ರಾಮೋಜಿಗೌಡರ ಭರ್ಜರಿ ಚುನಾವಣಾ ಪ್ರಚಾರ, ಮತಭೇಟೆ

Published on

ಬೆಂಗಳೂರು:
ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡಿರುವ ರಾಮೋಜಿಗೌಡರು ಬೆಂಗಳೂರು ನಗರದಾದ್ಯಂತ ಮತಭೇಟೆ ಆರಂಭಿಸಿದ್ದಾರೆ.
ನಿನ್ನೆ ಬೆಂಗಳೂರಿನ ಲಗ್ಗೇರಿಯ ಮಂಜುಶ್ರೀ ಕಲ್ಯಾಣ ಮಂಟಪದಲ್ಲಿ ಜರುಗಿದ ಬೆಂಗಳೂರು ಪದವೀಧರ ಮತದಾರರು/ಶಿಕ್ಷಕರು/ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ನಾನು ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದಂತಹ ವ್ಯಕ್ತಿಯಲ್ಲ, ಸಾಮಾನ್ಯ ಕುಟುಂಬದಿಂದ ಬಂದಿದ್ದು, ಬೆಂಗಳೂರು ಪದವೀಧರ ಮತದಾರರ ನಂಬಿಕೆಯನ್ನು
ಉಳಿಸಿಕೊಳ್ಳುವೆ ಎಂದರು.
ನೀವು ನೀಡುವ ಪ್ರತಿ ಮತಗಳ ಮೌಲ್ಯ ತಿಳಿದಿದ್ದು ಅದಕ್ಕೆ ಗೌರವ ತರುವ ರೀತಿಯಲ್ಲಿ ಕೆಲಸ
ಮಾಡುವೆನೆಂದು ತಿಳಿಸಿ ಎಲ್ಲರ ಆಶೀರ್ವಾದ ಬೆಂಬಲ ಕೋರಿದರು.
ಬೆಂಗಳೂರು ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಹನುಮಂತರಾಯಪ್ಪ ಮಾತನಾಡಿ, ರಾಮೋಜಿಗೌಡರು ಪದವೀಧರ ಕ್ಷೇತ್ರಕ್ಕೆ ಅತ್ಯಂತ ಅರ್ಹ ವ್ಯಕ್ತಿಯಾಗಿದ್ದು, ನಮ್ಮ ಜಿಲ್ಲೆಯಲ್ಲಿ ಎಲ್ಲರೂ ಸಾಂಘಿಕ ಹೋರಾಟದ ಮೂಲಕ ಪುಟ್ಟಣ್ಣರವರನ್ನು ಗೆಲ್ಲಿಸಿದ ಮಾದರಿಯಲ್ಲಿಯೇ ರಾಮೋಜಿಗೌಡ ರವರನ್ನು ಗೆಲ್ಲಿಸೋಣ ಎಂದರು.
ರಾಜ್ಯದ ಶಿಕ್ಷಕರ ಸೆಲ್‌ನ ಅಧ್ಯಕ್ಷರಾದ ಬಸವರಾಜ ಗುರಿಕಾರ ರವರು ಮಾತನಾಡಿ ರಾಜ್ಯದಲ್ಲಿ ಪದವೀಧರರಿಗೆ ಈ ಹಿಂದೆ ಸ್ಟೈಫಂಡರಿ ನೀಡಿ ಖಾಯಂಗೊಳಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಈಗ ಯುವನಿಧಿ ಮೂಲಕ ಪದವೀಧರರಿಗೆ ನ್ಯಾಯವನ್ನು ಒದಗಿಸುತ್ತಿದ್ದಾರೆ. ಕಾರಣ ಸರ್ಕಾರದ ಜೊತೆ ರಾಮೋಜಿಗೌಡರು ಉತ್ತಮ ಬಾಂಧವ್ಯ ಹೊಂದಿದ್ದು ಅವರನ್ನು ಗೆಲ್ಲಿಸುವುದರಿಂದ
ಪದವೀಧರ ಕ್ಷೇತ್ರಕ್ಕೆ ಹೆಮ್ಮೆಯಾಗಲಿದೆ ಎಂದರು.
ನಿವೃತ್ತ ಉಪನಿರ್ದೇಶಕರಾದ ಗಂಗಮಾರೇಗೌಡರು ಮಾತನಾಡಿ ಮತಗಳನ್ನು, ಮಗಳನ್ನು ಯೋಗ್ಯರಿಗೆ ಮಾತ್ರ ನೀಡಬೇಕು,ರಾಮೋಜಿಗೌಡರು ಪದವೀಧರರ ಮತವನ್ನು
ಪಡೆಯುವ ಎಲ್ಲಾ ಯೋಗ್ಯತೆಯನ್ನು ಹೊಂದಿದ್ದು, ಈ ಸಾಮಾನ್ಯ ಕುಟುಂಬದಿಂದ ಬಂದಿರುವ ನಾನು ಬೆಂಗಳೂರು ಪದವೀಧರ ಕ್ಷೇತ್ರದ ಮತದಾರರ ನಂಬಿಕೆಯನ್ನು
ಉಳಿಸಿಕೊಳ್ಳಲಿದ್ದಾರೆ ಎಂದರು.
ಈ ಬಾರಿ ರಾಮೋಜಿಗೌಡ ಅವರ ಶ್ರಮಕ್ಕೆ ಫಲ ಸಿಗುವ ರೀತಿಯಲ್ಲಿ ತಾವೆಲ್ಲ ಆಶೀರ್ವದಿಸಿ ನಿಮ್ಮ ಸೇವೆಗೆ ಅವಕಾಶ ಕಲ್ಪಿಸಬೇಕೆಂದು ಕೋರಿದರು.
ಸಭೆಯನ್ನು ಉದ್ದೇಶಿಸಿ ಆರ್‌ಆರ್ ನಗರ ಕೆಪಿಸಿಸಿಯ ಸದಸ್ಯರಾದ ಬೆಟ್ಟಸ್ವಾಮಿಗೌಡ ಹಾಗೂ ಹಲರು ಮಾತನಾಡಿದರು. ಸಾವಿರಾರು ಮತದಾರರು ಭಾಗವಹಿಸಿದ ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರಾದ ಅಮರನಾಥ, ಮಾಜಿ ಬಿಬಿಎಂಪಿ ಸದಸ್ಯರಾದ ಸಿದ್ದೇಗೌಡ, ಒಬಿಸಿ
ಅಧ್ಯಕ್ಷರಾದ ರವಿಕುಮಾರ್, ಲಗ್ಗೇರೆ ವಾರ್ಡ್ ಅಧ್ಯಕ್ಷರಾದ ಪಾರ್ಥಗೌಡ ಕಾಂಗ್ರೆಸ್ ಮುಖಂಡರುಗಳಾದ ರಮೇಶ್‌ಗೌಡ, ರಘುಗೌಡ, ಗಿರಿಗೌಡ, ಮಂಜಣ್ಣ, ರಘು,
ಪದವಿಪೂರ್ವ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷರಾದ ತಿಮ್ಮಯ್ಯ ಪುರ್ಲೆ, ನಿವೃತ್ತ ಉಪನಿರ್ದೇಶಕರಾದ ಜಯರಂಗ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮುನಿರೆಡ್ಡಿ, ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ವಿ.ಎಂ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net