ಬಿಸಿ ಊಟ ಗುಣಮಟ್ಟ ಸುಧಾರಣೆಗೆ ಪ್ರಯತ್ನ: ಮಧು ಬಂಗಾರಪ್ಪ

education minister madhu bangarappa
ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ
Published on

ಬೆಂಗಳೂರು: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಸುಧಾರಣೆಗೆ ಪ್ರಯತ್ನ ನಡೆದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಈ ಸಂಬಂಧ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಸಿಯೂಟದ ಜತೆ ಹಾಲು, ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ಕೊಡುತ್ತಿದ್ದೇವೆ. ಇನ್ನಷ್ಟು ಪೋಷಕಾಂಶ ಭರಿತ ಆಹಾರವನ್ನು ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ. ಈಗ ನೀಡುತ್ತಿರುವ ಮೊತ್ತದಲ್ಲೇ ಇನ್ನಷ್ಟು ಗುಣಮಟ್ಟದ ಆಹಾರ ನೀಡಬಹುದೆ? ಎಂಬುದರ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತದೆ. 9,10ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವೇ ಅಕ್ಕಿಯ ವೆಚ್ಚವನ್ನು ಭರಿಸುತ್ತದೆ. ಈಗ ಕೊಡುವ ಆಹಾರದಲ್ಲಿ ಸುಧಾರಣೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.

ಲೋಪ ಕಂಡರೆ ಅಧಿಕಾರಿಗಳೇ ಹೊಣೆ

ಬಿಸಿಯೂಟ ತಯಾರಿಸುವ ಸ್ಥಳದಲ್ಲಿ ಶುಚಿತ್ವ ಕಾಪಾಡಲು ಸೂಚಿಸಲಾಗಿದೆ. ಲೋಪದೋಷ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸುತ್ತಿದ್ದೇವೆ. ಈಗಿರುವ ಮೆನು ಬದಲಾವಣೆ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಈಗಾಗಲೇ ಆಯಾ ಪ್ರದೇಶಗಳ ಆಹಾರ ಪದ್ಧತಿಗೆ ಅನುಗುಣವಾಗಿ ಆಹಾರ ನೀಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೂವರು ಉಪಮುಖ್ಯಮಂತ್ರಿ ಮಾಡಬೇಕೆಂಬ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಗೆ, ಇದು ನನ್ನ ಕೈಯಲ್ಲಿ ಇಲ್ಲ. ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಕೊಟ್ಟಿರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ತಿಳಿಸಿದರು.

ಪ್ರಣವಾನಂದ ಸ್ವಾಮೀಜಿ ತಲೆಹರಟೆ

ಶ್ರೀ ಪ್ರಣವಾನಂದ ಸ್ವಾಮೀಜಿ ಅವರು ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆ ಬೆಂಬಲಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಶ್ರೀ ಪ್ರಣವಾನಂದ ಸ್ವಾಮಿಜಿ ಅವರು ನಮ್ಮ ಸಮುದಾಯದ ಸ್ವಾಮಿಜಿಯಲ್ಲ. ಅವರ ಹೇಳಿಕೆಯನ್ನು ಒಪ್ಪುವುದಿಲ್ಲ. ನಮ್ಮ ಸಮಾಜಕ್ಕೆ ಹಲವು ಸ್ವಾಮಿಜಿಗಳಿದ್ದಾರೆ. ಪ್ರಣವಾನಂದ ಸ್ವಾಮೀಜಿ ನಮ್ಮ ಸ್ವಾಮೀಜಿಯೇ ಅಲ್ಲ. ಅವರ ಹಿನ್ನೆಲೆ ಹುಡುಕಿ. ಅವರು ವಿಶ್ವ ಹಿಂದೂ ಪರಿಷತ್‌ನಿಂದ ಬಂದವರು.

ಅವರಿಗೆ ಕುಟುಂಬ ಇದೆ, ಚೆನ್ನಾಗಿ ಇರಲಿ. ಅವರನ್ನು ಯಾರು ಪಟ್ಟಾಭಿಷೇಕ, ಪೀಠಾಧಿಪತಿ ಮಾಡಿದರೋ ಗೊತ್ತಿಲ್ಲ. ನಮ್ಮವರು ಯಾರೂ ಅವರನ್ನ ನಮ್ಮ ಸ್ವಾಮೀಜಿ ಎಂದು ಹೇಳಲ್ಲ. ಆ ಸ್ವಾಮೀಜಿ ಸ್ವಲ್ಪ ತಲೆಹರಟೆ. ಜನರಿಗೆ ಮಿಸ್ ಗೈಡ್ ಮಾಡುತ್ತಿದ್ದಾರೆ. ನಮ್ಮ ಸಮುದಾಯಕ್ಕೆ ಬ್ರಾಹ್ಮಾನಂದ ಸ್ವಾಮೀಜಿ, ಶೃಂಗೇರಿ ಸ್ವಾಮೀಜಿ ಇದ್ದಾರೆ ಎಂದು ಪ್ರಣವಾನಂದ ಸ್ವಾಮೀಜಿ ವಿರುದ್ಧ ಮಧು ಬಂಗಾರಪ್ಪ ಗರಂ ಆದರು.

ಮಕ್ಕಳಿಗೆ ಗುಣಮಟ್ಟದ ಆಹಾರ ಕೊಡುವ ಕುರಿತು ಚರ್ಚಿಸಿದ್ದೇವೆ. ಈ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ.

-ಕೆ.ಎಚ್.ಮುನಿಯಪ್ಪ, ಆಹಾರ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net