ಚುನಾವಣಾ ಪ್ರಚಾರ: ನಡ್ಡಾ, ಅಮಿತ್ ಷಾ ರಾಜ್ಯ ಪ್ರವಾಸ

amith shah
Published on

ಬೆಂಗಳೂರು: ಲೋಕಸಭೆ ಎರಡನೇ ಹಂತದ ಚುನಾವಣಾ ಸಮರಾಂಗಣದಲ್ಲಿ ಪ್ರಚಾರದ ಕಾವೇರಿದೆ. ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಮುಗಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಂಗಳವಾರ, ಕೇಂದ್ರ ಗೃಹ ಸಚಿವ ಅಮಿತ್ ಷಾ ಬುಧವಾರ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಶಿವಮೊಗ್ಗ ನಗರದ ಪಿಇಎಸ್‌ಐಟಿ ಕಾಲೇಜು ಪ್ರೇರಣಾ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ 11ಕ್ಕೆ ಏರ್ಪಡಿಸಿರುವ ವೃತ್ತಿನಿರತರ ಸಭೆಯಲ್ಲಿ ನಡ್ಡಾ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಕನಕ ಗುರುಪೀಠಕ್ಕೆ ಭೇಟಿ ಕೊಡಲಿದ್ದಾರೆ.

ಬಳಿಕ ಮಧ್ಯಾಹ್ನ 2.50ಕ್ಕೆ ಬ್ಯಾಡಗಿಯ ಗುತ್ತೆಮ್ಮ ದೇವಸ್ಥಾನದಿಂದ ಸುಭಾಷ್ ವೃತ್ತದವರೆಗೆ ರೋಡ್ ಶೋನಲ್ಲಿ ಭಾಗವಹಿಸಿ, ಸಂಜೆ 4.45ಕ್ಕೆ ಹುಬ್ಬಳ್ಳಿಯಿಂದ ದೆಹಲಿಗೆ ಮರು ಪ್ರಯಾಣ ಬೆಳೆಸುವರು.

ಅಮಿತ್ ಷಾ ಎರಡು ಕಡೆ ಪ್ರಚಾರ

ಛತ್ತೀಸಗಡ, ಮಧ್ಯಪ್ರದೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಚುನಾವಣಾ ಪ್ರಚಾರ ಮುಗಿಸಿ, ಬುಧವಾರ ಮಧ್ಯಾಹ್ನ 3.15ಕ್ಕೆ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.

ಹಾವೇರಿ ಲೋಕಸಭೆ ಕ್ಷೇತ್ರದ ರಾಣೆಬೆನ್ನೂರಿನಲ್ಲಿ ಸಂಜೆ 4ಕ್ಕೆ ಕುರುಬಗಿರಿ ಅಡ್ಡರಸ್ತೆಯಿಂದ ಅಶೋಕ್ ವೃತ್ತದವರೆಗೆ ನಡೆಯಲಿರುವ ರೋಡ್ ಶೋನಲ್ಲಿ ಪಾಲ್ಗೊಳ್ಳುವರು. ಹೆಲಿಕಾಪ್ಟರ್‌ನಲ್ಲಿ ಸಂಜೆ 5.35ಕ್ಕೆ ಹುಬ್ಬಳ್ಳಿಗೆ ವಾಪಸ್ಸಾಗಲಿದ್ದಾರೆ.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಸಂಜೆ 5.45ಕ್ಕೆ ಏರ್ಪಡಿಸಿರುವ ಸಾರ್ವಜನಿಕ ಸಭೆಯಲ್ಲಿ ಧಾರವಾಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರವಾಗಿ ಮತ ಪ್ರಚಾರ ನಡೆಸಲಿದ್ದಾರೆ. ನಂತರ ರಾತ್ರಿ 7.10ಕ್ಕೆ ಹುಬ್ಬಳ್ಳಿಯಿಂದ ವಿಶೇಷ ವಿಮಾನದಲ್ಲಿ ಹೈದರಾಬಾದ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ನೇಹಾ ಮನೆಗೆ ಭೇಟಿ ಅನುಮಾನ

ಜೆ.ಪಿ.ನಡ್ಡಾ ಬಳಿಕ ಬಿಜೆಪಿ ಮತ್ತೊಬ್ಬ ರಾಷ್ಟ್ರೀಯ ನಾಯಕ ಹತ್ಯೆಯಾದ ವಿದ್ಯಾರ್ಥಿನಿ ನೇಹಾ ಮನೆಗೆ ಭೇಟಿ ನೀಡಿ, ನೊಂದ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ ಎನ್ನಲಾಗಿತ್ತು.

ಅಮಿತ್ ಷಾ ಅವರ ಬಿಡುವಿಲ್ಲದ ವೇಳಾಪಟ್ಟಿ ಗಮನಿಸಿದರೆ ನೇಹಾ ಮನೆಗೆ ಭೇಟಿ ನೀಡುವುದು ಅನುಮಾನವೆಂದು ಹೇಳಲಾಗುತ್ತಿದ್ದು, ಹುಬ್ಬಳ್ಳಿ ಕಾರ್ಯಕ್ರಮಕ್ಕೆ ಒಂದು ತಾಸು ಕಾಲಾವಕಾಶ ನೀಡಿರುವುದು ಈ ಸಂಶಯಕ್ಕೆ ಕಾರಣ.

ಈ ವೇಳಾ ಪಟ್ಟಿ ಪ್ರಕಾರ ಅಮಿತ್ ಷಾ ಅವರ ಪ್ರಯಾಣ ಹುಬ್ಬಳ್ಳಿ, ಹಾವೇರಿ, ವಾಪಸ್ ಹುಬ್ಬಳ್ಳಿ ನಂತರ ಹೈದರಾಬಾದ್‌ಗೆ ನಿಗದಿಯಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲೇ ಮಧ್ಯಾಹ್ನದ ಊಟ ಮಾಡಲಿದ್ದು, ಪ್ರಯಾಣದ ನಡುವೆ ವಿರಾಮವೂ ಇಲ್ಲ.

ರಾಜ್ಯ, ಸ್ಥಳೀಯ ನಾಯಕರ ಕೋರಿಕೆ ಮೇರೆಗೆ ಕೊನೆ ಹಂತದಲ್ಲಿ ಅಮಿತ್ ಷಾ ರಾಜ್ಯ ಪ್ರವಾಸದ ವೇಳಾಪಟ್ಟಿ ಪರಿಷ್ಕರಣೆಯಾಗಬಹುದು ಎಂದು ಹೇಳಲಾಗುತ್ತಿದೆ. ಲೋಕ ಅಖಾಡದಲ್ಲಿ ನೇಹಾಸ ಪ್ರಖರವಾಗಿ ಬಳಕೆಯಾಗುತ್ತಿದ್ದರೆ, ಈ ವಿಷಯದಲ್ಲಿ ಬಿಜೆಪಿ ಒಂದು ಹೆಜ್ಜೆ ಮುಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net