

ಕೊಲ್ಕತಾ : ಕೇಂದ್ರೀಯ ಪಾರಾಮಿಲಿಟರಿ ಪಡೆಗಳ ಬಗ್ಗೆ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಸಿಎಂ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ನೋಟೀಸು ಜಾರಿ ಮಾಡಿದೆ. 'ಸಂಪೂರ್ಣವಾಗಿ ಸುಳ್ಳು ಮತ್ತು ಉದ್ರೇಕಕಾರಿಯಾಗಿರುವ ಹೇಳಿಕೆಗಳ' ಬಗ್ಗೆ ನಾಳೆ ಬೆಳಿಗ್ಗೆ 11 ಗಂಟೆಯೊಳಗೆ ವಿವರಣೆ ನೀಡಬೇಕೆಂದು ಆಯೋಗ ಸೂಚಿಸಿದೆ.
ಮಾರ್ಚ್ 28 ಮತ್ತು ಏಪ್ರಿಲ್ 7 ರಂದು ಬ್ಯಾನರ್ಜಿ ಅವರು, ಸಿಆರ್ಪಿಎಫ್ ಪಡೆಗಳು ಕೇಂದ್ರ ಬಿಜೆಪಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿವೆ. ಗ್ರಾಮಸ್ಥರ ಮೇಲೆ ಶೋಷಣೆ ನಡೆಸುತ್ತಿವೆ ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಈ ಬಗ್ಗೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮಾಡಿರುವುದಾಗಿ ಆಯೋಗ ನೋಟೀಸು ನೀಡಿದೆ. ಈ ಮುನ್ನ ಬ್ಯಾನರ್ಜಿ ಅವರು ಅಲ್ಪಸಂಖ್ಯಾತರನ್ನುದ್ದೇಶಿಸಿ ಆಡಿದ ಮಾತುಗಳ ಬಗ್ಗೆಯೂ ಆಯೋಗ ನೋಟೀಸು ಜಾರಿಗೊಳಿಸಿತ್ತು.
ನೋಟೀಸು ನೀಡಿದ ಕೆಲವು ಗಂಟೆಗಳ ನಂತರ ಪೂರ್ಬ ಬರ್ಧಮಾನ್ ಜಿಲ್ಲೆಯ ಜಮಲಪುರದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ ಬ್ಯಾನರ್ಜಿ, "ಸಿಆರ್ಪಿಎಫ್ನವರು ಬಿಜೆಪಿ ಪರ ಕೆಲಸ ಮಾಡುವುದನ್ನು ನಿಲ್ಲಿಸುವ ತನಕ ಅವರ ಹಸ್ತಕ್ಷೇಪದ ಬಗ್ಗೆ ಮಾತನಾಡುವುದನ್ನು ನಾನು ಮುಂದುವರಿಸುತ್ತೇನೆ. ಆ ಕೆಲಸ ನಿಲ್ಲಿಸಿದ ಮೇಲೆ ಪಡೆಗಳಿಗೆ ಸೆಲ್ಯೂಟ್ ಮಾಡುತ್ತೇನೆ. ನಿಮ್ಮ(ಆಯೋಗದ) ಶೋಕಾಸ್ ಪತ್ರಗಳ ಬಗ್ಗೆ ನನಗೆ ಚಿಂತೆ ಇಲ್ಲ" ಎಂದು ಹೇಳಿಕೆ ನೀಡಿದ್ದಾರೆ.
ಚುನಾವಣಾ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಗಾಳದಲ್ಲಿ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ಹಮ್ಮಿಕೊಂಡಿದ್ದರ ಬಗ್ಗೆ ಆಯೋಗ ನೀತಿ ಸಂಹಿತೆಯ ಉಲ್ಲಂಘನೆಯ ಮಾತೆತ್ತುತ್ತಿಲ್ಲ. ಹಾಗಾಗಿ ತಾವೂ ಮತದಾನದ ದಿನ ಪ್ರಚಾರ ಕಾರ್ಯ ನಡೆಸುವುದಾಗಿ ಬ್ಯಾನರ್ಜಿ ಹೇಳಿದ್ದಾರೆ. (ಏಜೆನ್ಸೀಸ್)