ಆದಾಯ ವೃದ್ಧಿ ಖುಷಿ; ವೆಚ್ಚ ಹೆಚ್ಚಳದ ಕಸಿವಿಸಿ | ಬೊಮ್ಮಾಯಿಗೆ ಚುನಾವಣಾ ಬಜೆಟ್ ಸವಾಲು

Bud
Published on

ಮೃತ್ಯುಂಜಯ ಕಪಗಲ್
ಬೆಂಗಳೂರು: ರಾಜ್ಯದ ಮತ್ತೊಂದು ಬಜೆಟ್​ಗೆ ದಿನಗಣನೆ ಶುರುವಾಗಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹೊಸ್ತಿಲಲ್ಲೇ 2023-24ನೇ ಸಾಲಿನ ಬಜೆಟ್ ಮಂಡನೆಯಾಗುತ್ತಿರುವ ಕಾರಣ ನಿರೀಕ್ಷೆಯ ಭಾರವೂ ಹೆಚ್ಚಿರುವುದು ಸಹಜ. ಕರೊನೋತ್ತರ ಕಾಲಘಟ್ಟವು ಆರ್ಥಿಕತೆಗೆ ಹೊಸ ಆಯಾಮ ನೀಡಿದೆ. ಉತ್ಪಾದನೆ, ತಯಾರಿಕೆ, ವ್ಯಾಪಾರ-ವಹಿವಾಟು, ಆತಿಥ್ಯ, ಪ್ರವಾಸೋದ್ಯಮ ಹೀಗೆ ಬೊಕ್ಕಸಕ್ಕೆ ಆದಾಯ ತರುವ ಎಲ್ಲ ಮೂಲಗಳು ಚೇತೋಹಾರಿಯಾಗಿವೆ. ಆರ್ಥಿಕತೆ ವೃದ್ಧಿ, ತೆರಿಗೆ ಸಂಗ್ರಹ ಏರುಮುಖದ ಹಾದಿಯಲ್ಲಿದ್ದರೂ ಅಭಿವೃದ್ಧಿ ಮತ್ತು ಬದ್ಧತಾ ವೆಚ್ಚಗಳ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ಸಾಲದ ಮೇಲೆ ಅವಲಂಬನೆ ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಆದಾಯ ವೃದ್ಧಿಯು ಹಣಕಾಸು ಹೊಣೆ ಹೊತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಖುಷಿ ತಂದಿದೆ. ಅದೇ ಕಾಲಕ್ಕೆ ಸಾಮಾಜಿಕ ಭದ್ರತಾ ಯೋಜನೆ, ಬದ್ಧತಾ ವೆಚ್ಚಗಳ ಪರಿಷ್ಕರಣೆ, ಹೆಚ್ಚುವರಿ ಜನಪ್ರಿಯ ಯೋಜನೆಗಳಿಂದ ವೆಚ್ಚ ಹೆಚ್ಚಳದ ಕಸಿವಿಸಿಯಿದೆ. ಕೇಂದ್ರ ಸರ್ಕಾರ ನೀಡುತ್ತಿದ್ದ ಜಿಎಸ್​ಟಿ ತೆರಿಗೆ ಪರಿಹಾರ ಕಳೆದ ಜೂನ್​ಗೆ ಸ್ಥಗಿತವಾಗಿದೆ. ಜತೆಗೆ ಪ್ರಸಕ್ತ ಬಜೆಟ್ (2022-23)ನಲ್ಲಿ ಹೊಸ ತೆರಿಗೆ ಪ್ರಸ್ತಾಪಿಸಿಲ್ಲ, ಯಾವುದೇ ತೆರಿಗೆ ಹೆಚ್ಚಿಸಿಲ್ಲ. ಗುರಿ ಮೀರಿ 15 ಸಾವಿರ ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹ ಸಾಧ್ಯತೆಗಳಿದ್ದರೂ ಸರ್ಕಾರಕ್ಕೆ ಸಮಾಧಾನವಿಲ್ಲ.

ವೇಗದ ಆದೇಶ, ಅನುಷ್ಠಾನ ಮಂದ

ಬಜೆಟ್ ಘೋಷಣೆಗಳು ಕಾಗದದಲ್ಲೇ ಉಳಿಯುವುದು ಹೆಚ್ಚು ಎಂಬ ಆರೋಪದಿಂದ ಮುಕ್ತವಾಗಲು ಈ ಬಾರಿ ವೇಗದ ಸ್ಪರ್ಶ ನೀಡಿ, ಆಯ್ದ ಇಲಾಖೆಗಳ ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ತಿಂಗಳೊಳಗೆ ಆದೇಶ ಹೊರಡಿಸುವ ಮಹತ್ವದ ತೀರ್ವನವನ್ನು ಸಿಎಂ ಕೈಗೊಂಡಿದ್ದರು. ಇದರ ಫಲವಾಗಿ ಪರಿಶಿಷ್ಟ ಜಾತಿ, ಪಂಗಡಗಳ ಉಪ ಯೋಜನೆಯಡಿ ಮೀಸಲಿಟ್ಟ 28,234 ಕೋಟಿ ರೂ.ಗಳ ಪೈಕಿ ಶೇ.75ರಷ್ಟು ಅನುದಾನ ಜನವರಿಯೊಳಗೆ ಮಂಜೂರಾಗಿದೆ. ಬಡ್ಡಿ ರಿಯಾಯಿತಿ ಯೋಜನೆಯಡಿ ಬೆಳೆ ಸಾಲಕ್ಕೆ ಕಾಲಮಿತಿಯಿದೆ. 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ನೀಡುವಲ್ಲಿ ನಿರೀಕ್ಷಿತ ಪ್ರಗತಿಯಾಗಿದೆ. ಆದರೆ ರೈತಶಕ್ತಿ ಯೋಜನೆಯಡಿ ಪ್ರತಿ ಹೆಕ್ಟೇರ್​ಗೆ ತಲಾ 250 ರೂ.ನಂತೆ ಗರಿಷ್ಠ 1,250 ರೂ. ಡೀಸೆಲ್ ಸಹಾಯಧನ ಜನವರಿಯಲ್ಲಿ ಅನುಷ್ಠಾನವಾಗಿದೆ. ಭೌತಿಕ ಹಾಗೂ ಆರ್ಥಿಕ ಪ್ರಗತಿ ಮಧ್ಯೆ ಅಜಗಜಾಂತರವಿದೆ. ಅನುದಾನ ಮಂಜೂರು, ಬಿಡುಗಡೆ ಭಿನ್ನವಾಗಿದೆ. ಭೌತಿಕ ಪ್ರಗತಿಯು ಸಲ್ಲಿಕೆಯಾದ ಬಿಲ್ ಆಧರಿಸಿದ್ದರೆ, ಆರ್ಥಿಕ ಪ್ರಗತಿಯು ಬಿಲ್ ಪಾವತಿ ಅವಲಂಬಿತವಾಗಿದ್ದು, ವ್ಯತ್ಯಾಸ ಸಹಜವೆಂಬುದು ಆರ್ಥಿಕ ಇಲಾಖೆ ಮೂಲಗಳ ಸಮಜಾಯಿಷಿ.

ಸಾಲದ ಸುಳಿ

ಜಿಎಸ್​ಟಿ ಪರಿಹಾರ ಹಿಂಬಾಕಿ ಮೊತ್ತ 12,101 ಕೋಟಿ ರೂ. ಪಾವತಿಯತ್ತ ಪದೇಪದೆ ಗಮನಸೆಳೆದಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ತೆರಿಗೆ ಸಂಗ್ರಹದಲ್ಲಿ ಆದಾಯ ಏರುಗತಿಗೆ ತಕ್ಕಂತೆ ಜನಪರ ಕಾರ್ಯಕ್ರಮಗಳ ವೆಚ್ಚವೂ ಹೆಚ್ಚಿರುವ ಪರಿಣಾಮ ಸರ್ಕಾರ ಸಾಲದ ಸುಳಿಗೆ ಬಿದ್ದಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೖೆಮಾಸಿಕದಲ್ಲಿ ಸಾಲದ ಗೊಡವೆಗೆ ಹೋಗಿರಲಿಲ್ಲ. ಆದರೆ ನಂತರದ ತ್ರೖೆಮಾಸಿಕಗಳಲ್ಲಿ ಸಾಲ ಎತ್ತುವಳಿ ಮಾಡಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಸಾಲ ಪಡೆದುಕೊಂಡಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಡಿಸೆಂಬರ್ ಅಂತ್ಯದ ವೇಳೆಗೆ 32 ಸಾವಿರ ಕೋಟಿ ರೂ., ಜನವರಿಯಲ್ಲಿ 16 ಸಾವಿರ ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಫೆಬ್ರವರಿಯಲ್ಲಿ 12 ಸಾವಿರ ಕೋಟಿ ರೂ ಮತ್ತು ಮಾರ್ಚ್​ನಲ್ಲಿ 8 ಸಾವಿರ ಕೋಟಿ ರೂ. ಸಾಲ ಪಡೆಯಲು ತೀರ್ವನಿಸಿದೆ. ಇದರೊಂದಿಗೆ ಸಾರ್ವಜನಿಕ ವಲಯದಿಂದ 7,500 ಕೋಟಿ ರೂ. ಸಾಲ ತೆಗೆದುಕೊಂಡಿದ್ದು, ನಿಗದಿತ ಗುರಿ ದಾಟಿ ಮೂರು ಸಾವಿರ ಕೋಟಿ ರೂ. ಹೆಚ್ಚುವರಿ ಸಾಲದ ಭಾರ ಏರಿದೆ.

ಇಲಾಖಾವಾರು ಪ್ರಗತಿ

ಜಲ ಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿ 12 ಇಲಾಖೆಗಳ ಸಾಧನೆ ಕಳಪೆಯಾಗಿದ್ದರೆ, ಸಮಾಜ ಕಲ್ಯಾಣ, ಕೃಷಿ ಸಹಿತ ಬೆರಳೆಣಿಕೆ ಇಲಾಖೆಗಳದು ಪರವಾಗಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ, ನಗರಾಭಿವೃದ್ಧಿ, ಅರಣ್ಯ, ವಾಣಿಜ್ಯ ಮತ್ತು ಕೈಗಾರಿಕೆ, ಪ್ರವಾಸೋದ್ಯಮ ಸೇರಿ 10 ಇಲಾಖೆಗಳ ಸಾಧನೆ ಕಳಪೆಯಾಗಿದೆ ಎಂಬುದನ್ನು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ತ್ರೖೆಮಾಸಿಕ ಪ್ರಗತಿ ಪರಿಶೀಲನಾ ವರದಿ ಸಾರುತ್ತದೆ. ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳು, ಕಲ್ಯಾಣ ಕರ್ನಾಟಕ, ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನದ ವಿಶೇಷ ಅಭಿವೃದ್ಧಿ ಯೋಜನೆಗಳು ಹಾಗೂ ಅಮೃತ್ ನಗರೋತ್ಥಾನ ಯೋಜನೆಗಳ ಕಾಮಗಾರಿಗಳು ಟೆಂಡರ್​ನಲ್ಲೇ ಕಾಲ ಕಳೆದಿದ್ದು, ಬಜೆಟ್ ಅವಧಿ ಮುಗಿಯುತ್ತಾ ಬಂದಿದ್ದರೂ ಶೇ.30 ಪ್ರಗತಿ ಸಾಧಿಸಲಷ್ಟೇ ಶಕ್ತವಾಗಿವೆ.

ಚುನಾವಣಾ ನಿರೀಕ್ಷೆ

ರಾಜ್ಯದ ಖಜಾನೆ ತುಂಬಿ ತುಳುಕುತ್ತಿದ್ದರೂ ಚುನಾವಣಾ ಬಜೆಟ್​ನ ನಿರೀಕ್ಷೆ ಸರಿದೂಗಿಸಲು ಆದಾಯವೇ ಸಿಎಂ ಬೊಮ್ಮಾಯಿಗೆ ದೊಡ್ಡ ಸವಾಲಾಗಲಿದೆ. ಕೇಂದ್ರ ಸರ್ಕಾರ ವಿತ್ತೀಯ ಮಿತಿಯನ್ನು ಸ್ವಲ್ಪ ಸಡಿಲಿಸಿದ್ದರೂ ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆ ಷರತ್ತು ಪೂರೈಸಬೇಕಾಗುತ್ತದೆ. ಉದ್ಯಮ-ವಹಿವಾಟು, ಪ್ರವಾಸ, ಆತಿಥ್ಯ ಮುಂತಾದ ಕ್ಷೇತ್ರಗಳಲ್ಲಿ ಚಟುವಟಿಕೆಗಳು ಏರುಮುಖದ ದಾರಿಯಲ್ಲಿದ್ದು, ಜನ-ಸಾಮಾನ್ಯರ ಕೈಯ್ಯಲ್ಲಿ ಹಣ ಓಡಾಡುತ್ತಿದೆ. ದುಡಿಮೆಗೆ ಲಭಿಸಿದ ವಿಪುಲ ಅವಕಾಶಗಳಿಂದ ಖರೀದಿ ಶಕ್ತಿ ಹೆಚ್ಚಿದ್ದು, ಜನರ ದೃಷ್ಟಿಯಲ್ಲಿ ಉಲ್ಲಸಿತ ವಾತಾವರಣವಿದೆ. ಮುಂದಿನ ಚುನಾವಣೆಯಲ್ಲಿ ಪ್ರತಿಪಕ್ಷಗಳನ್ನು ಕಟ್ಟಿ ಹಾಕಿ, ಉತ್ತಮ ಮತ ಫಸಲು ಪಡೆಯುವ ಸನ್ನಾಹದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಬಜೆಟ್ ಚಿಂತೆ ಕಾಡುತ್ತಿದೆ.

ಆದಾಯ ವೃದ್ಧಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ಸ್ವಂತ ತೆರಿಗೆಗಳು ಸೇರಿ ಒಟ್ಟು ರಾಜಸ್ವ ಸ್ವೀಕೃತಿ 1,89,888 ಕೋಟಿ ರೂ. ಅಂದಾಜಿಸಲಾಗಿದ್ದರೆ, 72 ಸಾವಿರ ಕೋಟಿ ರೂ. ಸಾಲ ಪಡೆಯುವ ಗುರಿಯಿಟ್ಟುಕೊಳ್ಳಲಾಗಿದೆ. ಜನವರಿ ಅಂತ್ಯದವರೆಗಿನ ಅಂಕಿ-ಅಂಶಗಳ ಪ್ರಕಾರ ಅಬಕಾರಿ 29 ಸಾವಿರ ಕೋಟಿ ರೂ. ಗುರಿಗೆ ಎದುರಾಗಿ 24,724.27 ಕೋಟಿ ರೂ. ಜಮೆಯಾಗಿದೆ. ವಾಣಿಜ್ಯ ಮತ್ತು ಮಾರಾಟ, ವೃತ್ತಿ ಮತ್ತಿತರ ಬಾಬ್ತಿನಿಂದ 77,010 ಕೋಟಿ ರೂ. ಗುರಿಯಿದೆ. ಈಗಾಗಲೇ 71,722.70 ಕೋಟಿ ರೂ. ಶೇಖರಣೆ ಆಗಿದೆ. ಇದರ ಹೊರತಾಗಿ ನೋಂದಣಿ ಮತ್ತು ಮುದ್ರಾಂಕ 15 ಸಾವಿರ ಕೋಟಿ ರೂ., ಸಾರಿಗೆ 8,007 ಕೋಟಿ ರೂ. ಗುರಿಯಲ್ಲಿ ಶೇ.80ರಷ್ಟು ಪ್ರಗತಿ ಸಾಧಿಸಿದ್ದು, ನಿರೀಕ್ಷೆಗೂ ಮೀರಿ ಆದಾಯ ವೃದ್ಧಿಯಾಗಲಿದೆ ಎಂಬ ಆಶಾಭಾವನೆಯನ್ನು ಸರ್ಕಾರ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net