ಉಮೇದುವಾರಿಕೆ ಭರಾಟೆ ಜೋರು : ಇಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನ ಹೊಸ ವರ್ಷಕ್ಕಾಗಿ ಕಾದಿದ್ದ ಆಕಾಂಕ್ಷಿಗಳು

11-02-rama-CMC
Published on

ರಾಮನಗರ :  ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನವಾಗಿದ್ದು, ಉಮೇದುವಾರಿಕೆ ಸಲ್ಲಿಕೆ ಭರಾಟೆ ಜೋರಾಗಿ ನಡೆಯಲಿದೆ.ಜಿಲ್ಲೆಯ ಚನ್ನಪಟ್ಟಣ ಮತ್ತು ರಾಮನಗರ ನಗರಸಭೆಗಳ ತಲಾ 31 ವಾರ್ಡ್‌ಗಳಿಗೆ ಚುನಾವಣೆ ಘೋಷಣೆ ಆಗಿದ್ದು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಆಕ್ಷಾಂಕಿಗಳ ಪಟ್ಟಿ ಹೆಚ್ಚಾದ ಹಿನ್ನೆಲೆಯಲ್ಲಿ ಟಿಕೆಟ್ ನೀಡಿಕೆ ಸಂಬಂಧ ಮುಖಂಡರು ಹಲವಾರು ಬಾರಿ ಚರ್ಚೆಗಳನ್ನು ನಡೆಸಿದ್ದು, ಬುಧವಾರದ ಅಂತಿಮಗೊಂಡ ಆಕಾಂಕ್ಷಿಗಳಿಗೆ ಬಿ ಫಾರ್ಮ್ ವಿತರಣೆ ಕೂಡ ಮಾಡಿದ್ದಾರೆ.

ಹಬ್ಬದ ಅಡ್ಡಿ: ಚುನಾವಣೆ ಅಧಿಸೂಚನೆ ಏ.8ರಂದೇ ಪ್ರಕಟಗೊಂಡಿದ್ದರೂ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಹೆಚ್ಚಾಗಿ ನಡೆಯಲಿಲ್ಲ. ಅಲ್ಲದೆ, ಯುಗಾದಿ ಹಬ್ಬಕ್ಕೂ ಮುನ್ನಾ ಚುನಾವಣೆಗೆ ಸ್ಪರ್ಧಿಸಿದರೆ ಹಿಂದಿನ ವರ್ಷ ಸ್ಪರ್ಧೆ ಮಾಡಿದಂತೆ ಆಗುತ್ತದೆ ಹಾಗೂ ಹೊಸ ವರ್ಷದಲ್ಲಿಯೇ ನಾಮಪತ್ರ ಸಲ್ಲಿಸಬೇಕು ಎನ್ನುವ ಕಾರಣಕ್ಕೆ ಬಹುತೇಕ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಯುಗಾದಿಗೂ ಮುನ್ನ ನಾಮಪತ್ರ ಸಲ್ಲಿಕೆಗೆ ಮುಂದಾಗಿಲ್ಲ.

ಇಂದು ಅಂತಿಮ ದಿನ: ನಾಮಪತ್ರ ಸಲ್ಲಿಕೆಗೆ ಇಂದು ಅಂತಿಮ ದಿನವಾಗಿರುವುರಿಂದ ಈಗಾಗಲೇ ಬಹುತೇಕ ಅಭ್ಯರ್ಥಿಗಳು ಹೊಸ ವರ್ಷದಂದು ಪಡೆದಿರುವ ಬಿ-ಾರ್ಮ್‌ಗಳಿಗೆ ಹಾಗೂ ಸ್ಪರ್ಧೆ ಖಚಿತವಾಗಿರುವ ಅಭ್ಯರ್ಥಿಗಳು ದೇವಾಲಯಗಳಿಗೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಿದ್ದಾರೆ. ಅಲ್ಲದೆ, ಕೆಲವು ಅಭ್ಯರ್ಥಿಗಳಿಗೆ ಇನ್ನೂ ಬಿ-ಾರ್ಮ್ ವಿತರಣೆ ಆಗದೇ ಇರುವ ಕಾರಣ ಅಂತಿಮ ಹಂತದಲ್ಲಿ ಟಿಕೆಟ್ ಕೈತಪ್ಪಿ ಹೋಗಬಹುದು ಎನ್ನುವ ಕಾರಣಕ್ಕೆ ಮುಖಂಡರ ಸುತ್ತ ಸುಳಿದಾಡುತ್ತಾ ಕಾಲ ತಳ್ಳಿದ್ದಾರೆ.

ಬಿಜೆಪಿ ಗೇಮ್ ಪ್ಲಾನ್: ಭಾರತೀ ಜನತಾ ಪಕ್ಷ ಸಹ ನಗರಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಮುಸ್ಲಿಂ ವಾರ್ಡ್‌ಗಳಲ್ಲಿ ಪಕ್ಷದಿಂದ ಸ್ಪರ್ಧಿಸಿದರೆ ಸೋಲು ಗೆಲುವಿನ ಲೆಕ್ಕಾಚಾರವನ್ನು ಬಿಜೆಪಿ ಮಾಡುತ್ತಿದೆ. ಈ ಸಂಬಂಧ ಈಗಾಗಲೇ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ನೇತೃತ್ವದಲ್ಲಿ ಸಭೆಗಳು ನಡೆದಿವೆ. ಒಟ್ಟಾರೆಯಾಗಿ ಇಂದು (ಏ.15) ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿ ನಡೆಯಲಿದ್ದು, ಸ್ಥಳೀಯ ರಾಜಕಾರಣದಲ್ಲಿ ಸಾಕಷ್ಟು ಅದಲು ಬದಲು ಆಗುವ ನಿರೀಕ್ಷೆಯಿದೆ.

ಪಕ್ಷಾಂತರ ಪರ್ವ :  ಇದರ ನಡುವೆ ಕಾಂಗ್ರೆಸ್ - ಜೆಡಿಎಸ್ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಜೋರಾಗಿಯೇ ನಡೆದಿದೆ. ಟಿಕೆಟ್ ದೊರೆಯದೇ ಇರುವ ಕಾರಣಕ್ಕೆ ಪಕ್ಷ ಬದಲಿಸುವ ಕೆಲಸವೂ ನಡೆಯುತ್ತಿದೆ. ಅದರಲ್ಲೂ ಜೆಡಿಎಸ್‌ನಲ್ಲಿ ಗುರ್ತಿಸಿಕೊಂಡಿದ್ದ ಹಾಗೂ ಎಚ್‌ಡಿಕೆ ಕಟ್ಟಾ ಅಭಿಮಾನಿಗಳಾಗಿದ್ದ ಅದೆಷ್ಟೋ ಮಂದಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರೆ, ಕಾಂಗ್ರೆಸ್ ನಿಷ್ಠಾವಂತರು ಜೆಡಿಎಸ್ ಕಡೆ ಮುಖ ಮಾಡಿದ್ದಾರೆ. ಇದರ ನಡುವೆ ಬಿಜೆಪಿ ಸಹ ಕಾದು ನೋಡುವ ತಂತ್ರ ಹೆಣೆದಿದೆ.

ಬೇಡಿಕೆ ಹೆಚ್ಚು : ರಾಮನಗರದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿರುವ ವಾರ್ಡ್‌ಗಳಲ್ಲಿ ಸ್ಪರ್ಧೆಗೆ ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಒಂದೆಡೆ ರಾಮನಗರ ಉಸ್ತುವಾರಿ ಹೊತ್ತಿರುವ ಸಂಸದ ಡಿ.ಕೆ. ಸುರೇಶ್ ಅವರನ್ನು ಪದೇಪದೆ ಭೇಟಿ ಮಾಡುವ ಮೂಲಕ ಟಿಕೆಟ್‌ಗಾಗಿ ದುಂಬಾಲು ಬಿದ್ದಿದ್ದಾರೆ. ಅತ್ತ ಜೆಡಿಎಸ್‌ನಲ್ಲೂ ಇದೇ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಬಿಡದಿಯ ತೋಟದ ಮನೆಯಲ್ಲಿ ಬೀಡು ಬಿಟ್ಟಿರುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪದೇಪದೆ ಮುಖಂಡರ ಸಭೆ ಕರೆದು ಆಕಾಂಕ್ಷಿಗಳ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕೆಲವು ವಾರ್ಡ್‌ಗಳಿಗೆ ಬಿ-ಾರ್ಮ್ ವಿತರಿಸಿದ್ದರೂ ತೀರಾ ಬೇಡಿಕೆ ಹೆಚ್ಚಿರುವ ವಾರ್ಡ್‌ಗಳಲ್ಲಿ ಬುಧವಾರ ಸಂಜೆವರೆಗೂ ಆಕಾಂಕ್ಷಿಗಳ ಮನವೊಲಿಸುವ ಕೆಲಸ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net