ಶ್ರೀಲಂಕಾ ಜೈಲಿನಲ್ಲಿ ದಂಗೆ - ಎಂಟು ಸಾವು, 37 ಜನರಿಗೆ ಗಾಯ

Lanka Prison
Published on

ಕೊಲಂಬೊ : ಶ್ರೀಲಂಕಾ ರಾಜಧಾನಿ ಕೊಲಂಬೋದ ಹೊರವಲಯದಲ್ಲಿರುವ ಜೈಲಿನಲ್ಲಿ ಭಾನುವಾರ ರಾತ್ರಿ ದಂಗೆ ಆಗಿದ್ದು, ಕೆಲವರು ಬಲವಂತವಾಗಿ ಬಾಗಿಲು ಮುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಈ ಗಲಭೆಯ ನಡುವೆ ಎಂಟು ಕೈದಿಗಳು ಪ್ರಾಣ ಕಳೆದುಕೊಂಡಿದ್ದಾರೆ. 37 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಪೊಲೀಸ್ ವಕ್ತಾರ ಅಜಿತ್ ರೋಹನಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೊಲಂಬೋದಿಂದ 15 ಕಿ.ಮೀ. ದೂರದಲ್ಲಿರುವ ಮಹಾರಾ ಜೈಲಿನಲ್ಲಿ ಅದರ ಸಾಮರ್ಥ್ಯಕ್ಕೂ ಮೀರಿ ಕೈದಿಗಳನ್ನು ಇರಿಸಲಾಗಿದೆ. ಕೋವಿಡ್ ಕಾರಣ ಕಳೆದ ಕೆಲವು ವಾರಗಳಲ್ಲಿ ಅನೇಕರು ಅಸ್ವಸ್ಥರಾಗಿದ್ದರು. ಕೆಲವರು ಪ್ರಾಣಕಳೆದುಕೊಂಡಿದ್ದರು. ಪ್ರಾಣಭೀತಿ ಮತ್ತು ಅಸಮಾಧಾನದ ಆಕ್ರೋಶ ಸ್ಪೋಟಗೊಂಡು ದಂಗೆ ಉಂಟಾಗಿತ್ತು.

ಇದೇ ವೇಳೆ ಅನೇಕರು ಜೈಲು ಹಾರಿ ಓಡಿಹೋಗಲು ಪ್ರಯತ್ನಿಸಿದ್ದರು. ತಡೆಯಲು ಪ್ರಯತ್ನಿಸಿದ ಇಬ್ಬರು ಜೈಲರುಗಳು ಸೇರಿ 37 ಜನ ಗಾಯಗೊಂಡಿದ್ದಾರೆ. ಎಲ್ಲರನ್ನೂ ಸ್ಥಳೀಯ ರಾಗಮಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೈದಿಗಳು ಅಡುಗೆ ಕೋಣೆ ಮತ್ತು ದಾಖಲೆಪತ್ರಗಳ ಕೋಣೆಗೆ ಬೆಂಕಿ ಹಚ್ಚಿದ್ದಾರೆ. ಈ ಜೈಲಿನಲ್ಲಿದ್ದ 175ಕ್ಕೂ ಹೆಚ್ಚು ಜನರಿಗೆ ಕೋವಿಡ್ ಸೋಂಕು ತಗುಲಿತ್ತು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net