ-ಕಾರ್ಟ್, ತ್ರಿಚಕ್ರ ವಾಹನಗಳಿಗೆ 2026ರ ಮಾರ್ಚ್ 31 ಅಂತಿಮ ದಿನಾಂಕವಾಗಿರುತ್ತದೆ.