

ಜೈಪುರ: ಅಜ್ಜ ಎಂದರೆ ಹೇಗಿರಬೇಕು? ಮೊಮ್ಮಕ್ಕಳಿಗೆ ಕಥೆ ಹೇಳಿಕೊಂಡು, ಅವರ ಸಂತೋಷವನ್ನು ನೋಡುತ್ತಾ ಕಾಲ ಕಳೆಯಬೇಕು ಎನ್ನುವುದು ಸಾಮಾನ್ಯರ ಕಲ್ಪನೆ. ಆದರೆ ಈ ಅಜ್ಜ ಹಾಗಲ್ಲ. ಹೆಂಡತಿ ಇಲ್ಲದ ನನಗೆ ಎರಡನೇ ಮದುವೆ ಮಾಡಿ ಎಂದು ಹಠ ಬಿದ್ದ ಅಜ್ಜ, ಅದನ್ನು ಮಕ್ಕಳು ಕೇಳದಿದ್ದಾಗ ಎಲೆಕ್ಟ್ರಿಕ್ ಕಂಬವನ್ನೇ ಹತ್ತಿ ಕುಳಿತುಬಿಟ್ಟಿದ್ದಾನೆ.
ಇಂತದ್ದೊಂದು ವಿಚಿತ್ರ ಘಟನೆ ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿ ನಡೆದಿದೆ. 60 ವರ್ಷದ ಸೊಬ್ರಾನ್ ಸಿಂಗ್ನ ಹೆಂಡತಿ ನಾಲ್ಕು ವರ್ಷಗಳ ಹಿಂದೆ ಅಸು ನೀಗಿದ್ದಾಳೆ. ಅವರಿಗೆ ಮೂರು ಗಂಡು ಮಕ್ಕಳು ಮತ್ತಿಬ್ಬರು ಹೆಣ್ಣು ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿದ್ದು, ಮಕ್ಕಳಿದ್ದಾರೆ. ಮೊಮ್ಮಕ್ಕಳೊಂದಿಗೆ ನೆಮ್ಮದಿಯಾಗಿದ್ದ ಸೊಬ್ರಾನ್ಗೆ ಇತ್ತೀಚೆಗೆ ಎರಡನೇ ಮದುವೆ ಹುಚ್ಚು ಆರಂಭವಾಗಿದೆ. ನನಗೆ ಎರಡನೇ ಮದುವೆ ಮಾಡಿ ಎಂದು ಮಕ್ಕಳಲ್ಲಿ ಕೇಳಿದ್ದಾನೆ. ಆದರೆ ಅದಕ್ಕೆ ಮಕ್ಕಳು ಒಪ್ಪಿಲ್ಲ.
ಅದೇ ವಿಚಾರವಾಗಿ ಭಾನುವಾರದಂದು ಮನೆಯಲ್ಲಿ ಜಗಳವಾಗಿದೆ. ಎರಡನೇ ಮದುವೆಯಾಗಲೇಬೇಕೆಂದು ಸೊಬ್ರಾನ್ ಪಟ್ಟು ಹಿಡಿದಿದ್ದರೆ ಅದು ಸಾಧ್ಯವೇ ಇಲ್ಲ ಎಂದು ಮಕ್ಕಳು ವಾದಿಸಿದ್ದಾರೆ. ಸಿಟ್ಟಿನಿಂದ ಮನೆಯಿಂದ ಹೊರನಡೆದ ಸೊಬ್ರಾನ್ ಹಳ್ಳಿಯಲ್ಲಿದ್ದ 11 ಸಾವಿರ ವೋಲ್ಟೇಜ್ನ ಎಲೆಕ್ಟ್ರಿಕ್ ಕಂಬವನ್ನು ಹತ್ತಿ ಕುಳಿತಿದ್ದಾನೆ. ಅದೃಷ್ಟವಶಾತ್ ಆ ಸಮಯದಲ್ಲಿ ಅದರಲ್ಲಿ ವಿದ್ಯುತ್ ಇಲ್ಲದ ಕಾರಣ ಆತನಿಗೆ ಯಾವುದೇ ಸಮಸ್ಯೆಯಾಗಿಲ್ಲ. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹತ್ತಿರದ ವಿದ್ಯುತ್ ಸಂಸ್ಥೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ.
ಸಾಕಷ್ಟು ಸಮಯದ ಕಾಲ ಮಕ್ಕಳು ಮತ್ತು ಗ್ರಾಮಸ್ಥರು ಸಮಾಧಾನ ಮಾಡಿದ ನಂತರ ಸೊಬ್ರಾನ್ ಎಲೆಕ್ಟ್ರಿಕ್ ಕಂಬದಿಂದ ಕೆಳಗಿಳಿದಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್)