

ನವದೆಹಲಿ: ರಾಜ್ಯಸಭೆ ಕಲಾಪದ ವೇಳೆ ಅಸಭ್ಯ ವರ್ತನೆ ತೋರಿದ ಟಿಎಂಸಿ ಸದಸ್ಯ ಡೆರೆಕ್ ಓ ಬ್ರಿಯಾನ್ ಸಂಜಯ್ ಸಿಂಗ್ ಸೇರಿ 8 ವಿಪಕ್ಷ ಸದಸ್ಯರನ್ನು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಇಂದು ಅಮಾನತು ಮಾಡಿದ್ದಾರೆ.
ರಾಜ್ಯಸಭೆ ಕಲಾಪ ಆರಂಭವಾದ ಕೆಲವೇ ಹೊತ್ತಿನಲ್ಲಿ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು, ನಿನ್ನೆ ಕಲಾಪದ ವೇಳೆ ನಡೆದ ಘಟನೆ ಬಗ್ಗೆ ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದರು. ಡೆಪ್ಯುಟಿ ಚೇರ್ಮನ್ ಮೇಲೆ ದೈಹಿಕ ಆಕ್ರಮಣದ ಬೆದರಿಕೆ ಒಡ್ಡಿರುವುದು ಸರಿಯಲ್ಲ. ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟುಮಾಡಲಾಗಿದೆ. ಸಂಸದರು ಈ ವಿಷಯವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇಷ್ಟು ಹೇಳಿದ ಬಳಿಕ ಅಧ್ಯಕ್ಷರು, ಡೆಪ್ಯುಟಿ ಚೇರ್ಮನ್ ವಿರುದ್ಧದ ಅವಿಶ್ವಾಸಗೊತ್ತುವಳಿಯನ್ನು ನಿಯಮಾವಳಿ ಪ್ರಕಾರ ಸ್ವೀಕರಿಸಲಾಗದು ಎಂದು ಸ್ಪಷ್ಟಪಡಿಸಿದರಲ್ಲದೆ, ನಿನ್ನೆ ದುರ್ವರ್ತನೆ ತೋರಿದ ಎಂಟು ಸದಸ್ಯರನ್ನು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸಿರುವುದಾಗಿ ಘೋಷಿಸಿದರು.
ಈ ಪಟ್ಟಿಯಲ್ಲಿ ಸದಸ್ಯರಾದ ಡೆರೆಕ್ ಓ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆಕೆ ರಾಗೇಶ್, ರಿಪುನ್ ಬೋರಾ, ಡೋಲಾ ಸೇನ್, ಸೈಯದ್ ನಾಝಿರ್ ಹುಸೇನ್, ಎಲಮಾರನ್ ಕರೀಮ್ ಸೇರಿದ್ದಾರೆ. (ಏಜೆನ್ಸೀಸ್)