

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನ ಹಾಗೂ ವಿಧಾನ ಪರಿಷತ್ಗೆ ಶಿಕ್ಷಕ - ಪದವೀಧರ ಕ್ಷೇತ್ರಗಳಿಂದ ತಲಾ ಎರಡು ಸ್ಥಾನಗಳಿಗೆ ಚುನಾವಣೆ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಇದರೊಂದಿಗೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸಾಗಲಿವೆ. ಇತ್ತೀಚೆಗಷ್ಟೇ ವಿಧಾನಸಭೆಯಿಂದ ವಿಧಾನ ಪರಿಷತ್ನ ಏಳು ಸ್ಥಾನಗಳಿಗೆ ವೇಳಾಪಟ್ಟಿ ಪ್ರಕಟಿಸಲಾಗಿತ್ತು.
ರಾಜ್ಯಸಭೆ ಸ್ಥಾನ: ರಾಜ್ಯಸಭೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೆ.ಸಿ. ರಾಮಮೂರ್ತಿ, ಕಾಂಗ್ರೆಸ್ನ ಜಯರಾಂ ರಮೇಶ್ ಹಾಗೂ ಇತ್ತೀಚೆಗೆ ನಿಧನರಾದ ಆಸ್ಕರ್ ಫರ್ನಾಂಡೀಸ್ ಅವಧಿ ಜೂ.30ಕ್ಕೆ ಮುಕ್ತಾಯವಾಗುತ್ತಿದೆ. ಆ ಸ್ಥಾನಗಳಿಗೆ ವಿಧಾನಸಭೆಯಿಂದ ಜೂ. 10 ರಂದು ಚುನಾವಣೆ ನಡೆಯಲಿದೆ.
ಪರಿಷತ್ ಕಣ: ವಿಧಾನ ಪರಿಷತ್ಗೆ ವಾಯವ್ಯ ಪದವೀಧರ ಕ್ಷೇತ್ರದಿಂದ ಹನುಮಂತ ನಿರಾಣಿ, ದಕ್ಷಿಣ ಪದವೀಧರ ಕ್ಷೇತ್ರದಿಂದ ಕೆ.ಟಿ. ಶ್ರೀಕಂಠೇಗೌಡ, ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಅರುಣ ಶಹಪೂರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸಭಾಪತಿ ಬಸವರಾಜ ಹೊರಟ್ಟಿ ನಿವೃತ್ತರಾಗುತ್ತಿದ್ದಾರೆ. ಆ ಸ್ಥಾನಗಳಿಗೆ ಜೂ. 13 ರಂದು ಮತದಾನ ನಡೆಯಲಿದೆ.
ನೀತಿ ಸಂಹಿತೆ: ವಿಧಾನಪರಿಷತ್ ಚುನಾವಣೆ ನಡೆಯುವ ಜಿಲ್ಲೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಗುರುವಾರದಿಂದಲೇ ಜಾರಿಗೆ ಬಂದಿದೆ.
ರಾಜ್ಯಸಭೆಯಲ್ಲಿ ಯಾರಿಗೆ ಎಷ್ಟು ಸ್ಥಾನ?: ರಾಜ್ಯಸಭೆಯಲ್ಲಿ ಒಂದು ಸ್ಥಾನ ಗೆಲ್ಲಲು 46 ಮತ ಅಗತ್ಯವಿದೆ. ವಿಧಾನಸಭೆ ಸಂಖ್ಯಾಬಲದಲ್ಲಿ ಬಿಜೆಪಿ ಎರಡು ಸ್ಥಾನ ಗೆಲ್ಲಬಹುದು. ಮೂರನೇ ಸ್ಥಾನಕ್ಕೆ 15 ಮತಗಳ ಕೊರತೆ ಇದೆ. ಕಾಂಗ್ರೆಸ್ ಒಂದು ಸ್ಥಾನ ಸುಲಭವಾಗಿ ಗೆಲ್ಲಬಹುದು. ಆದರೆ 2ನೇ ಸ್ಥಾನಕ್ಕೆ 16 ಮತಗಳ ಕೊರತೆ ಇದೆ. ಜೆಡಿಎಸ್ಗೆ ಒಂದು ಸ್ಥಾನ ಗೆಲ್ಲುವುದಕ್ಕೂ 14 ಮತಗಳ ಕೊರತೆ ಇದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಎರಡು ರಾಷ್ಟ್ರೀಯ ಪಕ್ಷಗಳ ಪರೋಕ್ಷ ಬೆಂಬಲ ಪಡೆದಿದ್ದರಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸುಲಭವಾಗಿ ಗೆಲುವು ಸಾಧಿಸಿದರು. ಆದರೆ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ತಂತ್ರ ಕಾದು ನೋಡಬೇಕಾಗಿದೆ.
ಮರು ಆಯ್ಕೆ: ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ಮರು ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿವೆ. ಉಳಿದಂತೆ ಕೆ.ಸಿ. ರಾಮಮೂರ್ತಿ ಬಿಟ್ಟು ಪಕ್ಷದ ಕಾರ್ಯಕರ್ತರೊಬ್ಬರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳುತ್ತವೆ. ಕಾಂಗ್ರೆಸ್ನಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ರಾಜ್ಯದಿಂದ ಆಯ್ಕೆ ಮಾಡಲು ರಾಜ್ಯ ಮುಖಂಡರು ಉತ್ಸುಕರಾಗಿದ್ದಾರೆ. ಅವರು ಒಪ್ಪದಿದ್ದಲ್ಲಿ ಜಯರಾಂ ರಮೇಶ್ ಮರು ಆಯ್ಕೆಯ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಹಣವಂತರಿಗೆ ಅವಕಾಶ: ರಾಜ್ಯದಿಂದ ರಾಜ್ಯಸಭೆಗೆ ಉದ್ಯಮಿಗಳು ಗೆಲುವು ಸಾಧಿಸಿರುವುದು ಹಲವು ಚುನಾವಣೆಗಳಲ್ಲಿ ನಡೆದಿದೆ. ಈ ಬಾರಿಯೂ ಬಂಡವಾಳ ಹೂಡಲು ಸಿದ್ಧವಿರುವವರು ಮೂರು ಪಕ್ಷಗಳ ವಿಶ್ವಾಸ ಪಡೆದು ರಾಜ್ಯಸಭೆಗೆ ಆಯ್ಕೆಯಾದರೂ ಅಚ್ಚರಿ ಇಲ್ಲ.
ಅಭ್ಯರ್ಥಿಗಳ ಆಯ್ಕೆ: ಕಾಂಗ್ರೆಸ್ ವಿಧಾನ ಪರಿಷತ್ಗೆ ತನ್ನ ಅಭ್ಯರ್ಥಿಗಳನ್ನು ಈಗಾಗಲೇ ಆಯ್ಕೆ ಮಾಡಿದೆ. ಬಿಜೆಪಿ ಪಶ್ಚಿಮ ಶಿಕ್ಷಕರ ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳಿಗೆ ಆಯ್ಕೆ ಮಾಡಿದೆ. ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರಲಿದ್ದು, ಅವರನ್ನೇ ಈ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.
ನವದೆಹಲಿ: ರಾಜ್ಯಸಭೆಯಲ್ಲಿ ಖಾಲಿ ಇರುವ ಮತ್ತು ಜೂನ್ನಿಂದ ಆಗಸ್ಟ್ ಅವಧಿಯಲ್ಲಿ ನಿವೃತ್ತರಾಗಲಿರುವ 57 ಸ್ಥಾನಗಳಿಗೆ (ಕರ್ನಾಟಕದ 4 ಸ್ಥಾನ ಸೇರಿ) ಜೂ.10ರಂದು ಚುನಾವಣೆ ನಡೆಯಲಿದೆ. ನಿವೃತ್ತರಾಗುವ ಪ್ರಮುಖರಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ಮುಖ್ತರ್ ಅಬ್ಬಾಸ್ ನಕ್ವಿ, ಕಾಂಗ್ರೆಸ್ನ ಪಿ.ಚಿದಂಬರಂ, ಅಂಬಿಕಾ ಸೋನಿ, ಕಪಿಲ್ ಸಿಬಲ್, ಪ್ರಫುಲ್ ಪಟೇಲ್, ಶಿವಸೇನೆಯ ಸಂಜಯ್ ರಾವತ್, ಬಿಎಸ್ಪಿಯ ಸತೀಶ್ ಚಂದ್ರ ಮಿಶ್ರಾ, ಆರ್ಜೆಡಿಯ ಮೀಸಾ ಭಾರತಿ ಸೇರಿದ್ದಾರೆ.
ಉತ್ತರ ಪ್ರದೇಶದ 11, ತಮಿಳುನಾಡು ಮತ್ತು ಮಹಾರಾಷ್ಟ್ರ ತಲಾ ಆರು, ಬಿಹಾರ 5, ಆಂಧ್ರಪ್ರದೇಶ, ರಾಜಸ್ಥಾನ, ಕರ್ನಾಟಕದ ತಲಾ 4, ಮಧ್ಯಪ್ರದೇಶ, ಒಡಿಶಾದ ತಲಾ 3, ಛತ್ತೀಸ್ಗಢ, ತೆಲಂಗಾಣ, ಪಂಜಾಬ್, ಜಾರ್ಖಂಡ್ ಮತ್ತು ಹರಿಯಾಣಗಳಿಂದ ತಲಾ 2 ಹಾಗೂ ಉತ್ತರಾಖಂಡದಿಂದ ಒಂದು ಸ್ಥಾನಕ್ಕೆ ಆಯ್ಕೆ ನಡೆಯಲಿದೆ.