ಅಹಂಕಾರಕ್ಕೆ ಏಕಾಂತ ಇಷ್ಟವಿಲ್ಲ

ವಿಜಯವಾಣಿ (1)
Published on

ನಮಗೆ ನಮ್ಮ ನಿಜವಾದ ಕೇಂದ್ರದ ಅನುಭವವಿಲ್ಲ. ಆದರೆ ಕೇಂದ್ರವಿಲ್ಲದೆ ಬದುಕುವುದು ತುಂಬಾ ಕಷ್ಟ, ಅಸಾಧ್ಯ. ಆದ್ದರಿಂದ ನಾವು ಸುಳ್ಳು ಕೇಂದ್ರವನ್ನು ರಚಿಸಿದ್ದೇವೆ. ಮತ್ತು ಅದರೊಂದಿಗೇ ನಾವು ಓಡುತ್ತೇವೆ ಮತ್ತು ಜೀವಂತವಾಗಿರುತ್ತೇವೆ. ಯಾರಾದರೂ ನಮ್ಮನ್ನು ನಿಂದಿಸಿದರೆ ನಮಗೆ ದುಃಖದ ಅನುಭವವಾಗುತ್ತದೆ, ಮತ್ತೊಬ್ಬರು ನಮಗೆ ಹೊರಗಡೆಯಿಂದ ದುಃಖವನ್ನೋ ಅಥವಾ ಸುಖವನ್ನೋ ಕೊಡುತ್ತಿದ್ದಾರೆ ಎಂದೆನಿಸುತ್ತದೆ. ಆದರೆ ಈ ಎರಡರ ಮೂಲ ಮಾತ್ರ ನಮ್ಮದೇ ಅಹಂಕಾರ. ಅಹಂಕಾರ ನಿಂತಿರುವುದೇ ವಸ್ತುಗಳಿಂದ, ವ್ಯಕ್ತಿಗಳಿಂದ. ಆದ್ದರಿಂದ ಅದು ಯಾವಾಗಲೂ ಜನರನ್ನು ಬಯಸುತ್ತದೆ.

ಸಾಮಾನ್ಯವಾಗಿ ನಾವೆಲ್ಲ ನಮ್ಮ ಸುತ್ತಮತ್ತಲೂ ನಮ್ಮನ್ನು ಹೊಗಳುವವರನ್ನೇ ಇಟ್ಟುಕೊಳ್ಳುತ್ತೇವೆ. ಕಾರಣ ಮಿತ್ರರಿದ್ದಲ್ಲಿ ನಮ್ಮ ಅಹಂಕಾರ ಜೀವಂತವಾಗಿರುತ್ತದೆ. ಎಲ್ಲ ಸಮಯದಲ್ಲೂ ನಮಗೆ ಮಿತ್ರರ ಉಪಲಬ್ಧಿ ಇರುವುದಿಲ್ಲ. ಆಗ ಅಹಂಕಾರ ಶತ್ರುವನ್ನಾದರೂ ಅರಸುತ್ತದೆ. ಕಾರಣ ಶತ್ರುವಿನ ಸಾನ್ನಿಧ್ಯದಲ್ಲೂ ಅಹಂಕಾರ ಜೀವಂತವಾಗಿರುತ್ತದೆ. ಆದರೆ ಎಂದೂ ಏಕಾಂತದಲ್ಲಿರಲು ಅದು ಇಷ್ಟ ಪಡುವುದಿಲ್ಲ. ಕಾರಣ ಏಕಾಂತ ಅಹಂಕಾರದ ಮೃತ್ಯುವಾಗಿದೆ. ಆದ್ದರಿಂದ ಅಹಂಕಾರ ಯಾವಾಗಲೂ ಮತ್ತೊಬ್ಬರ ಅನ್ವೇಷಣೆಯಲ್ಲಿ ಇರುತ್ತದೆ. ನಮ್ಮ ಜೀವನದಲ್ಲಿ ನಮಗೆ ಅತ್ಯಂತ ಪ್ರಿಯವಾಗಿರುವುದು ಹಣವೂ ಅಲ್ಲ, ಐಶ್ವರ್ಯವೂ ಅಲ್ಲ, ಅಧಿಕಾರವೂ ಅಲ್ಲ.

ನಮ್ಮ ಅಹಂಕಾರವೇ ನಮಗೆ ಅತ್ಯಂತ ಪ್ರಿಯವಾಗಿರುವುದು. ಆದ್ದರಿಂದ ನಮ್ಮ ಅಹಂಕಾರಕ್ಕೆ ಯಾರೇ ನೋವನ್ನುಂಟು ಮಾಡಲಿ, ಆಗ ನಾವು ನಮ್ಮ ಮನಸಿನ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತೇವೆ. ಆಗ ನಮ್ಮ ಮಾತುಗಳು ನಮ್ಮ ಕರ್ಮಗಳು ಎಲ್ಲವೂ ಕಠೋರವಾಗಿರುತ್ತವೆ. ಯಾರು ತನ್ನ ಅಹಂಕಾರವನ್ನು ನಾಶಪಡಿಸಿಕೊಂಡಿರುವನೋ ಅವನನ್ನೇ ಜ್ಞಾನಿ ಎಂದು ಕರೆಯುವುದು. ಅವನ ಇಂದ್ರಿಯ, ಮನಸು, ಬುದ್ಧಿಗಳು ಅವನ ಹಿಡಿತದಲ್ಲಿರುತ್ತವೆ. ಅವನು ಎಂದೂ ಮನಸಿನ ಉದ್ವೇಗಕ್ಕೆ ಒಳಗಾಗದೆ ಇನ್ನೊಬ್ಬರಿಗೆ ನೋವಾಗುವಂತಹ ಕರ್ಮಗಳನ್ನಾಗಲಿ, ಮಾತುಗಳನ್ನಾಗಲಿ ಆಡುವುದಿಲ್ಲ. ಆದ್ದರಿಂದಲೇ ಸುಭಾಷಿತಕಾರ ಇಂತಹವನನ್ನು ಸಾಧುಗಳಲ್ಲಿಯೇ ಅತ್ಯುತ್ತಮ ಎಂದು ಹೇಳಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net