ಸಿಎಂ ಗಾದಿಗೆ ಕಾಂಗ್ರೆಸ್​ನಲ್ಲಿ ಮ್ಯೂಸಿಕಲ್ ಚೇರ್

29 ckm 4
Published on

ಚಿಕ್ಕಮಗಳೂರು: ಪ್ರಾಯ ಆಗುತ್ತಿದೆ. ಹುಡುಗಿ ಹುಡುಕಲಿಲ್ಲ. ಇನ್ನೂ ಎಂಗೇಜ್​ವೆುಂಟ್ ಆಗಿಲ್ಲ. ಆದರೆ ಮಗುವಿಗೆ ನಾಮಕರಣ ಮಾಡುವ ಪ್ರಯತ್ನ ಕಾಂಗ್ರೆಸ್​ನಲ್ಲಿ ನಡೆದಿದೆ. ಈಗಲೇ ಅಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಮ್ಯೂಸಿಕಲ್ ಚೇರ್ ಸ್ಪರ್ಧೆ ಶುರುವಾಗಿದೆ. ಕುರ್ಚಿಗೆ ಟವೆಲ್ ಹಾಕಲು ಶುರು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಲೇವಡಿ ಮಾಡಿದರು.

ಚುನಾವಣೆಗೆ ಇನ್ನೂ ಮೂರೂವರೆ ವರ್ಷವಿದೆ. ಈಗಲೇ ಜಗಳ ಆರಂಭಿಸಿದವರು ಇನ್ನು ಅಧಿಕಾರಕ್ಕೇರುವ ದಿನ ಹತ್ತಿರ ಬಂದಾಗ ಇವರ ಪರಿಸ್ಥಿತಿ ಹೇಗಿರಬಹುದು. ಕಾಂಗ್ರೆಸ್​ನಲ್ಲಿ ಎಲ್ಲರೂ ಬೇಲ್​ನಲ್ಲಿದ್ದಾರೆ. ಅದು ಮುಗಿದ ನಂತರ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಜನ ಕಾಂಗ್ರೆಸ್​ನ ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ನೆರೆ ನಿರ್ವಹಣೆಗೆ ಕೇಂದ್ರದ ಸ್ಪಂದನೆ: ಬರ, ನೆರೆ ಪರಿಸ್ಥಿತಿ ಹಾಗೂ ಕರೊನಾ ಸಂಕಷ್ಟದ ಸಮಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ತಂಡವಾಗಿ ಕಾರ್ಯ ನಿರ್ವಹಿಸಿದ್ದನ್ನು ಜನ ಮೆಚ್ಚಿಕೊಂಡಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಸರ್ಕಾರ ಇದ್ದಾಗಲೂ ನೆರೆ ಬಂದಿದೆ. ನಮ್ಮ ಸರ್ಕಾರ ಎನ್​ಡಿಆರ್​ಎಫ್ ಗೈಡ್​ಲೈನ್ ಪ್ರಕಾರ ಮನೆ ಕಳೆದುಕೊಂಡವರಿಗೆ ತಕ್ಷಣ ಒಂದು ಲಕ್ಷ ರೂ. ಒದಗಿಸಿದೆ. ಕೆಲವೆಡೆ ಹಣ ಪಡೆದು ಮನೆ ನಿರ್ಮಾಣ ಕಾರ್ಯಾರಂಭ ಮಾಡದ ಹಿನ್ನೆಲೆಯಲ್ಲಿ ಎರಡನೇ ಕಂತು ಬಿಡುಗಡೆಯಾಗಿಲ್ಲ. ಇನ್ನು ಕೆಲವೆಡೆ ಜಮೀನಿನ ಸಮಸ್ಯೆ ಎದುರಾಗಿದ್ದು, ಕ್ರಮಬದ್ಧವಾಗಿರುವ ಪ್ರಕರಣಗಳಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯಗೆ ಪ್ರಶ್ನೆ ಮಾಡುವ ಸಾಮರ್ಥ್ಯ ಇರಲಿಲ್ಲವೇ?: ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎನ್ನುವ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ. ನೆರೆ ಸಂತ್ರಸ್ತರಿಗೆ ಯಾರು ಎಷ್ಟು ಸ್ಪಂದಿಸಿದರು ಎನ್ನುವುದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಗೊತ್ತಿರಬೇಕು. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ನಳಿನ್​ಕುಮಾರ್ ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ ನೆರೆ ಬಂದಾಗ ಸಿದ್ದರಾಮಯ್ಯ ಅವರು ಪಕ್ಷದ ಪ್ರಭಾವಿ ಮುಖಂಡರ ಜತೆ ಕೇಂದ್ರ ಸಚಿವರಾಗಿದ್ದ ಚಿದಂಬರಂ ಅವರನ್ನು ಭೇಟಿ ಮಾಡಿದ್ದರು. ಆಗ ಚಿದಂಬರಂ ಒಂದು ನಿಮಿಷವೂ ಉಳಿಯದೆ ಹೊರಟು ಹೋಗಿದ್ದರು. ಸಿದ್ದರಾಮಯ್ಯ ಅವರಿಗೆ ಅಂದು ಅವರನ್ನು ಪ್ರಶ್ನೆ ಮಾಡುವ ಸಾಮರ್ಥ್ಯ ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಚುನಾವಣೆ ಬಂದಾಗ ಮಾತ್ರ ಜಾತಿ ನೆನಪು: ಕಾಂಗ್ರೆಸ್, ಜೆಡಿಎಸ್​ಗೆ ಚುನಾವಣೆಗಳು ಬಂದಾಗ ಮಾತ್ರ ಜಾತಿ ನೆನಪಾಗುತ್ತದೆ. ಚುನಾವಣೆ ಮುಗಿದ ಬಳಿಕ ಅಧಿಕಾರ ಉಳಿಸಿಕೊಳ್ಳುವುದು ಹೇಗೆ ಎನ್ನುವ ಚಿಂತೆ ಶುರುವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಮತ್ತು ಅಭಿವೃದ್ಧಿ ಮಂತ್ರದ ಆಧಾರದ ಮೇಲೆ ಬಿಜೆಪಿ ಚುನಾವಣೆ ಎದುರಿಸುತ್ತಿದೆ ಎಂದು ನಳಿನ್​ಕುಮಾರ್ ಹೇಳಿದರು.

ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್​ನ ಕಾರ್ಯವೈಖರಿಯಿಂದ ಜನ ಬೇಸತ್ತಿದ್ದಾರೆ. ಜೆಡಿಎಸ್ ಅಧಿಕಾರದಲ್ಲಿದ್ದಾಗ ಶಿರಾ ಕ್ಷೇತ್ರದ ಸಮಸ್ಯೆಗಳಿಗೆ ಗಮನ ಕೊಟ್ಟಿಲ್ಲ. ಆ ಬಗ್ಗೆ ಜನರಲ್ಲಿ ಆಕ್ರೋಶವಿದೆ. ಯಡಿಯೂರಪ್ಪ ಸರ್ಕಾರದ ಸಾಧನೆ ಬಗ್ಗೆ ಜನರಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲಿ ಪಕ್ಷ ಹೊಸ ಮುಖಕ್ಕೆ ಆದ್ಯತೆ ಕೊಟ್ಟಿದೆ. ಶಿರಾದಲ್ಲಿ 15ರಿಂದ 20 ಸಾವಿರ, ಆರ್​ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎರಡೂ ಕ್ಷೇತ್ರಗಳಲ್ಲಿ ನಮಗೆ ಕಾಂಗ್ರೆಸ್ ಪ್ರಮುಖ ಪ್ರತಿಸ್ಪರ್ಧಿ. ಎರಡೂ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಕಾಂಗ್ರೆಸ್ ಆರೋಪ ಮಾಡುತ್ತಿದೆಯಷ್ಟೇ. ಆದರೆ ಒಳ ಒಪ್ಪಂದದ ಅವಶ್ಯಕತೆ ನಮಗಿಲ್ಲ. ನಮ್ಮ ಬಳಿ 117 ಸ್ಥಾನವಿದ್ದು, ಸಂಪೂರ್ಣ ಬಹುಮತವಿದೆ ಎಂದರು.

ಕೋಮು ಗಲಭೆ ಸೃಷ್ಟಿಸುವ ಉದ್ದೇಶ: ಬಂಟ್ವಾಳದಲ್ಲಿ ಬಿಜೆಪಿ ಕಾರ್ಯಕರ್ತನ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದಾರೆ. ಇದರ ಹಿಂದೆ ಯಾರ ಕೈವಾಡ ಇದೆ ಎಂಬ ಬಗ್ಗೆ ತನಿಖೆಯಾಗಬೇಕು. ಇದು ವೈಯಕ್ತಿಕ ದ್ವೇಷಕ್ಕೆ ನಡೆದ ಹಲ್ಲೆಯಲ್ಲ. ಹಿಂದೆ ನಡೆದ ಘಟನೆಗಳಂತೆ ಯಾವುದೋ ಸಂಘಟನೆಯ ಕೈವಾಡವಿರುವ ಸಾಧ್ಯತೆ ಇದೆ. ಪಿಎಫ್​ಐ ಅಥವಾ ಎಸ್​ಡಿಪಿಐ ಇರಬಹುದು. ಈಗ ಯಾರ ಹೆಸರನ್ನೂ ಹೇಳುವುದಿಲ್ಲ. ಮತೀಯ ಗಲಭೆ ಸೃಷ್ಟಿಸುವ ಉದ್ದೇಶ ಇದರ ಹಿಂದಿದೆ ಎಂದು ನಳಿನ್​ಕುಮಾರ್ ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net