ರಾಜ್ಯ ಒಕ್ಕಲಿಗ ಸಂಘ ಚುನಾವಣೆಯಲ್ಲಿ ಶೇ.71 ಮತದಾನ; ಬ್ರಾಹ್ಮಣ ಮಹಾಸಭಾದಲ್ಲಿ ಶೇ. 26 ವೋಟಿಂಗ್..

Vokkaligara Sangha
Published on

ಬೆಂಗಳೂರು: ರಾಜ್ಯ ಒಕ್ಕಲಿಗ ಸಂಘದ ಕಾರ್ಯಕಾರಿ ಸಮಿತಿಯ 35 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಅಂದಾಜು ಶೇ.71 ಮತದಾನವಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದೆ ಸರಾಗವಾಗಿ ಈ ಬಾರಿ ಚುನಾವಣೆ ಮುಗಿದಿದೆ. ಬುಧವಾರ (ಡಿ.15) ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ ಮತ್ತು ರಾಮನಗರದಲ್ಲಿ 141, ಮೈಸೂರು 9, ಮಂಡ್ಯ 16, ಹಾಸನ 11, ತುಮಕೂರು 7, ಚಿತ್ರದುರ್ಗ 5, ಕೋಲಾರ ಮತ್ತು ಚಿಕ್ಕಬಳ್ಳಾಪುರ 12, ದಕ್ಷಿಣ ಕನ್ನಡ ಮತ್ತು ಉಡುಪಿ 3, ಕೊಡಗು 4, ಶಿವಮೊಗ್ಗ ಮತ್ತು ಉತ್ತರ ಕನ್ನಡ 9 ಹಾಗೂ ಚಿಕ್ಕಮಗಳೂರಿನಲ್ಲಿ 4 ಸೇರಿ 13 ಜಿಲ್ಲೆಗಳಿಂದ 221 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 5,20,721 ಮತದಾರರಿದ್ದು, 3,71,679 ಮತ ಚಲಾವಣೆಯಾಗಿವೆ. 1,049 ಮತಗಟ್ಟೆ ಸ್ಥಾಪಿಸಲಾಗಿತ್ತು. ಬೆಂಗಳೂರು. ಬೆಂ.ಗ್ರಾಮಾಂತರ ಮತ್ತು ರಾಮನಗರದಲ್ಲಿ ಮತಪತ್ರದಲ್ಲಿ ಅಭ್ಯರ್ಥಿಗಳ ಕ್ರಮಸಂಖ್ಯೆ ಮತ್ತು ಹೆಸರು ಮುದ್ರಿಸಲಾಗಿತ್ತು. ಇತರ ಜಿಲ್ಲೆಗಳಲ್ಲಿ ಹೆಸರು, ಕ್ರಮಸಂಖ್ಯೆ ಮತ್ತು ಚಿಹ್ನೆ ಇತ್ತು. ಆಯಾ ಜಿಲ್ಲೆಗಳಲ್ಲಿ ಆಯ್ಕೆಯಾಗಬೇಕಿರುವ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮತದಾರರು ಮತ ಚಲಾಯಿಸಿದರು.

ಅವಕಾಶ ವಂಚಿತರು!: ಸಂಘದ ಗುರುತಿನ ಚೀಟಿ ಹೊಂದಿದ್ದವರಿಗೆ ಮತದಾನ ಮಾಡಲು ಅವಕಾಶ ನೀಡಿದ್ದರಿಂದ ಜಿಲ್ಲಾ ಕೇಂದ್ರ ತುಮಕೂರಿನಲ್ಲಿ ನೂರಾರು ಮಂದಿ ಸಂಘದ ಗುರುತಿನ ಚೀಟಿ ಇಲ್ಲದ ಕಾರಣ ಮತದಾನ ಅವಕಾಶದಿಂದ ವಂಚಿತರಾದರು. ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್ ಇದ್ದರೂ ಸಂಘದ ಐಡಿ ಕಾರ್ಡ್ ಇಲ್ಲದವರಿಗೆ ಚುನಾವಣಾಧಿಕಾರಿಗಳು ಅವಕಾಶ ನೀಡಲಿಲ್ಲ. ಇನ್ನು ಗ್ರಾಮೀಣ ಭಾಗದಲ್ಲಿ ಮತದಾರರನ್ನು ಕರೆತರಲು ಬಸ್, ಕಾರು ಸೇರಿದಂತೆ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

ಬ್ರಾಹ್ಮಣ ಮಹಾಸಭೆ, ಶೇ.26 ವೋಟಿಂಗ್

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷ ಸ್ಥಾನಕ್ಕಾಗಿ ಐದು ಜಿಲ್ಲಾ ಕೇಂದ್ರಗಳಲ್ಲಿ ಭಾನುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಅಂದಾಜು ಶೇ.30 ಮತದಾನವಾಗಿದೆ. ಮೈಸೂರು, ಹಾಸನ, ಶಿವಮೊಗ್ಗ, ಹುಬ್ಬಳ್ಳಿ, ರಾಯಚೂರು ಕೇಂದ್ರಗಳಲ್ಲಿ 25 ಜಿಲ್ಲೆಗಳ ಮತದಾರರು ಹಕ್ಕು ಚಲಾಯಿಸಿದರು. ಹಾಸನದಲ್ಲಿ ಒಟ್ಟು 619, ರಾಯಚೂರಿನಲ್ಲಿ 376, ಹುಬ್ಬಳ್ಳಿಯಲ್ಲಿ 355, ಮೈಸೂರಿನಲ್ಲಿ 1221, ಶಿವಮೊಗ್ಗದಲ್ಲಿ 1083 ಮತಗಳು ಚಲಾವಣೆಯಾಗಿವೆ. ಅಧ್ಯಕ್ಷ ಸ್ಥಾನಕ್ಕೆ ಎಸ್. ರಘುನಾಥ್, ಅಶೋಕ್ ಹಾರನಹಳ್ಳಿ ಹಾಗೂ ಆರ್. ಲಕ್ಷ್ಮೀಕಾಂತ್ ಸ್ಪರ್ಧಿಸಿದ್ದಾರೆ. ಭಾನುವಾರ ಚುನಾವಣೆ ನಡೆದ ಜಿಲ್ಲೆಗಳಲ್ಲಿ ಅಂದಾಜು 14 ಸಾವಿರ ಮತದಾರರಿದ್ದರೂ ಕೇವಲ 3,654 ಮತ ಚಲಾವಣೆ ಆಗಿ, ಚುನಾವಣೆ ನೀರಸವೆನಿಸಿದೆ.

ಬೆಂಗಳೂರಿನಲ್ಲಿ 19ಕ್ಕೆ ಚುನಾವಣೆ: ಎರಡನೇ ಹಂತದಲ್ಲಿ ಡಿ.19ರಂದು ಬೆಂಗಳೂರಿನ ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ಚುನಾವಣೆ ನಡೆಯಲಿದೆ. ಬೆಂಗಳೂರು ನಗರ. ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ತುಮಕೂರಿನ ಮತದಾರರು ಅಂದು ಮತ ಚಲಾಯಿಸಲಿದ್ದಾರೆ.

ಅಭ್ಯರ್ಥಿಗಳ ಮತಗಟ್ಟೆ ಪ್ರವೇಶಕ್ಕೆ ಆಕ್ಷೇಪ!: ಮೈಸೂರು ನಗರದಲ್ಲಿ ಮತದಾನದ ವೇಳೆ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದ ಮುಖಂಡರ ನಡುವೆ ಕೆಲಕಾಲ ಗೊಂದಲ ಏರ್ಪಟ್ಟು ಮಾತಿನ ಚಕಮಕಿಗೂ ಕಾರಣವಾಯಿತು. ಮತಗಟ್ಟೆ ಬಳಿಗೆ ಅಭ್ಯರ್ಥಿಗಳಾದ ಅಶೋಕ್ ಹಾರನಹಳ್ಳಿ, ಲಕ್ಷ್ಮೀಕಾಂತ್ ಬಂದಾಗ ಮತಗಟ್ಟೆ ಒಳಗೆ ಬಿಡಬೇಡಿ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಬೆಂಬಲಿಗರು, ಕೆಲ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net