ಸಂವಿಧಾನದ ಆಶಯ ಈಡೇರಲಿ: ನ್ಯಾಯಾಧೀಶೆ ಬಿ.ಜಿ. ರಮಾ ಕರೆ,  ಅವಕಾಶ ವಂಚಿತರಿಗೆ ಯೋಜನೆ ತಲುಪಿಸಿ

13-11-rama-Camp
Published on

ರಾಮನಗರ :  ಸಮಾಜದ ಎಲ್ಲ ವರ್ಗದ ಜನರು ಉತ್ತಮ ಜೀವನ ನಡೆಸಬೇಕು ಎನ್ನುವುದು ಸಂವಿಧಾನ ಆಶಯವಾಗಿದ್ದು, ಇದು ಈಡೇರಬೇಕಾದರೆ ಅವಕಾಶ ವಂಚಿತರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವುದು ನಮ್ಮೆಲ್ಲರ ಕೆಲಸವಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಜಿ. ರಮಾ ಕರೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ನಾಲ್ಸಾ ಪ್ಯಾನ್ ಇಂಡಿಯಾ ಅವೇರ್‌ನೆಸ್ ಆ್ಯಂಡ್ ಔಟ್‌ರೀಚ್ ಪ್ರೋಗ್ರಾಮ್ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ, ಉಚ್ಛ ನ್ಯಾಯಾಲಯ ಹಾಗೂ ರಾಷ್ಟೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಕಾನೂನಿನ ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜದ ಎಲ್ಲ ವರ್ಗದ ಜನರಿಗೂ ಕಾನೂನಿನ ಅರಿವು ಮೂಡಿಸಬೇಕು ಎಂದರು.

ಕಾನೂನಿನ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಿಕೊಡಬೇಕು. ಪ್ರಜೆಗಳ ಜೀವನ ಉತ್ತಮಪಡಿಸಲು ಸರ್ಕಾರ ಹಲವಾರು ಯೋಜನಗಳನ್ನು ರೂಪಿಸಿದೆ. ಗಾಂಧಿ ಜಯಂತಿಯಿಂದ ಇಲ್ಲಿಯವರೆಗೆ ಜಿಲ್ಲೆಯ ಪ್ರತಿ ಹಳ್ಳಿಯ ಮನೆ ಮನೆಗೆ ಯಾವುದಾದರೂ ಒಂದು ರೂಪದಲ್ಲಿ ಯೋಜನೆಯ ಮಾಹಿತಿ ತಲುಪಿಸಿ ಕಾನೂನಿನ ಅರಿವು ಕುರಿತು ನ್ಯಾಯಾಲಯ, ವಕೀಲರು, ವಿದ್ಯಾರ್ಥಿಗಳು, ಹಲವಾರು ಸಂಘ ಸಂಸ್ಥೆಗಳು ಹಾಗೂ ಸ್ವಯಂ ಸೇವಕರಿಂದ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸರ್ಕಾರದಿಂದ ಸಿಗುವ ಸೌಲಭ್ಯ ಹಾಗೂ ಕಾನೂನು ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು ಮೆಗಾ ಕ್ಯಾಂಪ್ ಆಯೋಜಿಸಲಾಗಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದರು.ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಜೆ. ಮರುಳಸಿದ್ದಾರಾಧ್ಯ ಮಾತನಾಡಿ, ಸರ್ಕಾರದ ಸೌಲಭ್ಯ ಪಡೆಯಲು ಗುರುತಿನಚೀಟಿ ಮುಖ್ಯ. ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ಗುರುತಿನ ಚೀಟಿ ಬೇಕು. ಈ ಮೆಗಾ ಕ್ಯಾಂಪ್‌ನ ಬಳಕೆ ಮಾಡಿಕೊಂಡು ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳನ್ನು ಪಡೆಯಿರಿ ಎಂದರು.

ಕಾರ್ಯಕ್ರಮದಲ್ಲಿ ಆಧಾರ್‌ಕಾರ್ಡ್, ಮತದಾರರ ಕಾರ್ಡ್, ಪಿಂಚಣಿ ಕಾರ್ಡ್, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ನೋಂದಣಿ ಮತ್ತು ಕಾರ್ಡ್‌ಗಳನ್ನು ವಿತರಿಸಲಾಯಿತು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಎಸ್. ಕುಲಕರ್ಣಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೇಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಪರಿಮಳಾ ತುಬಾಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉನಿರ್ದೇಶಕ ಸಿ.ವಿ.ರಾಮನ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಗವೇಣಿ ಹಾಗೂ ಸಾರ್ವಜನಿಕರು, ವಿದ್ಯಾರ್ಥಿಗಳು, ಇಲಾಖೆ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net