ಅಹಂಕಾರದ ಇಷ್ಟ

ವಿಜಯವಾಣಿ
Published on

ಭವತಿ ಸುಭಗತ್ವಮಧಿಕಂ ವಿಸ್ತಾರಿತಪರಗುಣಸ್ಯ ಸುಜನಸ್ಯ |

ವಹತಿ ವಿಕಾಸಿತಕುಮುದೋ ದ್ವಿಗುಣರುಚಿಂ ಹಿಮಕರದ್ಯುತಿಃ ||

ಅನ್ಯರ ಗುಣಗಳನ್ನು ಪ್ರಕಟಿಸುವ ಸಜ್ಜನರಿಗೆ ಗೌರವವು ಹೆಚ್ಚಾಗುತ್ತದೆ. ಬಿಳಿ ನೈದಿಲೆಯನ್ನು ಅರಳಿಸುವ ಚಂದ್ರನ ಕಾಂತಿಯು ಇಮ್ಮಡಿ ಪ್ರಕಾಶ ವನ್ನು ಹೊಂದುತ್ತದೆ. ಸಾಮಾನ್ಯವಾಗಿ ಜನರು ತಮ್ಮದೇ ಗುಣಗಳನ್ನು ಬಿಂಬಿಸುವಲ್ಲಿ ಮತ್ತು ಇತರರ ದೋಷಗಳನ್ನು ಎತ್ತಿ ತೋರಿಸುವಲ್ಲಿ ಹೆಚ್ಚು ತೊಡಗಿರುತ್ತಾರೆ. ಮತ್ತೊಬ್ಬರಲ್ಲಿ ದೋಷವನ್ನು ನೋಡುವುದು ನಮ್ಮಲ್ಲಿ ಅತ್ಯಂತ ಸಹಜವಾದ ಗುಣವಾಗಿದೆ. ನಮ್ಮನ್ನು ನಾವು ನಿದೋಷಿಯನ್ನಾಗಿ ತೋರಿಸಿಕೊಳ್ಳಲು ನಾವು ಮತ್ತೊಬ್ಬರಲ್ಲಿ ದೋಷವನ್ನು ನೋಡುತ್ತೇವೆ.

ಮತ್ತೊಬ್ಬರ ದೋಷವನ್ನು ಅದು ಚಿಕ್ಕದಾಗಿದ್ದರೂ ದೊಡ್ಡದನ್ನಾಗಿ ಮಾಡಿ ನೋಡುತ್ತೇವೆ. ಮತ್ತೊಬ್ಬರ ಒಳ್ಳೆಯ ಗುಣಗಳು ದೊಡ್ಡದಾಗಿದ್ದರೂ ಅವನ್ನು ಚಿಕ್ಕದಾಗಿ ಮಾಡಿ ನೋಡುತ್ತೇವೆ. ಇದರಿಂದ ನಮ್ಮ ಅಹಂಕಾರಕ್ಕೆ ಒಂದು ಸಮಾಧಾನ ಉಂಟಾಗುತ್ತದೆ. ಇನ್ನೊಬ್ಬರ ದೋಷ ದೊಡ್ಡದಾದಷ್ಟು ನಾವು ಒಳ್ಳೆಯವರು ಎಂಬ ಭಾವನೆ ನಮ್ಮಲ್ಲಿ ಉಂಟಾಗುತ್ತದೆ. ಇನ್ನೊಬ್ಬರ ತಪ್ಪನ್ನು ದೊಡ್ಡದು ಮಾಡಿನೋಡಿದರೆ ನಾವು ಒಳ್ಳೆಯವರಾಗಲು ಸಾಧ್ಯವಿಲ್ಲ. ಎಷ್ಟೇ ದೊಡ್ಡ ಸದ್ಗುಣಿಯಾದರೂ ಅವನಲ್ಲಿರುವ ಸದ್ಗುಣವನ್ನು ನೋಡಲು ನಮ್ಮ ಅಂತಃಕರಣ ಒಪ್ಪುವುದಿಲ್ಲ. ಕಾರಣ ಇನ್ನೊಬ್ಬ ಒಳ್ಳೆಯವ ಎಂದು ನಾವು ಒಪ್ಪಿದರೆ ನಾವು ಅವನಷ್ಟು ಒಳ್ಳೆಯವರಲ್ಲ ಎಂದಾಗುತ್ತದೆ. ಆಗ ನಾವು ಅವನಿಗೆ ನಮಸ್ಕರಿಸಬೇಕಾಗುತ್ತದೆ. ಶರಣಾಗಬೇಕಾಗುತ್ತದೆ.

ಇದು ನಮ್ಮ ಅಹಂಕಾರಕ್ಕೆ ಇಷ್ಟವಿಲ್ಲ. ಆದ್ದರಿಂದ ಎಂತಹ ಒಳ್ಳೆಯ ವ್ಯಕ್ತಿಯೇ ಆಗಲಿ, ಅವನಲ್ಲಿ ಮೊದಲು ನಾವು ದೋಷವನ್ನು ಹುಡುಕುತ್ತೇವೆ. ಯಾರನ್ನಾದರೂ ನಮ್ಮ ಮುಂದೆ ಇವನೊಬ್ಬ ಸತ್ವಗುಣಿ, ಇವನೊಬ್ಬ ಮಹಾತ್ಮ, ಒಳ್ಳೆಯವ, ದಾನಿ ಎಂದು ಹೇಳಿದರೆ ತಕ್ಷಣವೇ ನಾವು ಪ್ರಮಾಣವನ್ನು ಕೇಳುತ್ತೇವೆ. ಮತ್ತೊಬ್ಬರ ಒಳಿತನ್ನು ಕೇಳಲು ನಮಗೆ ಸಾಧ್ಯವಾಗುವುದಿಲ್ಲ ಇನ್ನೊಬ್ಬರನ್ನು ಹೊಗಳುವುದು ಎಂದರೆ ನಮಗೆ ಅಷ್ಟಕಷ್ಟೆ. ಅದೇ ಮತ್ತೊಬ್ಬರ ತೆಗಳಿಕೆಗೆ ನಾವು ಎಂದೂ ಪ್ರಮಾಣ ಕೇಳುವುದಿಲ್ಲ. ಅವರ ಮಾತುಗಳೇ ನಮಗೆ ಪ್ರಮಾಣವಾಗುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net