VIDEO| ಪ್ರೇಮಿಗಳ ದಿನಕ್ಕೆ "ಏಕ್​ ಲವ್​ ಯಾ" ಚಿತ್ರದ ಟೀಸರ್ ಕೊಡುಗೆ: ರಚಿತಾ ರಾಮ್​ ಲಿಪ್​ಲಾಕ್ ದೃಶ್ಯವೇ ಹೈಲೈಟ್​!

Ek Love Ya
Published on

ಬೆಂಗಳೂರು: ನಟ ಹಾಗೂ ನಿರ್ದೇಶಕ ಪ್ರೇಮ್​ ನಿರ್ದೇಶನದ ಬಹುನಿರೀಕ್ಷಿತ "ಏಕ್ ಲವ್ ಯಾ" ಚಿತ್ರದ ಮೋಷನ್ ಪೋಸ್ಟರ್ ಶನಿವಾರವಾಷ್ಟೇ ಬಿಡುಗಡೆಯಾಗಿ ಸಖತ್​ ಸದ್ದು ಮಾಡಿತ್ತು. ಇದೀಗ ಪ್ರೇಮಿಗಳ ದಿನದ ವಿಶೇಷವಾಗಿ ಚಿತ್ರದ ಟೀಸರ್​ ಔಟ್​ ಆಗಿದ್ದು, ಮತ್ತೊಮ್ಮೆ ನಟಿ ರಚಿತಾ ರಾಮ್​ ಅವರ ಬೋಲ್ಡ್​ ನಟನೆ ಸಿನಿರಸಿಕರ ಮನದಲ್ಲಿ ಕಿಚ್ಚು ಹಬ್ಬಿಸಿದೆ.

ಟೀಸರ್​ ಆರಂಭದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಚಿತ್ರತಂಡ ಸ್ಮರಿಸಿದೆ. ಬಳಿಕ ಚಿತ್ರದ ನಾಯಕ ರಾಣಾ ಸಿಗರೇಟ್​ ಹಚ್ಚುವ ದೃಶ್ಯದಿಂದ ಟೀಸರ್​ ಆರಂಭವಾಗುತ್ತದೆ. ಮೊದಲ ದೃಶ್ಯದಲ್ಲೇ ಸಿಗರೇಟ್ ಬಾಯಿಯಲ್ಲಿಟ್ಟುಕೊಂಡು ರಾಣಾಗೆ ಸಾಥ್​ ನೀಡುವ ರಚಿತಾ ವೀಕ್ಷರಿಗೂ ಶಾಕ್ ನೀಡುತ್ತಾರೆ. ಬಳಿಕ ಕೇಳುವ "ಈ ಹುಡುಗಿಯರು ವೆದರ್​ ಇದ್ದಂಗೆ ಯಾವಾಗ ಬರ್ತಾರೆ? ಯಾವಾಗ ಹೋಗ್ತಾರೆ ಗೊತ್ತೇ ಆಗಲ್ಲ. ಆದರೆ, ಹುಡುಗರು ವೆದರ್​ ರಿಪೋರ್ಟ್​ ಇದ್ದಂಗೆ ಇವತ್ತು ಬರ್ತಾಳೆ, ನಾಳೆ ಬರ್ತಾಳೆ ಅಂತ ಕಾಯ್ತಾನೆ ಇರ್ತೀವಿ ಅನ್ನೋ ಡೈಲಾಗ್​ ಕುತೂಹಲ ಮೂಡಿಸಿದೆ.

ಬಳಿಕ ಟೀಸರ್​ನಲ್ಲಿ ಆ್ಯಕ್ಸನ್​, ರೋಮ್ಯಾಂಟಿಕ್​ ಹಾಗೂ ಒಂದಿಷ್ಟು ಭಾವನಾತ್ಮಕ ಅಂಶಗಳ ಜತೆಯಲ್ಲಿ ಯಾವುದೋ ಒಂದು ಬಲವಾದ ಪ್ರೀತಿಯ ಸಂದೇಶವನ್ನು ಸಾರಲು ಪ್ರೇಮ್​ ಯತ್ನಿಸಿದ್ದಾರೆ ಎಂಬ ಸುಳಿವನ್ನು ಟೀಸರ್​ ನೀಡಿದೆ.

ಕೊನೆಯಲ್ಲಿ ನಟ ರಾಣಾ ಜತೆ ರಚಿತಾ ತುಟಿಗೆ ಚುಂಬಿಸುವ ದೃಶ್ಯ "ಉಪ್ಪಿ ಐ ಲವ್​ ಯು" ಬಳಿಕ ಮತ್ತೊಮ್ಮೆ ರಚಿತಾ ಬೋಲ್ಡ್​ ನಟನೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಗುಟ್ಟು ಬಿಟ್ಟು ಕೊಟ್ಟಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರಾಗಿದ್ದು, ಮತ್ತೊಬ್ಬ ನಾಯಕಿ ರೀಷ್ಮಾ ಅಲ್ಲಲ್ಲಿ ಬಂದು ಹೋದರು ಸಹ ಹೊಸ ನಟಿಯಾಗಿರುವುದರಿಂದ ಅಷ್ಟಾಗಿ ಗಮನ ಸೆಳೆಯುವುದಿಲ್ಲ. ಟೀಸರ್​ನಲ್ಲಿ ರಚಿತಾ ರಾಮ್​ ಅವರೇ ಹೈಲೈಟ್​ ಆಗಿದ್ದಾರೆ. ರಾಣಾ ಅವರ ಮೊದಲ ಚಿತ್ರವಾಗಿದ್ದರೂ ಟೀಸರ್​ನಲ್ಲಿ ಭರವಸೆ ಮೂಡಿಸಿದ್ದಾರೆ.

ಒಟ್ಟಾರೆ ಟೀಸರ್​ ತುಂಬಾ ಸೊಗಸಾಗಿ ಮೂಡಿಬಂದಿದೆ. ಈಗಾಗಲೇ ಯೂಟ್ಯೂಬ್​ನಲ್ಲಿ ಒಳ್ಳೆಯ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದ್ದು, ಈವರೆಗೆ 92 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.

ಅಂದಹಾಗೆ ಚಿತ್ರವನ್ನು ಪ್ರೇಮ್​ ನಿರ್ದೇಶಿಸುತ್ತಿದ್ದು, ರಕ್ಷಿತಾ ಅವರು ತಮ್ಮ ಹೋಮ್​ ಬ್ಯಾನರ್​ ರಕ್ಷಿತಾ ಫಿಲ್ಮ್​ ಫ್ಯಾಕ್ಟರಿ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಕ್ಷಿತಾ ಸಹೋದರ ರಾಣಾ ನಾಯಕರಾಗಿದ್ದು, ಮೊದಲ ಬಾರಿಗೆ ಬೆಳ್ಳಿತೆರೆಗೆ ಪ್ರವೇಶ ನೀಡುವ ಉತ್ಸಾಹದಲ್ಲಿದ್ದಾರೆ. ರಾಣಾಗೆ ರಚಿತಾ ರಾಮ್​ ಮತ್ತು ರೀಷ್ಮಾ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ಅರ್ಜುನ್​ ಜನ್ಯಾ ಸಂಗೀತವಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net