ವಿಶ್ವದ ಮೊದಲ ವಿದ್ಯುತ್ ಚಾಲಿತ ಪ್ರಯಾಣಿಕರ ವಿಮಾನ ಹಾರಾಟ: ಕೇವಲ 700 ರೂ.ಗೆ 130 ಕಿ.ಮೀ ಪ್ರಯಾಣ! Electric plane

Electric plane
Published on

Electric plane : ವಿದ್ಯುತ್ ಚಾಲಿತ ವಿಮಾನಗಳು ಶೀಘ್ರದಲ್ಲೇ ಹಾರಾಟ ಆರಂಭಿಸಲಿವೆ. ಇದೇ ಮೊದಲ ಬಾರಿಗೆ ನಾಲ್ಕು ಪ್ರಯಾಣಿಕರೊಂದಿಗೆ ವಿದ್ಯುತ್ ಚಾಲಿತ ವಿಮಾನವೊಂದು ಆಕಾಶದಲ್ಲಿ ಹಾರಾಟ ನಡೆಸಿದೆ. ಅಚ್ಚರಿಯ ಸಂಗತಿ ಏನೆಂದರೆ, ಮೊದಲ ಪ್ರಯಾಣಿಕರೊಬ್ಬರು ಕೇವಲ 8 ಡಾಲರ್ ವೆಚ್ಚದಲ್ಲಿ ಅಂದರೆ 694 ರೂ. ವೆಚ್ಚದಲ್ಲಿ ಈ ವಿದ್ಯುತ್ ಚಾಲಿತ ವಿಮಾನದಲ್ಲಿ 130 ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ.

ಅಮೆರಿಕದ ಕಂಪನಿ ಬೀಟಾ ಟೆಕ್ನಾಲಜೀಸ್​ ಈ ಪ್ರಯೋಗವನ್ನು ನಡೆಸಿದೆ. ನಾಗರಿಕ ವಿಮಾನಯಾನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 4 ಪ್ರಯಾಣಿಕರೊಂದಿಗೆ ವಿದ್ಯುತ್​ ಚಾಲಿತ ವಿಮಾನ ತನ್ನ ಗಮ್ಯಸ್ಥಾನವನ್ನು ತಲುಪಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ವಿಮಾನ ಪ್ರಯಾಣ ಕ್ಷೇತ್ರದಲ್ಲಿ ಒಂದು ದಿಕ್ಕನ್ನೇ ಬದಲಾಯಿಸುವ ವಿಮಾನ ಎಂದು ಕರೆಯಬಹುದಾಗಿದೆ.

ಈ ತಿಂಗಳ ಆರಂಭದಲ್ಲಿ, ಫಾಕ್ಸ್ ನ್ಯೂಸ್ ವರದಿ ಮಾಡಿದಂತೆ ವಿದ್ಯುತ್ ವಿಮಾನವು ಪೂರ್ವ ಹ್ಯಾಂಪ್ಟನ್​ನಿಂದ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಮಾರು ಅರ್ಧ ಗಂಟೆಯಲ್ಲಿ ಸುಮಾರು 70 ನಾಟಿಕಲ್ ಮೈಲುಗಳನ್ನು (130 ಕಿಲೋಮೀಟರ್) ಕ್ರಮಿಸಿತು. ಇದು ಶೇ. 100 ರಷ್ಟು ವಿದ್ಯುತ್ ವಿಮಾನ ಎಂದು ಬೀಟಾ ಟೆಕ್ನಾಲಜೀಸ್​ನ ಸಂಸ್ಥಾಪಕ ಮತ್ತು ಸಿಇಒ ಕೈಲ್ ಕ್ಲಾರ್ಕ್ ಹೇಳಿದ್ದಾರೆ.

ನಾವು ಪೂರ್ವ ಹ್ಯಾಂಪ್ಟನ್​ನಿಂದ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರೊಂದಿಗೆ ಹಾರಿದೆವು. ನಾವು 35 ನಿಮಿಷಗಳಲ್ಲಿ 70 ನಾಟಿಕಲ್ ಮೈಲುಗಳನ್ನು ಕ್ರಮಿಸಿದೆವು. ಭವಿಷ್ಯದ ಪ್ರಯಾಣಕ್ಕೆ ಇದು ಬಹಳ ಮುಖ್ಯ. ಅಂತಹ ವಿದ್ಯುತ್ ವಿಮಾನಗಳು ಹಾರಾಟದ ಸಮಯದಲ್ಲಿ ಶಾಂತವಾಗಿರುತ್ತವೆ. ಅವು ಕಾರ್ಯನಿರ್ವಹಿಸಲು ಸಹ ತುಂಬಾ ಅಗ್ಗವಾಗಿವೆ. ವಿದ್ಯುತ್ ಚಾಲಿತ ವಿಮಾನವನ್ನು ಚಾರ್ಜ್ ಮಾಡಲು ಕೆಲವೇ ಸಮಯ ಸಾಕು ಎಂದು ಕ್ಲಾರ್ಕ್ ಹೇಳಿದ್ದಾರೆ.

ಇನ್ನು ಪೈಲಟ್ ಮತ್ತು ವಿಮಾನಕ್ಕೆ ಹಣ ಪಾವತಿಸಬೇಕಾಗುತ್ತದೆ. ಅದು ಕೂಡ ತುಂಬಾ ಅಗ್ಗವಾಗಿದೆ. ಅಲ್ಲದೆ, ಇಂಜಿನ್‌ಗಳು ಮತ್ತು ಪ್ರೊಪೆಲ್ಲರ್‌ಗಳು ಯಾವುದೇ ಶಬ್ದ ಮಾಡುವುದಿಲ್ಲ. ಪ್ರಯಾಣಿಕರು ಹಾರಾಟದ ಸಮಯದಲ್ಲಿ ಪರಸ್ಪರ ಮಾತನಾಡಬಹುದು.

ಅಂದಹಾಗೆ, 2017 ರಲ್ಲಿ ಸ್ಥಾಪನೆಯಾದ ಬೀಟಾ ಟೆಕ್ನಾಲಜೀಸ್, ಇತ್ತೀಚೆಗೆ ವಿದ್ಯುತ್ ವಿಮಾನಗಳಿಗಾಗಿ 318 ಮಿಲಿಯನ್ ಡಾಲರ್​ ಸಂಗ್ರಹಿಸಿದೆ. ಇದು ಅದರ ಒಟ್ಟು ಹಣವನ್ನು 1 ಬಿಲಿಯನ್‌ ಡಾಲರ್​ಗಿಂತ ಹೆಚ್ಚಿಸಿದೆ. ಕಂಪನಿಯು ಕಳೆದ ಆರು ವರ್ಷಗಳಿಂದ ಸಾಂಪ್ರದಾಯಿಕ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ CX300 ಮಾದರಿ, ಅಲಿಯಾ 250 eVTOL ಎರಡರಲ್ಲೂ ಕೆಲಸ ಮಾಡುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (FAA) ಪ್ರಮಾಣೀಕರಣವನ್ನು ಪಡೆಯುವ ಗುರಿಯನ್ನು ಹೊಂದಿದೆ. ಕಂಪನಿಯು 2026 ರ ವೇಳೆಗೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಆಶಿಸುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net