ರಸ್ತೆ ಬದಿಯಲ್ಲಿ ಸಿಕ್ಕ ಶಂಕಿತ ಕರೊನಾ ಸೋಂಕಿತ ವೃದ್ಧನ ಶವವನ್ನು ಪ್ಲಾಸ್ಟಿಕ್​ನಲ್ಲಿ ಸುತ್ತಿಟ್ಟು ರಾತ್ರಿಯಿಡೀ ಕಾದ ಇಬ್ಬರು ಪೊಲೀಸ್​....

Coronavirus Death
Published on

ಹೈದರಾಬಾದ್​: ಶಂಕಿತ ಕರೊನಾ ಸೋಂಕಿತ 77 ವರ್ಷದ ವೃದ್ಧನ ಮೃತದೇಹ ರಸ್ತೆ ಬದಿಯಲ್ಲಿ ಸಿಕ್ಕಿದೆ.
ಈತನ ಅಂಗಿಯ ಜೇಬಿನಲ್ಲಿ ಕೊವಿಡ್​-19 ತಪಾಸಣೆ ಟೆಸ್ಟ್​ ಮಾಡಿಸುವಂತೆ ಸೂಚಿಸಲಾದ ಸ್ಲಿಪ್​ ಕೂಡ ದೊರೆತಿದೆ. ಮೃತದೇಹವನ್ನು ಒಂದು ಪ್ಲಾಸ್ಟಿಕ್​ ಶೀಟ್​ನಲ್ಲಿ ಸುತ್ತಿದ ಪೊಲೀಸರು ಒಂದು ದಿನ ಕಾದರೂ ಯಾವುದೇ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ ಬರಲಿಲ್ಲ.

ಜೇಬಿನಲ್ಲಿ ಸಿಕ್ಕ ಕರೊನಾ ವೈರಸ್​ ತಪಾಸಣಾ ಸ್ಲಿಪ್​ನಿಂದ ವೃದ್ಧನ ಪರಿಚಯ ಪತ್ತೆಯಾಗಿದೆ. ವೃದ್ಧನ ಹೆಸರು ಶೇರ್​ ಬಹದ್ದೂರ್​. ನೇಪಾಳ ಮೂಲದವರಾಗಿದ್ದು, ಹೈದರಾಬಾದ್​ನ ಬಾರ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ನಾರಾಯಣಗುಡಾದ ವೈಎಂಸಿಎಎಕ್ಸ್​ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಗುರುವಾರ ಶೀತ ಮತ್ತು ಜ್ವರ ಕಂಡುಬಂದಿದ್ದರಿಂದ ಲಾಲ್​ಪೇಟ್​ದ ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದರು. ಅವರಲ್ಲಿ ಕರೊನಾ ಲಕ್ಷಣಗಳು ಕಂಡುಬಂದಿದ್ದರಿಂದ ವೈದ್ಯರು ಕಿಂಗ್​ ಕೋಟಿ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು ಹಾಗೇ ಆಂಬುಲೆನ್ಸ್​ ಮೂಲಕ ವೃದ್ಧನನ್ನು ಕಳಿಸಿಕೊಡಲಾಯಿತು.

ಸರ್ಕಾರಿ ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ಅವರ ಆರೋಗ್ಯ ತಪಾಸಣೆ ಮಾಡಿ, ಅಲ್ಲಿಂದ ಕರೊನಾ ವೈರಸ್​ ಟೆಸ್ಟ್​​ಗಾಗಿ ರಾಜೀವ್​ ಗಾಂಧಿ ಹಾಸ್ಪಿಟಲ್​ಗೆ ತೆರಳಲು ವೈದ್ಯರು ಹೇಳಿದರು. ಆದರೆ ಆಂಬುಲೆನ್ಸ್​ ಸಿದ್ಧಗೊಳಿಸುವುದಕ್ಕೂ ಮೊದಲೇ ಅವರು ಆಸ್ಪತ್ರೆಯಿಂದ ಹೊರಹೋಗಿದ್ದರು ಎಂದು ಸಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಅವರು ಆರೋಗ್ಯ ತಪಾಸಣೆಗೆ ಬಂದ ವೇಳೆ ಸುಮಾರು 100 ರೋಗಿಗಳು ಇದ್ದರು. ಹಾಗಾಗಿ ಸ್ವಲ್ಪ ಹೊತ್ತು ಕಾಯಲು ಹೇಳಿದೆವು. ಆಂಬುಲೆನ್ಸ್​ ಕೊಡುತ್ತೇವೆ, ಕಾಯುತ್ತಿರಿ ಎಂದು ಹೇಳಿದರೂ ಯಾಕೆ ಆಸ್ಪತ್ರೆಯಿಂದ ಹೊರಕ್ಕೆ ಹೋದರು ಎಂದು ಗೊತ್ತಿಲ್ಲ. ಇಲ್ಲಿಂದ ರಾಜೀವ್​ ಗಾಂಧಿ ಆಸ್ಪತ್ರೆ ನಾಲ್ಕು ಕಿ.ಮೀ.ದೂರದಲ್ಲಿದೆ. ಬಹುಶ್ಯಃ ನಡೆದುಕೊಂಡೇ ಹೋಗಲು ನಿರ್ಧರಿಸಿದರು ಎನ್ನಿಸುತ್ತದೆ ಎಂದು ಕಿಂಗ್​ ಕೋಟಿ ಸರ್ಕಾರಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಪೊಲೀಸರಿಗೂ ಅದೇ ರೀತಿ ಮಾಹಿತಿ ನೀಡಿದ್ದಾರೆ.

ವೃದ್ಧ ಅಲ್ಲಿಂದ ಹೋಗಿದ್ದರ ಬಗ್ಗೆ ವೈದ್ಯರಿಗೆ ಗಮನ ಇರಲಿಲ್ಲ. ಮರುದಿನ ಅವರ ಮೃತದೇಹ ಸಿಕ್ಕಿದ ಕೂಡಲೇ ನಾವು ವಿಚಾರಣೆ ಮಾಡಿದಾಗಲೇ ಆಸ್ಪತ್ರೆ ಸಿಬ್ಬಂದಿಗೆ ನೆನಪಾಗಿದೆ ಎಂದು ನಾರಾಯಣಗುಡಾ ಠಾಣೆಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ವೃದ್ಧನ ಮೃತದೇಹ ನೋಡಿದ ಸ್ಥಳೀಯರು ನಮಗೆ ಮಾಹಿತಿ ನೀಡಿದರು. ಹೋಗಿ ಪರಿಶೀಲನೆ ನಡೆಸಿದಾಗ ಕೊವಿಡ್​-19 ತಪಾಸಣಾ ಸ್ಲಿಪ್​ ಕಂಡುಬಂತು. ನಾವು ಸಂಬಂಧಪಟ್ಟ ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಿದರೂ ಅವರು ಬೇಗ ಬರಲಿಲ್ಲ. ಅದನ್ನು ಒಂದು ಪ್ಲಾಸ್ಟಿಕ್​ನಲ್ಲಿ ಸುತ್ತಿ ಇಡೀ ರಾತ್ರಿ ಇಬ್ಬರು ಪೇದೆಗಳು ಕಾಯುತ್ತಿದ್ದರು. ಕೊವಿಡ್​ ಟೀಂ ಮರುದಿನ ಬಂದು ಶವವನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಅಧಿಕಾರಿ ಹೇಳಿದ್ದಾರೆ. ಇದೊಂದು ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net