ತಿ.ನರಸೀಪುರ: ಹುಟ್ಟೂರಿನಲ್ಲಿ ಜನರ ಸೇವೆ ಮಾಡಲು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸ್ನೇಹ ಕಲಾ ತಂಡದನಂತಹ ಸಂಘಟನೆಯಲ್ಲಿ ಪದಾಧಿಕಾರಿಗಳು ಕಾರ್ಯಾಧ್ಯಕ್ಷ ಹುದ್ದೆಯನ್ನ ಕಲ್ಪಿಸಿಕೊಟ್ಟಿರುವುದು ಹೆಮ್ಮೆಯ ಸಂಗತಿ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎನ್.ಜವರಯ್ಯ ಹೇಳಿದರು.
ತಾಲೂಕಿನ ಸೋಸಲೆ ಗ್ರಾಮದ ಶ್ರೀ ಹೊನ್ನಾದೇವಿ ದೇವಾಲಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ನೇಹ ಕಲಾ ತಂಡದ ಸಭೆಯಲ್ಲಿ ಸಂಘಟನೆಗೆ ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ನೇಮಕಾತಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಯನ್ನು ನಿರಂತರವಾಗಿ ಆಯೋಜಿಸಲು ಪದಾಧಿಕಾರಿಗಳೊಡನೆ ನಿರಂತರವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಪುರಾತನ ಪ್ರಸಿದ್ಧಿಯಾಗಿರುವ ತಾಲೂಕಿನ ಸೋಸಲೆ ಗ್ರಾಮ ಪ್ರಮುಖ ಧಾರ್ಮಿಕ ದೇವಾಲಯಗಳ ನೆಲೆಬೀಡಾಗಿದ್ದು, ವ್ಯಾಸರಾಜರ ಮಠವನ್ನ ಹೊಂದಿರುವುದು ಗ್ರಾಮದ ಭವ್ಯ ಪರಂಪರೆಯಾಗಿದೆ. ಗ್ರಾಮದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಯನ್ನು ಹಲವರು ನಡೆಸಿಕೊಂಡು ಬರುತ್ತಿದ್ದಾರೆ. ಅವರೊಡನೆ ನಾನು ಕೂಡ ಕಾರ್ಯಭಾರಿಯಾಗಿ ಪಾಲ್ಗೊಳ್ಳುತ್ತೇನೆ. ಸ್ನೇಹ ಕಲಾತಂಡವನ್ನು ಎಲ್ಲರೊಡನೆ ಉತ್ತಮವಾಗಿ ಕಟ್ಟುತ್ತೇನೆ ಎಂದು ಹೇಳಿದರು.
ಶ್ರೀ ಹೊನ್ನಾದೇವಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕಲಾತಂಡದ ಅಧ್ಯಕ್ಷ ಎಂ.ನಾಗರಾಜು, ಗೌರವಾಧ್ಯಕ್ಷ ಬೇಕರಿ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಎ.ನಾಗರಾಜು(ಪಾಪು), ಉಪಾಧ್ಯಕ್ಷ ಎಸ್.ಸಿದ್ದರಾಜು, ಸಂಚಾಲಕ ಎನ್.ದಿನೇಶ್ ಹಾಗೂ ಖಜಾಂಚಿ ಎಸ್.ಎಂ. ಚಿನ್ನಸ್ವಾಮಿ ಇದ್ದರು.