

ರಾಷ್ಟ್ರದ ಏಕತೆ ಮತ್ತು ಸಾರ್ವಭೌಮತೆಯನ್ನು ಕಾಪಾಡಿದ ಹಾಗೂ ಅವುಗಳನ್ನು ತಮ್ಮ ಕಾರ್ಯಗಳ ಮೂಲಕವೇ ಎತ್ತಿ ಹಿಡಿದ ದೇಶದ ಮೊದಲ ಉಪಪ್ರಧಾನಿ ಹಾಗೂ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲರ ಜೀವನ ಮತ್ತು ಆದರ್ಶಗಳು ಈ ಕಾಲಕ್ಕೂ ಸದಾ ಪ್ರಸ್ತುತ ಮತ್ತು ಅನುಕರಣೀಯ. ಸ್ವಾತಂತ್ರ್ಯಾನಂತರ ಹರಿದು ಹಂಚಿಹೋಗಿದ್ದ ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸಿ ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು ಸರ್ದಾರ್ ವಲ್ಲಭಭಾಯಿ ಪಟೇಲ್. ಅದು ಸುಲಭದ ಕೆಲಸವಾಗಿರಲಿಲ್ಲ. ಸಂಸ್ಥಾನಗಳ ರಾಜಮಹಾರಾಜರೊಂದಿಗೆ ಮಾತುಕತೆ ನಡೆಸುವ ಹೊಣೆಗಾರಿಕೆಯನ್ನು ಪ್ರಧಾನಿ ಜವಾಹರಲಾಲ್ ನೆಹರು ಅವರು ಪಟೇಲ್ ಹಾಗೂ ಭಾರತದ ಕೊನೆಯ ವೈಸ್ರಾಯ್ ಮೌಂಟ್ಬ್ಯಾಟನ್ರ ರಾಜಕೀಯ ಸಲಹೆಗಾರ ವಿ.ಪಿ. ಮೆನನ್ ಅವರಿಗೆ ವಹಿಸಿದರು. ಪರಿಣಾಮಕಾರಿ ಕಾರ್ಯತಂತ್ರ ಮತ್ತು ದೂರದೃಷ್ಟಿಯೊಂದಿಗೆ ಈ ಕೆಲಸಕ್ಕೆ ಅಣಿಯಾದ ಪಟೇಲರು ತಮ್ಮ ಜಾಣ್ಮೆ ಮತ್ತು ಕಠಿಣ ನಿಲುವುಗಳಿಂದಲೇ ಅನೇಕ ಜಟಿಲ ಪರಿಸ್ಥಿತಿಗಳನ್ನು ತಿಳಿಗೊಳಿಸಿದರು.
ದೇಶದ ಉದ್ದಗಲಕ್ಕೂ ಸಂಚರಿಸಿ ನೂರಾರು ಪ್ರಾಂತ್ಯಗಳ ರಾಜಮಹಾರಾಜರನ್ನು ಭೇಟಿಯಾಗಿ ಸ್ವತಂತ್ರ ಭಾರತದ ಒಕ್ಕೂಟದೊಂದಿಗೆ ಸಂಸ್ಥಾನಗಳನ್ನು ವಿಲೀನಗೊಳಿಸುವಂತೆ ಮನವೊಲಿಸಿದರು. ಕೆಲವೆಡೆ ಸೇನಾಬಲಪ್ರಯೋಗ ಮಾಡಿಯೂ ಕಾರ್ಯ ಸಾಧಿಸಿದರು. ಭಿನ್ನಾಭಿಪ್ರಾಯದ ಪ್ರಾಂತೀಯ ಮನಸ್ಸುಗಳು ಒಗ್ಗೂಡಿ ಭಾರತ ಒಕ್ಕೂಟ ಸ್ಥಾಪನೆಯಾಗಿದ್ದಕ್ಕೆ ಪಟೇಲರ ದಣಿವರಿಯದ ಪ್ರಯತ್ನವೇ ಕಾರಣ. ಕದಲದ ಇಚ್ಛಾಶಕ್ತಿ ಮತ್ತು ನಿರ್ಭಯತೆಯ ಸಮ್ಮಿಶ್ರಣವಾಗಿದ್ದ ಪಟೇಲರು ನೂರಾರು ಸಂಸ್ಥಾನಗಳಲ್ಲಿ ತಲೆದೋರಿದ್ದ ಪ್ರಶ್ನೆಗಳು ಹಾಗೂ ಅನುಮಾನಗಳನ್ನು ನಿರ್ವಹಿಸಿದ ರೀತಿಯನ್ನು ಕಂಡು ಅವರ ಕಡುಟೀಕಾಕಾರರೇ ನಿಬ್ಬೆರಗಾಗಿದ್ದರು.
ಹೈದರಾಬಾದ್ ಸಂಸ್ಥಾನದ ಜನಸಂಖ್ಯೆಯ ಶೇ. 87ರಷ್ಟು ಭಾಗದಲ್ಲಿ ಹಿಂದುಗಳಿದ್ದರೂ, ಒಸ್ಮಾನ್ ಆಲಿ ಖಾನ್ ಅಲ್ಲಿನ ನಿಜಾಮನಾಗಿದ್ದ. ಪ್ರಭುತ್ವದಲ್ಲಿ ಮುಸ್ಲಿಮರದೇ ಪ್ರಾಬಲ್ಯವಿತ್ತು. ‘ಸ್ವತಂತ್ರವಾಗಿ ಉಳಿಯಲು ಹೈದರಾಬಾದ್ಗೆ ಅವಕಾಶ ನೀಡಿದರೆ ಭಾರತ ಸರ್ಕಾರದ ಪ್ರತಿಷ್ಠೆಗೆ ಕುಂದು’ ಎಂದು ಪಟೇಲರು ಎಚ್ಚರಿಕೆ ನೀಡಿದರು. ಭಾರತೀಯ ಸೇನೆಯನ್ನು ಹೈದರಾಬಾದ್ಗೆ ಕರೆಸಿದರು. ಆಗ ಬೇರೆ ದಾರಿ ಕಾಣದೇ ಹೈದರಾಬಾದ್ ಸಂಸ್ಥಾನ ಭಾರತ ಒಕ್ಕೂಟದಲ್ಲಿ ವಿಲೀನವಾಯಿತು. ಈ ಕೆಲಸವನ್ನು ಆಗ ಪಟೇಲರು ಮಾಡದೇ ಹೋಗಿದ್ದರೆ ಈಗ ಭಾರತದ ಮಧ್ಯೆಯೇ ಒಂದು ‘ಅನ್ಯ ದೇಶ’ ಇರುತ್ತಿತ್ತು... ಅಲ್ಲಿಗೆ ಹೋಗಲು ಭಾರತೀಯರು ಪಾಸ್ಪೋರ್ಟ್, ವೀಸಾ ಪಡೆಯಬೇಕಾಗುತ್ತಿತ್ತು!
ವಲ್ಲಭಭಾಯಿ ಅವರದು ರೈತ ಕುಟುಂಬ. ಚಿಕ್ಕಂದಿನಲ್ಲಿ ವಲ್ಲಭಭಾಯಿಯ ಅನ್ಯಮನಸ್ಕತೆಯನ್ನು ನೋಡಿ ಗ್ರಾಮಸ್ಥರು ಅವರನ್ನು ‘ಯಾವ ಮಹತ್ವಾಕಾಂಕ್ಷೆಯೂ ಇಲ್ಲದ ಹುಡುಗ’ ಎಂದೇ ಪರಿಗಣಿಸಿದ್ದರು. ತಂದೆಯೊಂದಿಗೆ ಹೊಲಕ್ಕೂ ಹೋಗುತ್ತಿದ್ದ ವಲ್ಲಭಭಾಯಿಗೆ ಗಣಿತದಲ್ಲಿ ಆಸಕ್ತಿ ಇತ್ತು. ಅಂಕಗಣಿತ ಮತ್ತು ಕೋಷ್ಟಕಗಳನ್ನು ಚೆನ್ನಾಗಿ ಕಲಿತರು. ಕಲಿಯುವ ಕುತೂಹಲದಿಂದ ಶಾಲೆಯಲ್ಲಿ ಶಿಕ್ಷಕರಿಗೆ ತುಂಬಾ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಶಿಕ್ಷಕರು ನೀನೇ ಸ್ವತಃ ಕಲಿತುಕೋ ಹೋಗು ಎಂದು ಬೈದು ಕಳಿಸಿದರು. ನಂತರ ವಲ್ಲಭಭಾಯಿಯದು ಬಹುಪಾಲು ಸ್ವಯಂಕಲಿಕೆಯಾಗಿತ್ತು. ಗುಜರಾತಿಯಲ್ಲಿ ಏಳನೇ ತರಗತಿ ಪೂರ್ಣಗೊಳಿಸಿದ ಅವರಿಗೆ 16ನೇ ವಯಸ್ಸಿನಲ್ಲಿ ಇಂಗ್ಲಿಷ್ ಕಲಿಯಬೇಕೆನ್ನಿಸಿತು.
ತಮ್ಮ ಊರು ಕರಮ್ಸಾದ್ನಲ್ಲಿ ಇಂಗ್ಲಿಷ್ ಶಾಲೆ ಇಲ್ಲದ್ದರಿಂದ ಹೆಚ್ಚಿನ ಅಧ್ಯಯನಕ್ಕಾಗಿ ಮನೆಯಿಂದ ಏಳು ಮೈಲಿ ದೂರದಲ್ಲಿದ್ದ ಪೆಟ್ಲಾಡ್ ಎಂಬ ಪಟ್ಟಣಕ್ಕೆ ತೆರಳಿದರು. ತನ್ನೊಂದಿಗೆ ಬರುವಂತೆ ಕರಮ್ಸಾದ್ನ ಇತರ ಆರು ಹುಡುಗರ ಮನವೊಲಿಸಿದ ಅವರು, ಪೆಟ್ಲಾಡ್ನಲ್ಲಿ ಒಂದು ಸಣ್ಣ ಮನೆ ಬಾಡಿಗೆಗೆ ಪಡೆದರು. ಅಲ್ಲಿ ಸ್ವತಃ ಅಡುಗೆ ಮಾಡಿಕೊಂಡು, ಮನೆಗೆಲಸಗಳನ್ನು ಹಂಚಿಕೊಂಡು ಅಧ್ಯಯನ ಮಾಡಿದರು. 22ನೇ ವಯಸ್ಸಿನಲ್ಲಿ ಅವರು ನಾಡಿಯಾದ್ನಲ್ಲಿ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸಿದರು. ನಂತರ, ಬಾಂಬೆಯಲ್ಲಿ ಅಧ್ಯಯನ ಮಾಡುವ ಆಕಾಂಕ್ಷೆಯನ್ನು ಅವರು ಹೊಂದಿದ್ದರು. ಆದರೆ ಜೀವನ ಅವರನ್ನು ಮತ್ತೊಂದು ದಿಕ್ಕಿಗೆ ಕೊಂಡೊಯ್ದಿತು. 1911ರಲ್ಲಿ ತಮ್ಮ 36ನೇ ವಯಸ್ಸಿನಲ್ಲಿ ಪಟೇಲರು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದರು. ಲಂಡನ್ನ ಮಿಡಲ್ ಟೆಂಪಲ್ ಇನ್ಗೆ ಸೇರಿಕೊಂಡರು. ಯಾವುದೇ ಕಾಲೇಜು ವ್ಯಾಸಂಗದ ಹಿನ್ನೆಲೆ ಇರದಿದ್ದರೂ ಇಡೀ ತರಗತಿಯಲ್ಲೇ ಮೊದಲ ಸ್ಥಾನ ಪಡೆದು ಪಾಸಾದರು. 36 ತಿಂಗಳ ಕೋರ್ಸನ್ನು 30 ತಿಂಗಳಲ್ಲಿ ಪೂರ್ಣಗೊಳಿಸಿದರು. ಬ್ರಿಟಿಷ್ ಸರ್ಕಾರ ಪಟೇಲರಿಗೆ ಸಾಕಷ್ಟು ಹಣ ತಂದುಕೊಡುವ ಹುದ್ದೆಯನ್ನು ಕೊಟ್ಟರೂ ಅವರು ಅದನ್ನು ತಿರಸ್ಕರಿಸಿ ಭಾರತಕ್ಕೆ ಮರಳಿದರು. ಅಹಮದಾಬಾದ್ನಲ್ಲಿ ವಕೀಲಿ ವೃತ್ತಿ ಶುರು ಮಾಡಿದರು. ಬಹುಬೇಗ ಕಾನೂನು ವಲಯದಲ್ಲಿ ಹೆಸರು ಗಳಿಸಿದರು.
ಈಗ ದೇಶ ಸ್ವತಂತ್ರವಾಗಿದೆ. ಈ ಸ್ವಾತಂತ್ರ್ಯವನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ತಾನು ರಜಪೂತ, ಸಿಖ್ ಅಥವಾ ಜಾಟ್ ಎಂಬುದನ್ನು ಮರೆಯಬೇಕು. ತನಗೆ ಈಗ ಎಲ್ಲ ಹಕ್ಕುಗಳಿವೆ ಎಂಬುದನ್ನು ಮನಗಾಣುವ ಜತೆಗೆ ಕೆಲವು ಕರ್ತವ್ಯಗಳಿವೆ ಎಂಬುದನ್ನೂ ನೆನಪಿನಲ್ಲಿಡಬೇಕು. | ಸರ್ದಾರ್ ವಲ್ಲಭಭಾಯಿ ಪಟೇಲ್ (ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಹೊಸದರಲ್ಲಿ)
ಆಗ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಯತ್ತ ಆಕರ್ಷಿತರಾದ ಪಟೇಲರು ರಾಜಕೀಯಕ್ಕೆ ಧುಮುಕಿದರು. 1917ರಲ್ಲಿ ಮೊದಲ ಬಾರಿಗೆ ಅಹಮದಾಬಾದ್ನ ನೈರ್ಮಲ್ಯ ಆಯುಕ್ತರಾಗಿ ಆಯ್ಕೆಯಾದರು. 1924ರಿಂದ 1928ರವರೆಗೆ ಪುರಸಭೆ ಸಮಿತಿಯ ಅಧ್ಯಕ್ಷರಾಗಿದ್ದರು. ನೀರು ಸರಬರಾಜು, ನೈರ್ಮಲ್ಯ, ನಗರಯೋಜನೆಯನ್ನು ಸುಧಾರಿಸಲು ಕೆಲಸ ಮಾಡಿದರು. 1917ರಲ್ಲಿ ಪ್ಲೇಗ್, 1918ರಲ್ಲಿ ಬರಗಾಲ ಬಂದಾಗ ಆ ಸಂಕಷ್ಟಗಳನ್ನು ನಿವಾರಿಸಲು ಪಟೇಲರು ಶ್ರಮವಹಿಸಿ ದುಡಿದರು. 1917ರಲ್ಲಿ ಗುಜರಾತ್ ಸಭೆಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅದೇ ಮುಂದೆ ಕಾಂಗ್ರೆಸ್ನ ರಾಜ್ಯ ಘಟಕವಾಯಿತು. ಮಹಾತ್ಮ ಗಾಂಧಿ ಜತೆ ನಿಕಟ ಸಂಪರ್ಕದಲ್ಲಿ ಇದ್ದ ಪಟೇಲರು ರಾಜಕೀಯವಾಗಿ ಬೆಳೆಯುತ್ತ ಹೋದರು. 1931ರಲ್ಲಿ ಅವರನ್ನು ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸ್ವಾತಂತ್ರ್ಯಾನಂತರ ಪಟೇಲರು ಭಾರತದ ಮೊದಲ ಉಪಪ್ರಧಾನಿಯಾದರು. ಸ್ವಾತಂತ್ರ್ಯದ ಮೊದಲ ವಾರ್ಷಿಕೋತ್ಸವದಂದು ಅವರನ್ನು ದೇಶದ ಮೊದಲ ಗೃಹ ಸಚಿವರನ್ನಾಗಿ ನೇಮಿಸಲಾಯಿತು. ಮಾಹಿತಿ-ಪ್ರಸಾರ ಸಚಿವಾಲಯದ ಜತೆ ರಾಜ್ಯಗಳ ಉಸ್ತುವಾರಿಯನ್ನೂ ವಹಿಸಲಾಯಿತು. ರಾಜಪ್ರಭುತ್ವವಿದ್ದ 565 ರಾಜ್ಯಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸುವ ಗುರುತರ ಜವಾಬ್ದಾರಿ ಅದು. ತಿರುವಾಂಕೂರು, ಹೈದರಾಬಾದ್, ಜುನಾಗಢ, ಭೋಪಾಲ್, ಕಾಶ್ಮೀರದಂತಹ ಕೆಲವು ರಾಜಪ್ರಭುತ್ವದ ರಾಜ್ಯಗಳು ಭಾರತ ರಾಜ್ಯಕ್ಕೆ ಸೇರಲು ಹಿಂಜರಿದವು. ಪಟೇಲರು ಅವರನ್ನು ಒಪ್ಪಿಸಲು ಸಾಮ, ದಾನ, ಭೇದ, ದಂಡ ಹೀಗೆ ಎಲ್ಲ ಮಾರ್ಗಗಳನ್ನೂ ಅನುಸರಿಸಿದರು. ಕಠಿಣ ಸವಾಲುಗಳನ್ನು ಎದುರಿಸಿ ಎಲ್ಲ ರಾಜ್ಯಗಳನ್ನು ಒಂದು ಒಕ್ಕೂಟದಡಿ ತರುವಲ್ಲಿ ಯಶಸ್ವಿಯಾದರು. ಆದ್ದರಿಂದಲೇ ಅವರನ್ನು ‘ಏಕತಾ ಪುರುಷ’ ಎಂದು ಕರೆಯಲಾಗುತ್ತದೆ.
ಬಾಡೋಲಿ ತಾಲೂಕಿನ ಭೂಕಂದಾಯವನ್ನು ಶೇ. 22ರಷ್ಟು ಮತ್ತು ಕೆಲವು ಹಳ್ಳಿಗಳಲ್ಲಿ ಶೇ. 50-60ರಷ್ಟು ಹೆಚ್ಚಿಸಲು ಬ್ರಿಟಿಷ್ ಸರ್ಕಾರ ನಿರ್ಧರಿಸಿದ್ದರ ವಿರುದ್ಧ ನಡೆದ ರೈತರ ಸತ್ಯಾಗ್ರಹ ಇದು. ಪಟೇಲ್ ನೇತೃತ್ವದಲ್ಲಿ 1928ರ ಫೆ. 12ರಂದು ನಡೆದ ಸಭೆಯಲ್ಲಿ ಭೂಕಂದಾಯ ಪಾವತಿ ನಿಲ್ಲಿಸಲು ನಿರ್ಧರಿಸಲಾಯಿತು. ಹೋರಾಟ ಕಠೋರವಾಗಿತ್ತು. ಪೊಲೀಸರು ಮತ್ತು ಬಾಡಿಗೆ ಗೂಂಡಾಗಳ ದೌರ್ಜನ್ಯ, ಆಸ್ತಿ-ಜಾನುವಾರು ವಶ, ಬಂಧನಗಳು ಎಗ್ಗುಸಿಗ್ಗಿಲ್ಲದೆ ನಡೆದರೂ ರೈತರು ಧೃತಿಗೆಡದೆ ಸತ್ಯಾಗ್ರಹ ಮುಂದುವರಿಸಿದರು. ಈ ಹೋರಾಟ ಇಡೀ ದೇಶದ ಗಮನ ಸೆಳೆಯಿತು. ಕಂದಾಯ ಸಂಗ್ರಹಿಸಬೇಕಿದ್ದ ತಲಾಟಿಗಳೇ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಸರ್ಕಾರಕ್ಕೆ ಆದಾಯ ನಿಂತಿತು. ಅಂತಿಮವಾಗಿ ಸರ್ಕಾರವೇ ರೈತರೆದುರು ತಲೆಬಾಗಬೇಕಾಯಿತು. ಪಟೇಲರು ಸರ್ಕಾರಕ್ಕೆ ಹಲವು ಷರತ್ತುಗಳನ್ನು ಹಾಕಿದರು. ‘ಬಂಧಿತರನ್ನು ಬೇಷರತ್ ಬಿಡುಗಡೆ ಮಾಡಬೇಕು. ಅವರ ಮೇಲಿನ ಎಲ್ಲ ಮೊಕದ್ದಮೆ ಹಿಂಪಡೆಯಬೇಕು. ರಾಜೀನಾಮೆ ನೀಡಿದ್ದ ಸರ್ಕಾರಿ ನೌಕರರನ್ನೆಲ್ಲ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಎಲ್ಲ ಭೂಮಿಯನ್ನು ಅದರ ಮಾಲೀಕರಿಗೆ ಹಿಂತಿರುಗಿಸಬೇಕು’- ಇವೇ ಆ ಷರತ್ತುಗಳು. ಇವುಗಳಿಗೆಲ್ಲ ಬ್ರಿಟಿಷ್ ಸರ್ಕಾರ ಒಪ್ಪಿಗೆ ಸೂಚಿಸಿತು.
1980ರಲ್ಲಿ ಅಹಮದಾಬಾದ್ನ ಮೋತಿ ಶಾಹಿ ಮಹಲ್ನಲ್ಲಿ ಸರ್ದಾರ್ ಪಟೇಲ್ ರಾಷ್ಟ್ರೀಯ ಸ್ಮಾರಕವನ್ನು ಉದ್ಘಾಟಿಸಲಾಯಿತು. ಗುಜರಾತ್ನ ನರ್ಮದಾ ನದಿಯ ಪ್ರಮುಖ ಅಣೆಕಟ್ಟಿಗೆ ಸರ್ದಾರ್ ಸರೋವರ್ ಅಣೆಕಟ್ಟು ಎಂದು ಹೆಸರಿಡಲಾಯಿತು. ಅಹಮದಾಬಾದ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹಲವಾರು ಶೈಕ್ಷಣಿಕ ಸಂಸ್ಥೆಗಳಿಗೆ ಪಟೇಲ್ ಅವರ ಹೆಸರಿಡಲಾಗಿದೆ.
ಗುಜರಾತಿನ ನರ್ಮದಾ ಜಿಲ್ಲೆಯ ಕೇವಾಡಿಯಾದಲ್ಲಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ದಕ್ಷಿಣದಲ್ಲಿ 2,989 ಕೋಟಿ ರೂ. ವೆಚ್ಚದಲ್ಲಿ 597 ಅಡಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆ (ಸ್ಟ್ಯಾಚ್ಯು ಆಫ್ ಯುನಿಟಿ) ಸ್ಥಾಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ಉಪಕ್ರಮಕ್ಕೆ ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗಿದ್ದಲ್ಲದೆ, ಪ್ರತಿಮೆ ನಿರ್ವಣಕ್ಕಾಗಿ ದೇಶಾದ್ಯಂತ ಕಬ್ಬಿಣವನ್ನು ಸಂಗ್ರಹಿಸಲಾಗಿತ್ತು. ಈ ಪ್ರತಿಮೆ ಈಗ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯವೂ ಬರುತ್ತಿದೆ.
1948ರಲ್ಲಿ ಪಟೇಲರಿಗೆ ಹೃದಯಾಘಾತವಾಯಿತು. 1950ರ ಉತ್ತರಾರ್ಧದಲ್ಲಿ ಅವರ ಆರೋಗ್ಯ ಹದಗೆಡಲು ಪ್ರಾರಂಭಿಸಿತು. ಡಿಸೆಂಬರ್ನಲ್ಲಿ ಬಾಂಬೆಗೆ ಕರೆದೊಯ್ಯಲಾಯಿತು. ಅಲ್ಲಿ ಎರಡನೇ ಬಾರಿ ಹೃದಯಾಘಾತವಾಯಿತು. ಆ ವರ್ಷದ ಡಿ. 15ರಂದು ಪಟೇಲರು ಇಹಲೋಕ ತ್ಯಜಿಸಿದರು.
ಸರ್ದಾರ್ ಪಟೇಲರಿಗೆ ಅವರ ಮರಣದ 41 ವರ್ಷಗಳ ನಂತರ 1991ರಲ್ಲಿ ಭಾರತ ರತ್ನ ಪುರಸ್ಕಾರ ನೀಡಲಾಯಿತು.
ಬಾರ್ಡೇಲಿ ಸತ್ಯಾಗ್ರಹಕ್ಕೆ ಸಿಕ್ಕ ಅಭೂತಪೂರ್ವ ಜಯದಿಂದ ಖುಷಿಪಟ್ಟ ರೈತರು ಪಟೇಲರನ್ನು ‘ಸರ್ದಾರ್’ ಎಂದು ಕರೆಯತೊಡಗಿದರು. ನಂತರದ ದಿನಗಳಲ್ಲಿ ಗಾಂಧೀಜಿ ಕೂಡ ಪಟೇಲರನ್ನು ಸರ್ದಾರ್ ಎಂದೇ ಸಂಬೋಧಿಸುತ್ತಿದ್ದರು. ಅದು ಬಾಡೋಲಿಯ 80,000 ರೈತರ ಜಯ ಮಾತ್ರವಲ್ಲ, ವಿಶೇಷವಾಗಿ ವಲ್ಲಭಭಾಯಿ ಅವರ ನೇತೃತ್ವಕ್ಕೆ ಸಿಕ್ಕ ಜಯವಾಗಿತ್ತು.
1918ರಲ್ಲಿ ಬೆಳೆನಷ್ಟವಾದ ಕಾರಣ ಭೂಕಂದಾಯದಿಂದ ವಿನಾಯಿತಿ ಪಡೆಯಲು ಪ್ರಾರಂಭಿಸಲಾದ ಖೇಡಾ ಸತ್ಯಾಗ್ರಹದ ಸಮಯದಲ್ಲಿ ಮಹಾತ್ಮ ಗಾಂಧಿ ಜತೆ ನಿಕಟ ಸಂಪರ್ಕ ಬೆಳೆಯಿತು. ಚಳವಳಿ 3 ತಿಂಗಳು ನಡೆಯಿತು. 1917ರಿಂದ 1922ರವರೆಗಿನ 5 ವರ್ಷಗಳು ಭಾರತದಲ್ಲಿ ಆಂದೋಲನದ ವರ್ಷಗಳಾಗಿದ್ದವು. ಅವುಗಳಲ್ಲಿ ಪಟೇಲರ ಪಾತ್ರ ಮಹತ್ವದ್ದಾಗಿತ್ತು. ವಲ್ಲಭಭಾಯಿ ಇಲ್ಲದಿದ್ದರೆ ಈ ಸತ್ಯಾಗ್ರಹಗಳು ಇಷ್ಟೊಂದು ಯಶಸ್ವಿಯಾಗಿ ನಡೆಯುತ್ತಿರಲಿಲ್ಲ ಎಂದು ಗಾಂಧೀಜಿ ಹೇಳಿದ್ದು ಗಮನಾರ್ಹ. ನಂತರ ವಲ್ಲಭಭಾಯಿ ತಮ್ಮ ವಕೀಲಿ ವೃತ್ತಿಯನ್ನು ತೊರೆದು ರಾಜಕೀಯ ಮತ್ತು ಸಾಮಾಜಿಕ ಕೆಲಸಗಳಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ಹಳ್ಳಿಗಳಿಗೆ ಪ್ರವಾಸ ಮಾಡಿದರು. ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ವಿದೇಶಿ ಬಟ್ಟೆ ಅಂಗಡಿಗಳು ಮತ್ತು ಮದ್ಯದ ಅಂಗಡಿಗಳ ಮೇಲೆ ಪಿಕೆಟಿಂಗ್ಗಳನ್ನು ಆಯೋಜಿಸಿದರು.
ರಾಷ್ಟ್ರದ ಏಕತೆಗೆ ವಿಶೇಷ ಕೊಡುಗೆ ನೀಡಿರುವ ಸರ್ದಾರ್ ಪಟೇಲರ ಸಂದೇಶಗಳನ್ನು ಸಾರಲು, ಅವರ ಕೊಡುಗೆಗಳನ್ನು ಸ್ಮರಿಸಲು ಅವರ ಜನ್ಮದಿನವಾದ ಅ. 31ನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಈ ದಿನಾಚರಣೆ ಪ್ರಾರಂಭವಾಯಿತು. ಪ್ರತಿ ವರ್ಷ ಈ ದಿನದಂದು ದೇಶದ ಬಹುತೇಕ ಜಿಲ್ಲೆಗಳಲ್ಲಿ ಏಕತಾ ಓಟ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೊಜಿಸಲಾಗುತ್ತದೆ.