ರಂಗೇರಿದ ನೌಕರರ ಸಂಘದ ಚುನಾವಣೆ; ತೆರೆಮರೆಯಲ್ಲಿ ರಾಜಕೀಯ ಮೇಲಾಟ

Government Workers Association
Published on

ಬೆಂಗಳೂರು: ರಾಜ್ಯಾದ್ಯಂತ ಸರ್ಕಾರಿ ನೌಕರರ ಸಂಘದ ಚುನಾವಣೆ ಪ್ರಕ್ರಿಯೆ ಆರಂಭವಾಗಿ ವಿವಿಧ ಹಂತದಲ್ಲಿ ಆಯ್ಕೆಗಳು ನಡೆದಿರುವ ನಡುವೆಯೂ ಚುನಾವಣೆಗೆ ತಡೆ ಹಾಕುವ ಪ್ರಯತ್ನ ಸಾಗಿದ್ದು, ತೆರೆಮರೆಯಲ್ಲಿ ರಾಜಕೀಯ ಮೇಲಾಟ ನಡೆದಿದೆ.

ಮತದಾರರ ಪಟ್ಟಿ ವಿಚಾರದಲ್ಲೇ ಆಕ್ಷೇಪ ಎತ್ತಿ ಕೋರ್ಟ್ ಮೆಟ್ಟಿಲೇರಿದ್ದ ಎರಡೂ ಪ್ರಕರಣಗಳಲ್ಲಿ ಚುನಾವಣೆಗೆ ತಡೆ ತರುವ ಪ್ರಯತ್ನ ವಿಫಲವಾಗಿದೆ. ಚುನಾವಣೆ ಪ್ರಕ್ರಿಯೆ ಆರಂಭವಾಗಿರುವ ಕಾರಣ ತಡೆಯಾಜ್ಞೆ ನೀಡಲು ನ್ಯಾಯಾಲಯ ನಿರಾಕರಿಸಿದೆ. ಅ. 14ರಂದು ಮತ್ತೊಂದು ಪ್ರಕರಣ ಕೋರ್ಟ್ ಮುಂದೆ ಬರಲಿದೆ.

ತಡೆ ಪ್ರಯತ್ನವೇಕೆ?: ಹಾಲಿ ಆಡಳಿತ ಮಂಡಳಿ ಅವಧಿ 2024ರ ಆಗಸ್ಟ್ 17ರಂದು ಮುಗಿದಿದ್ದು, ಆಡಳಿತಾಧಿಕಾರಿ ನೇಮಿಸಿ ಎಂಬುದು ಕೆಲವರ ಒತ್ತಾಯವಾಗಿತ್ತು. ಸರ್ಕಾರಕ್ಕೂ ಈ ಕುರಿತು ಮನವಿ ಸಲ್ಲಿಸಲಾಗಿತ್ತು. ಆದರೆ, ಸಂಘದ ಬೈಲಾ ಪ್ರಕಾರ ವಿಶೇಷ ಸಂದರ್ಭದಲ್ಲಿ ಒಂದು ವರ್ಷ ಅವಧಿ ವಿಸ್ತರಿಸಲು ಅವಕಾಶವಿದೆ. ಇನ್ನೊಂದು ಸಂಗತಿ ಎಂದರೆ ವೇತನ ಆಯೋಗ ಜಾರಿ ಮಾಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮ ಆಯೋಜಿಸುವ ಕಾರಣ ಒಂದು ತಿಂಗಳು 9 ದಿನ ಕಾಲಾವಧಿ ವಿಸ್ತರಿಸಿಕೊಳ್ಳಲಾಗಿತ್ತು. ಇಷ್ಟರ ನಡುವೆಯೂ ಚುನಾವಣೆ ಮತದಾರರ ಪಟ್ಟಿ ಸಿದ್ಧಪಡಿಸುವ ಕೆಲಸ ಜೂನ್​ನಲ್ಲೇ ಆರಂಭವಾಗಿತ್ತು. ಸೆಪ್ಟೆಂಬರ್ ನಾಲ್ಕನೇ ವಾರದಲ್ಲಿ ಅಧಿಸೂಚನೆಯೂ ಹೊರಟು ನಾಮಪತ್ರ ಸ್ವೀಕರಿಸುವ ಕಾರ್ಯ ಆರಂಭವಾಯಿತು.

ಇದಕ್ಕೂ ಮೊದಲು ಕರಡು ಮತದಾರರ ಪಟ್ಟಿ ಪ್ರಕಟಣೆ, ಆಕ್ಷೇಪಣೆ ಆಹ್ವಾನ, ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಕಾರ್ಯವೂ ನಡೆದಿದೆ. ರಾಜ್ಯಾದ್ಯಂತ 5.20 ಲಕ್ಷ ಮತದಾರರು ಪಟ್ಟಿಯಲ್ಲಿದ್ದಾರೆ. ಚುನಾವಣೆ ಪ್ರಕ್ರಿಯೆ ಆರಂಭವಾಗಿ ಬೆಂಗಳೂರು ಜಿಲ್ಲಾ ವ್ಯಾಪ್ತಿಯ 102 ಸ್ಥಾನಗಳಲ್ಲಿ 42 ಮಂದಿ ಅವಿರೋಧ ಆಯ್ಕೆಯಾಗಿದ್ದು, ಅವರಲ್ಲಿ ಬಹುತೇಕರು ಹಾಲಿ ರಾಜ್ಯ ಪರಿಷತ್ ಬೆಂಬಲಿಸುವವರು ಎಂದರಿತು, ಎದುರಾಳಿ ಬಣ ಮತದಾರರ ಪಟ್ಟಿಗೆ ತಗಾದೆ ತೆಗೆದು ಕೋರ್ಟ್ ಮೆಟ್ಟಿಲೇರಿತು.

ಕೋರ್ಟ್ ನಿರ್ದೇಶನ: ಚುನಾವಣೆ ಪ್ರಕ್ರಿಯೆ ಆರಂಭವಾಗಿರುವ ಕಾರಣ ಒಂದಿಬ್ಬರಿಗೋಸ್ಕರ ಚುನಾವಣೆ ಮುಂದೂಡುವುದು ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಇನ್ನೊಂದು ಕೋರ್ಟ್​ನಲ್ಲಿ, ಮತದಾರರ ಪಟ್ಟಿ ಮಾಡುವ ಪ್ರಕ್ರಿಯೆ ಸರಿಯಾದ ಕ್ರಮದಲ್ಲಿ ನಡೆದಿರುವುದು ಹಾಗೂ ಆಕ್ಷೇಪಣೆ ಸಲ್ಲಿಸಲೂ ಅವಕಾಶ ಕೊಟ್ಟಿದ್ದರಿಂದ ಈ ಹಂತದಲ್ಲಿ ತಡೆ ಕೊಡುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಿದ್ದರೆ ಅದರ ದೃಢೀಕರಣ ಸಲ್ಲಿಸುವಂತೆ ಸೂಚಿಸಿತು. ಆಕ್ಷೇಪಣೆ ಎತ್ತಿದವರಿಗೆ ಅದು ಸಾಧ್ಯವಾಗದೇ ಹೋಯಿತು.

ಒತ್ತಡ ತಂತ್ರ: ಚುನಾವಣೆಗೆ ತಡೆ ಹಾಕುವ ಪ್ರಯತ್ನ ಫಲಿಸದ ಕಾರಣ ಆಡಳಿತಾಧಿಕಾರಿ ನೇಮಕ ಮಾಡಿಸುವಲ್ಲಿ ಹಾಲಿ ಆಡಳಿತ ಮಂಡಳಿಯ ಎದುರಾಳಿ ಬಣ ಸಫಲವಾಯಿತು. ಆದರೆ, ಚುನಾವಣೆ ಪ್ರಕ್ರಿಯೆ ಆರಂಭವಾದ ಮೇಲೆ ಆಡಳಿತಾಧಿಕಾರಿ ನೇಮಕ ತೀರ್ಮಾನ ಎಷ್ಟು ಸರಿ, ಅಂತಹ ಇತಿಹಾಸವೇ ಇಲ್ಲ ಎಂಬ ವಾದವಿದೆ. ಹಣಕಾಸು ಅವ್ಯವಹಾರ, ಭ್ರಷ್ಟಾಚಾರದಂತಹ ಸಂದರ್ಭದಲ್ಲಿ ಆಡಳಿತಾಧಿಕಾರಿ ನೇಮಕ ಸಹಜ. ಇಲ್ಲಿ ಅಂತಹ ಕಾರಣಕ್ಕಾಗಿ ನೇಮಕ ಮಾಡಿಲ್ಲ. ಚುನಾಯಿತ ಮಂಡಳಿ ಅವಧಿ ಮುಗಿದಿದೆ ಎಂದು ನೇಮಕ ಮಾಡಲಾಗಿದೆ. ಹೀಗೆ ನೇಮಕ ಮಾಡಲು ಅವಕಾಶ ಇಲ್ಲ. ವಿಧಾನಸಭೆ ಚುನಾವಣೆ ಅಧಿಸೂಚನೆ ಬಳಿಕ ರಾಜ್ಯಪಾಲರ ಆಡಳಿತಕ್ಕೆ ಅವಕಾಶ ಮಾಡಿಕೊಟ್ಟಂತೆ. ಹೀಗಾಗಿ ಸಂಘದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾದ ನಂತರ ಆಡಳಿತಾಧಿಕಾರಿ ನೇಮಕ ಅಸಿಂಧು ಎಂದು ಹೇಳಲಾಗುತ್ತಿದೆ. ಇದೇ ವಿಚಾರ ಅ.14ರಂದು ಕೋರ್ಟ್ ಮುಂದೆ ಬರಲಿದೆ.

ಆಡಳಿತಾಧಿಕಾರಿ ಕರ್ತವ್ಯ: ಚುನಾವಣೆ ಪ್ರಕ್ರಿಯೆ ಆರಂಭವಾಗಿರುವ ಕಾರಣ ಆಡಳಿತಾಧಿಕಾರಿಯೂ ಮತದಾರರ ಪಟ್ಟಿ ವಿಚಾರದಲ್ಲಿ ಏನೂ ಮಾಡಲು ಅಧಿಕಾರ ಇರುವುದಿಲ್ಲ. ಈ ಅವಧಿಯಲ್ಲಿ (ಚುನಾವಣೆ) ಸಂಘದ ಅಧ್ಯಕ್ಷರಿಗೆ ಇರುವ ಅಧಿಕಾರಗಳಾದ ನೌಕರರ ವೇತನ ಪಾವತಿ, ಚುನಾವಣೆ ವೆಚ್ಚ ನಿರ್ವಹಣೆ ಕೆಲಸಗಳನ್ನಷ್ಟೇ ಮಾಡಬಹುದಾಗಿದೆ.

ಬಲಾಬಲ: ತಾಲೂಕು ಘಟಕಗಳ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ತಾಲೂಕು ಹಾಗೂ ಜಿಲ್ಲಾ ಘಟಕ ಸೇರಿ ಒಂದು ಸಾವಿರಕ್ಕೂ ಅಧಿಕ ಮಂದಿ ಆಯ್ಕೆ ಪ್ರಕ್ರಿಯೆ ಈ ಮೂಲಕ ನಡೆಯಲಿದೆ. ಅವರೆಲ್ಲರೂ ರಾಜ್ಯ ಪರಿಷತ್ ಅಧ್ಯಕ್ಷ ಹಾಗೂ ಖಜಾಂಚಿಯನ್ನು ಆಯ್ಕೆ ಮಾಡುವರು. ಬೆಂಗಳೂರು ನಗರದ 102 ರಾಜ್ಯ ಪರಿಷತ್ ಸದಸ್ಯರ ಚುನಾವಣೆಯಲ್ಲಿ 51 ಸ್ಥಾನಕ್ಕೆ ಪ್ರಕ್ರಿಯೆ ಮುಗಿದಿದೆ. ಇದರಲ್ಲಿ 43 ಮಂದಿ ಆಯ್ಕೆಯಾಗಿದ್ದು, 41 ಪ್ರತಿನಿಧಿಗಳು ಷಡಾಕ್ಷರಿ ಬಣದವರಾಗಿದ್ದಾರೆ. ಅ.9ರವರೆಗೆ 8 ಘಟಕಗಳಿಗೆ ಚುನಾವಣೆ ನಡೆದಿದ್ದು, 7 ಮಂದಿ ಷಡಾಕ್ಷರಿ ಪರವಾಗಿದ್ದಾರೆ.

ಸ್ಪಷ್ಟವಾಗದ ಪ್ರತಿಸ್ಪರ್ಧಿ: ರಾಜ್ಯ ಪರಿಷತ್ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ತಂಡ ಪುನಃ ಅವಕಾಶಕ್ಕಾಗಿ ಮತದಾರರ ಮುಂದೆ ಹೊರಟಿದೆ. ಇವರ ಎದುರಾಳಿ ಯಾರೆಂಬುದು ಸ್ಪಷ್ಟವಾಗಿಲ್ಲ. ನಿರ್ದಿಷ್ಟವಾಗಿ ಇಂತಹವರ ನೇತೃತ್ವ ಎಂಬುದು ಖಚಿತವಾಗಿಲ್ಲ. ಕೆಲವು ಹೆಸರು ಕೇಳಿಬಂದರೂ ಅವರೂ ಘೋಷಿಸಿಕೊಂಡಿಲ್ಲ.

ಗೊಂದಲ ಏಕೆ?

1 ಕರಡು ಮತದಾರರ ಪಟ್ಟಿ ಪ್ರಕಟಿಸಿದಾಗ ಆಕ್ಷೇಪಣೆ ಸಲ್ಲಿಸದೆ ಈಗ ಆಕ್ಷೇಪ

2 ನಾಮಪತ್ರ ಸಲ್ಲಿಕೆ ಆರಂಭ ಆದ ಮೇಲೆ ಮತದಾರರ ಪಟ್ಟಿ ಸೇರ್ಪಡೆಗೆ ಅವಕಾಶವಿಲ್ಲ

3 ಆಡಳಿತ ಮಂಡಳಿ ಬಲ ಹೆಚ್ಚಾಗುತ್ತಿರುವುದರಿಂದ ಒಳರಾಜಕೀಯ ತೀವ್ರ

4 ಆಡಳಿತಾಧಿಕಾರಿ ನೇಮಕಕ್ಕೆ ಅವಕಾಶ ಇಲ್ಲವಾದರೂ ಸರ್ಕಾರದ ಮೇಲೆ ಒತ್ತಡ

ನಿಯಮಬದ್ಧವಾಗಿ ಚುನಾವಣೆ ಪೂರ್ವ ಪ್ರಕ್ರಿಯೆ ನಡೆದಿದೆ. ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸದವರು ಈಗ ದನಿ ಎತ್ತುತ್ತಿದ್ದಾರೆ. ನ್ಯಾಯಾಲಯ ಸೂಚಿಸಿದರಷ್ಟೇ ಮತದಾರರ ಪಟ್ಟಿ ಸೇರ್ಪಡೆಗೆ ಅವಕಾಶ ಇರುತ್ತದೆ.

| ಸಿ.ಎಸ್.ಷಡಾಕ್ಷರಿ, ಅಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net