

ಶಿವಮೊಗ್ಗ: ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ) ಸರಾಸರಿಗಿಂತ ಹೆಚ್ಚಾಗಿದೆ. ಇದನ್ನು ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲೆಯ ಮತದಾರರ ಪಟ್ಟಿಯ ವೀಕ್ಷಕ ಡಾ.ಕೆ.ವಿ.ತ್ರಿಲೋಕ್‌ಚಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025ರ ಪ್ರಗತಿ ಪರಿಶೀಲನೆ ನಡೆಸಿದ ಅವರು, ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ 78 ಇದೆ. ಸರಾಸರಿ 68- 69 ಇರಬೇಕು. ಹೀಗಾಗಿ ಎಲ್ಲ ಕ್ಷೇತ್ರವಾರು ಮತ್ತು ಭಾಗವಾರು ಅಗತ್ಯ ವಿಶ್ಲೇಷಣೆ ನಡೆಸಬೇಕು. ಇ-ಜನ್ಮ ಪೋರ್ಟಲ್‌ನಿಂದ ಮಾಹಿತಿ ಪಡೆದು ಅನುಪಾತ ತಗ್ಗಿಸಬೇಕು ಎಂದು ಹೇಳಿದರು.
ಮರಣ ಹೊಂದಿದ ಮತ್ತು ಇತರೆಡೆ ವರ್ಗಾವಣೆಯಾದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಬೇಕು. ಫಾರಂ-7 ಅಪ್‌ಡೇಟ್ ಆಗಬೇಕು. ಪಾಲಿಕೆ ವ್ಯಾಪ್ತಿಯಲ್ಲೂ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಯುವ ಮತದಾರರು ಸೇರಿದಂತೆ ಮತದಾರರ ನೋಂದಣಿಯನ್ನು ಪರಿಣಾಮಕಾರಿಯಾಗಿ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಕ್ಷೇತ್ರವಾರು ಇಆರ್‌ಒ ಮತ್ತು ಎಇಆರ್‌ಒಗಳನ್ನು ನೇಮಿಸಿ, ತರಬೇತಿ ನೀಡಲಾಗಿದೆ. ಒಟ್ಟು 1,793 ಮತಗಟ್ಟೆಗಳಿವೆ. ಎಲ್ಲ ಮತಗಟ್ಟೆಗಳಿಗೆ ಬಿಎಲ್‌ಒಗಳ ನೇಮಕವಾಗಿದೆ. ಈಗಾಗಲೇ ಸಮಗ್ರ ಕರಡು ಮತದಾರರ ಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ನ.24ರಂದು ಮತದಾರರ ಪಟ್ಟಿ ಪರಿಷ್ಕರಣೆಗೆ ವಿಶೇಷ ಅಭಿಯಾನ ನಡೆಸಲಾಗುವುದು. ಡಿ.24ರಂದು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು. ಜ.6ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.
ಜಿಪಂ ಸಿಇಒ ಎನ್.ಹೇಮಂತ್, ಐಎಎಸ್ ಪ್ರೊಬೆಷನರಿ ಅಧಿಕಾರಿ ದೃಷ್ಟಿ ಜೈಸ್ವಾಲ್, ಪಾಲಿಕೆ ಆಯುಕ್ತೆ ಡಾ.ಕವಿತಾ ಯೋಗಪ್ಪನವರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಉಪವಿಭಾಗಾಧಿಕಾರಿ ಸತ್ಯನಾರಾಯಣ್, ಚುನಾವಣಾ ತಹಸೀಲ್ದಾರ್ ಪ್ರದೀಪ್ ಇತರರಿದ್ದರು.