ರಸಗೊಬ್ಬರ : ಬೆಲೆ ಹೆಚ್ಚಿಸದಿರಲು ಕೇಂದ್ರ ಸರ್ಕಾರದ ಸೂಚನೆ

man
Published on

ನವದೆಹಲಿ : ರಸಗೊಬ್ಬರಗಳ ಬೆಲೆಯನ್ನು ಹೆಚ್ಚಿಸಬಾರದು ಎಂದು ಭಾರತ ಸರ್ಕಾರ ರಸಗೊಬ್ಬರ ಉತ್ಪದಾಕ ಕಂಪೆನಿಗಳಿಗೆ ಹೇಳಿರುವುದಾಗಿ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನಸುಖ್​ ಮಾಂಡವೀಯ ಹೇಳಿದ್ದಾರೆ.

ಡೈ ಅಮೋನಿಯಂ ಫಾಸ್ಫೇಟ್ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಕೆಲವು ಕಂಪನಿಗಳು ಮಾರುಕಟ್ಟೆಯಲ್ಲಿ ರಸಗೊಬ್ಬರದ ಬೆಲೆಯನ್ನು ಹೆಚ್ಚಿಸಿವೆ ಎಂಬ ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಉತ್ಪಾದಕರೊಂದಿಗೆ ಇಂದು ಸಭೆ ನಡೆಸಿದ ಸಚಿವರು, "ಪ್ರಸ್ತುತ ಸಂದರ್ಭಗಳಲ್ಲಿ ರಸಗೊಬ್ಬರಗಳ ಬೆಲೆಯಲ್ಲಿ ತಕ್ಷಣದ ಹೆಚ್ಚಳ ಮಾಡದಿರುವಂತೆ ನಿರ್ಧರಿಸಲಾಗಿದೆ" ಎಂದು ಹೇಳಿದರು.

ಜಾಗತಿಕ ಮಾರುಕಟ್ಟೆಯಲ್ಲಿ ಪೊಟ್ಯಾಶ್ ಮತ್ತು ಫಾಸ್ಫೇಟ್ ಬೆಲೆಗಳು ಮೇಲಕ್ಕೇರಿದ ನಂತರ ರಸಗೊಬ್ಬರ ಕಂಪೆನಿಗಳು ಈ ವಾರ ಮೂರನೇ ಒಂದು ಭಾಗಕ್ಕಿಂತ ಹೆಚ್ಚಾಗಿ ಬೆಲೆ ಏರಿಸಿದ್ದವು ಎಂದು ವರದಿಗಳು ಸೂಚಿಸಿದ್ದವು.

ಇಂದು ಷೇರು ಮಾರುಕಟ್ಟೆಯಲ್ಲಿ ದೀಪಕ್ ಫರ್ಟಿಲೈಸರ್ಸ್​​ನ ಷೇರುಗಳ ಬೆಲೆ ಶೇ 3.63 ರಷ್ಟು, ರಾಮ ಫಾಸ್ಫೇಟ್ಸ್​​​ನ ಷೇರುಗಳು ಶೇ .2.73 ರಷ್ಟು, ರಾಷ್ಟ್ರೀಯ ಕೆಮಿಕಲ್ಸ್​ ಅಂಡ್​ ಫರ್ಟಿಲೈಸರ್ಸ್​ ಕಂಪೆನಿಯ ಷೇರುಗಳು ಶೇ. 3 ರಷ್ಟು ಮತ್ತು ಎಸ್‌ಪಿಐಸಿಯ ಷೇರುಗಳು ಶೇ 3.3 ರಷ್ಟು ಕುಸಿದಿವೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net