

ಬೆಂಗಳೂರು: ತಳಸ್ತರದ ಸಮುದಾಯಗಳನ್ನು ಲಕ್ಷ್ಯದಲ್ಲಿಟ್ಟುಕೊಂಡ ವಿಶಿಷ್ಟ, ಎಲ್ಲ ಸಮುದಾಯಗಳಿಗೆ ತಲುಪುವ ವಿನೂತನ ಯೋಜನೆಗಳು ಜಾರಿಯಾಗಿವೆ. ಆದರೂ ರಾಜ್ಯ ಸರ್ಕಾರದ ವರ್ಚಸ್ಸು ನಿರೀಕ್ಷೆಗೆ ತಕ್ಕಂತೆ ವೃದ್ಧಿಯಾಗದಿರುವುದು ಬಿಜೆಪಿ ವರಿಷ್ಠರನ್ನು ಚಿಂತೆಗೆ ದೂಡಿದೆ.
ಕ್ಷೇತ್ರವಾರು ಪಕ್ಷದ ಪರಿಸ್ಥಿತಿ, ಹಾಲಿ-ಮಾಜಿ ಶಾಸಕರು, ಆಕಾಂಕ್ಷಿಗಳ ಜನಪ್ರಿಯತೆ, ಸರ್ಕಾರದ ಬಗ್ಗೆ ಜನಾಭಿಪ್ರಾಯ ಬಗ್ಗೆ ತಮ್ಮದೇ ಮೂಲಗಳಿಂದ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡಿದ್ದಾರೆ. ಈ ಪೈಕಿ ಸರ್ಕಾರದ ಬಗೆಗಿನ ಮಾಹಿತಿಯು ಪಕ್ಷದ ರಾಷ್ಟ್ರೀಯ ನಾಯಕರ ಗಮನಸೆಳೆದು, ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರ್ಚಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಪಷ್ಟ ಸೂಚನೆ: ಪ್ರಸಕ್ತ ಬಜೆಟ್ನಲ್ಲಿ ಘೋಷಿಸಿದ ಕಾರ್ಯಕ್ರಮಗಳ ತ್ವರಿತ ಅನುಷ್ಠಾನಕ್ಕೆ ತಿಂಗಳು ಕಳೆಯುವಷ್ಟರಲ್ಲಿ ಆದೇಶಗಳು ಜಾರಿಯಾಗಿದ್ದು, ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣಾ ಸಮಿತಿ ರಚನೆಯಾಗಿದೆ. ರಾಜ್ಯ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳ ಜತೆಗೆ ಹಲವು ಸುತ್ತಿನ ಸಭೆ ನಡೆಸಿ ಖುದ್ದಾಗಿ ಪ್ರಗತಿ ಪರಿಶೀಲಿಸುವ ಜತೆಗೆ ಕಡತ ವಿಲೇವಾರಿ, ಅಭಿವೃದ್ಧಿ ವೇಗ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದಿಷ್ಟ ಸೂಚನೆ ನೀಡಿರುವುದು ಸಮಾಧಾನ ತಂದಿದೆ. ಆಡಳಿತದ ಮುಖ್ಯಸ್ಥರಾಗಿ ಮುಖ್ಯಮಂತ್ರಿಗೆ ಹೆಚ್ಚಿನ ಜವಾಬ್ದಾರಿಯಿರುತ್ತದೆ. ಅದರಂತೆಯೇ ಕರ್ತವ್ಯ ನಿರ್ವಹಿಸಿದ್ದರೂ ಬಹುತೇಕ ಸಚಿವ ಸಹೋದ್ಯೋಗಿಗಳು ನಿರ್ಲಿಪ್ತತೆ ಅಡ್ಡಿಯಾಗಿದೆ ಎಂಬ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಿಎಂ ಪತ್ರ
ಯೋಜನೆ, ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಯೋಜನೆಗಳ ಲಾಭದ ವಿಚಾರಕ್ಕೆ ಬಂದಾಗ ಇದೇ ಮಾತು ಅನ್ವಯಿಸದು. ಇದರಿಂದಾಗಿ ಸರ್ಕಾರದ ವರ್ಚಸ್ಸು ವೃದ್ಧಿಸುತ್ತಿಲ್ಲ ಎಂದು ವರಿಷ್ಠರು ಬೊಮ್ಮಾಯಿಗೆ ಬೊಟ್ಟು ಮಾಡಿ ತೋರಿಸಿದ್ದಾರೆ. ಉಳಿದಿರುವ ಅಲ್ಪಾವಧಿಯಲ್ಲಿ ಅಭಿವೃದ್ಧಿ ಕಾಮಗಾರಿ ಅನುಷ್ಠಾನದ ವೇಗ ಹೆಚ್ಚಿಸಿದರೆ ವರ್ಚಸ್ಸು ವೃದ್ಧಿಗೆ ನೆರವಾಗಲಿದೆ ಎಂದು ಸಿಎಂಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಚಿವ ಸಹೋದ್ಯೋಗಿಗಳಿಗೆ ಬೊಮ್ಮಾಯಿ ಪತ್ರ ಬರೆದು, ಆಯಾ ಇಲಾಖೆ ಪ್ರಗತಿ ಪರಿಶೀಲಿಸಿ, ಮಾಧ್ಯಮಗಳಿಗೆ ಮಾಹಿತಿ ನೀಡಿ ವ್ಯಾಪಕ ಪ್ರಚಾರ ಮಾಡಲು ಸಲಹೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಚುನಾವಣೆ ಮೂಡ್ನಲ್ಲಿ ಇಲಾಖೆ ಜವಾಬ್ದಾರಿ ಮರೆತರೆ ಕಷ್ಟವಾಗಲಿದೆ. ಪ್ರತಿನಿಧಿಸುತ್ತಿರುವ ಕ್ಷೇತ್ರದ ಜತೆಗೆ ಇಲಾಖೆ ಕೆಲಸದತ್ತಲೂ ಗಮನವಿಟ್ಟರೆ ಅಧಿಕಾರಿಗಳು ಮೈಯೆಲ್ಲ ಕಣ್ಣಾಗಿ ಕೆಲಸ ಮಾಡಲು ಸಾಧ್ಯವಿದೆ ಎಂದು ಬೊಮ್ಮಾಯಿ ತಾಕೀತು ಮಾಡಿದ್ದಾರೆ.
ವರಿಷ್ಠರ ಟಾಸ್ಕ್