

ಬೆಂಗಳೂರು:
ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಿಂದಾಗಿ 19 ಸ್ಥಾನ ಗೆದ್ದಿರುವ ಜೋಶ್‌ನಲ್ಲಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರುಗಳು, ತಾಪಂ, ಜಿಪಂ, ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮೈತ್ರಿಯ ಹೆಜ್ಜೆ ಇಡಲು ಗಟ್ಟಿಯಾಗಿ ನಿರ್ಧರಿಸಿವೆ.
ಅರಮನೆ ಆವರಣದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಎನ್‌ಡಿಎ ಸಂಸದರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಉಭಯ ಪಕ್ಷಗಳ ನಾಯಕರು, ಮುಂದೆಯೂ ಮೈತ್ರಿ ರಾಜಕಾರಣವನ್ನೆ ಮುಂದುವರಿಸುವುದಾಗಿ ೋಷಿಸಿದರು.
2006ರಲ್ಲಿಯೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಹೊಸ ರಾಜಕಾರಣ ಪ್ರಾರಂಭವಾಯಿತು. ಅದೇ ಮೈತ್ರಿಯನ್ನು ಮುಂದುವರಿಸಿಕೊಂಡು ಬಂದಿದ್ದರೆ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುತ್ತಿರಲಿಲ್ಲ ಎನ್ನುವುದನ್ನು ವೇದಿಕೆಯಲ್ಲಿ ಪ್ರತಿಪಾದಿಸಲಾಯಿತು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಮತ್ತು ಮಖಂಡರು ಪರಸ್ಪರ ಹೊಂದಾಣಿಕೆಯಿಂದ ಅಭ್ಯರ್ಥಿಗಳ ಗೆಲುವಿಗಾಗಿ ದುಡಿದಿರುವುದನ್ನು ಮತದಾರರು ಪುರಸ್ಕರಿಸಿ ಮತ ನೀಡುವ ಮೂಲಕ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ಪ್ರಸ್ತಾಪಿಸಿದ ನಾಯಕರು, ಗೆಲ್ಲಿಸಿದ ಮತದಾರ ಪ್ರಭುಗಳಿಗೆ ಅಭಿನಂದನೆ ಸಲ್ಲಿಸಿದರು.