

ಬೆಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿಗಳು ತರಗತಿಯಲ್ಲಿ ಕೇವಲ ಥಿಯರಿ ಕೇಳುವುದಲ್ಲ. ಪ್ರಾಕ್ಟಿಕಲ್ ಕೂಡ ಜತೆಜತೆಗೆ ಕಲಿಯುತ್ತಾ ಸಾಗಬೇಕು. ತರಗತಿಗಳು ಒಂದು ರೀತಿಯಲ್ಲಿ ‘ಕೌಶಲ ಕೇಂದ್ರ’ಗಳಾದಾಗ ಇಂಜಿನಿಯರಿಂಗ್ ಶಿಕ್ಷಣ ಸಾರ್ಥಕವಾಗಲಿದೆ ಎಂಬುದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ವಿದ್ಯಾಶಂಕರ್ ಅಭಿಮತ.
‘ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್’ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ಇಂಜಿನಿಯರಿಂಗ್ ಶಿಕ್ಷಣದಲ್ಲಿ ಎನ್ಇಪಿ ಉಪಯೋಗಗಳು’ ವಿಷಯ ಕುರಿತ ಫೋನ್-ಇನ್ ಕಾರ್ಯಕ್ರಮದಲ್ಲಿ ಪ್ರಸ್ತುತ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಇಂಜಿನಿಯರಿಂಗ್ ವ್ಯಾಸಂಗ ಮಾಡಬೇಕು ಎನ್ನುವವರು, ಹಾಲಿ ಮೊದಲ ಮತ್ತು ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಪಾಲಕರ ಹತ್ತಾರು ಪ್ರಶ್ನೆಗಳಿಗೆ ಡಾ. ಎಸ್. ವಿದ್ಯಾಶಂಕರ್ ಸ್ಪಷ್ಟ ಉತ್ತರ ನೀಡಿದರು.
8 ವರ್ಷದಲ್ಲಿ ಪೂರ್ಣಗೊಳಿಸಬೇಕು: ಇಂಜಿನಿಯರಿಂಗ್ ಅನ್ನು ಒಟ್ಟಾರೆ 8 ವರ್ಷದಲ್ಲಿ ಪೂರ್ಣಗೊಳಿಸಬೇಕು. ಆದರೆ, ಮೊದಲ ಎರಡು ವರ್ಷದ ವ್ಯಾಸಂಗವನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಅದಾದ ನಂತರ ಒಂದೆರಡು ವರ್ಷ ಬಿಟ್ಟು ಮತ್ತೆ ದಾಖಲಾಗಿ ಶಿಕ್ಷಣವನ್ನು ಪೂರ್ಣಗೊಳಿಸಬಹುದು. 2 ವರ್ಷ ಪೂರ್ಣಗೊಂಡರೆ ಡಿಪ್ಲೊಮಾ, 3 ವರ್ಷ ಪೂರ್ಣಗೊಂಡರೆ ಬಿಎಸ್ಸಿ ಇಂಜಿನಿಯರಿಂಗ್, 4 ವರ್ಷಕ್ಕೆ ಬ್ಯಾಚುಲರ್ ಡಿಗ್ರಿ ನೀಡಲಾಗುತ್ತಿದೆ. 4 ವರ್ಷದ ಬಳಿಕ ಹೆಚ್ಚಿನ ಕೌಶಲಕ್ಕಾಗಿ ಆನ್ಲೈನ್ ಕೋರ್ಸ್ಗಳನ್ನು ಮಾಡಿಕೊಂಡರೆ ಬಿಇ ಆನರ್ಸ್ ಮತ್ತು ಇತರ ಕೋರ್ಸ್ಗಳಲ್ಲಿನ ಮೈನರ್ ಡಿಗ್ರಿ ನೀಡಲಾಗುತ್ತದೆ ಎಂದರು.
ಸಂಶೋಧನೆಗೆ ಹೆಚ್ಚು ಅವಕಾಶ: ಇತ್ತೀಚೆಗೆ ಸರ್ಕಾರಿ ಕಾಲೇಜಿನ ಗ್ರಾಮೀಣ ವಿದ್ಯಾರ್ಥಿಯೊಬ್ಬನಿಗೆ 90 ಲಕ್ಷ ಪ್ಯಾಕೇಜ್ ನೀಡಲಾಗಿದೆ. ಮತ್ತೊಬ್ಬರಿಗೆ 60 ಲಕ್ಷ ಪ್ಯಾಕೇಜ್ ನೀಡಲಾಗಿದೆ. ಆದ್ದರಿಂದ ಪ್ರತಿಭೆಯನ್ನು ಯಾವ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತೇನೆ ಎಂಬುದು ಮುಖ್ಯ. ಹಾರುವ ಕಾರುಗಳು, ಬೈಕ್ಗಳನ್ನು ಸಂಶೋಧಿಸಬಹುದು. ಕೃತಕ ಬುದ್ಧಿಮತ್ತೆ, ರೊಬೊಟಿಕ್ ತಂತ್ರಜ್ಞಾನ ಬಳಸಿಕೊಳ್ಳಬಹುದು. ಚಾಟ್ ಜಿಪಿಟಿಗೆ ಪರ್ಯಾಯವಾಗಿ ಗೂಗಲ್ನಿಂದ ಬರ್ಡ್ ಅನ್ನು ತಂದಿದ್ದಾರೆ. ಆದ್ದರಿಂದ ಸಂಶೋಧನೆಗೆ ಹೆಚ್ಚಿನ ಅವಕಾಶಗಳಿದ್ದು, ವಿದ್ಯಾರ್ಥಿಗಳು ಇದನ್ನು ಬಳಸಿಕೊಳ್ಳಬೇಕಿದೆ.
ವಿಟಿಯುನಲ್ಲೂ ಮೇಕ್ ಅಪ್ ಪರೀಕ್ಷೆ: ಇದೇ ಮೊದಲ ಬಾರಿಗೆ ಇಂಜಿನಿಯರಿಂಗ್ ವಿದ್ಯಾರ್ಥಿ ಗಳಿಗೆ ‘ಮೇಕ್ ಅಪ್’ ಪರೀಕ್ಷೆಯನ್ನು ವಿಟಿಯು ಪರಿಚಯಿಸುತ್ತಿದೆ. ಶುಕ್ರವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ಅಜೆಂಡಾ ರ್ಚಚಿಸಲಾಗಿದೆ. ಸೆಮಿಸ್ಟರ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವ, ನಾನಾ ಕಾರಣಗಳಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ವಿವಿ ಹಂತ ದಲ್ಲಿ 2023-24ನೇ ಶೈಕ್ಷಣಿಕ ಸಾಲಿನಿಂದ ಆರಂಭಿಸಲು ರ್ಚಚಿಸುತ್ತಿದೆ ಎಂದು ಕುಲಪತಿ ಹೇಳಿದರು.
ಪ್ಲೇಸ್ವೆುಂಟ್ಗಾಗಿ ಸಾಫ್ಟ್ವೇರ್ ಅಭಿವೃದ್ಧಿ: ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಪ್ಲೇಸ್ವೆುಂಟ್ ಕಲ್ಪಿಸುವುದಕ್ಕಾಗಿ ವಿಟಿಯು ವತಿಯಿಂದ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗಿದೆ. ವಿದ್ಯಾರ್ಥಿಗಳು ವೈಯಕ್ತಿಕ ಮಾಹಿತಿಯೊಂದಿಗೆ ತಾವು ಹೊಂದಿರುವ ಕೌಶಲವನ್ನು ಅಪ್ಲೋಡ್ ಮಾಡಿದರೆ, ಸಂಬಂಧಪಟ್ಟ ಕಂಪನಿಗಳಿಗೆ ಕಳುಹಿಸಿ ಪ್ಲೇಸ್ವೆುಂಟ್ ಮಾಡಿಸುವ ಕೆಲಸ ಮಾಡಲಾಗುತ್ತಿದೆ. ಈ ಉದ್ದೇಶದಿಂದಲೇ ಇತ್ತೀಚೆಗೆ ವಿವಿಧ ಕೈಗಾರಿಕೋದ್ಯಮಿಗಳೊಂದಿಗೆ ರ್ಚಚಿಸಲಾಗಿದೆ. ಮುಂದಿನ 15-20 ದಿನಗಳಲ್ಲಿ ಅನುಷ್ಠಾನ ಮಾಡಲಾಗುತ್ತದೆ ಎಂದು ವಿಟಿಯು ಕುಲಪತಿ ಹೇಳಿದರು.
ವಿಟಿಯು ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ: ವಿಟಿಯು ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ಕಲಬುರಗಿ, ಬೆಂಗಳೂರು, ಮೈಸೂರು ಮತ್ತು ಮುದ್ದೇನಹಳ್ಳಿಯಲ್ಲಿ ಪ್ಲೇಸ್ವೆುಂಟ್ ಚಟುವಟಿಕೆಗಳನ್ನು ಮಾಡಿಸಲು ನಿರ್ಧರಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕ್ಲಸ್ಟರ್ ಹಂತದಲ್ಲಿ ಪ್ರತಿ 5 ಕಾಲೇಜಿಗೆ ಒಂದರಂತೆ ‘ಐಡಿಯಾ ಲ್ಯಾಬ್’, ಡಿಸೈನ್ ಥಿಂಕಿಂಗ್ ಮಾಡಲು ಐಡಿಯಾ ಲ್ಯಾಬ್ ಆರಂಭಿಸಲಾಗಿದೆ. ಮುದ್ದೇನಹಳ್ಳಿ ಲ್ಯಾಬ್ನಲ್ಲಿ ಈಗಾಗಲೆ ತರಬೇತಿ ನೀಡಲಾಗುತ್ತಿದೆ ಎಂದರು.
ಸಿಎಸ್ ಓದಿದ್ರಲ್ಲ, ಕೌಶಲವಿದ್ರೆ ಉದ್ಯೋಗ: ಕಂಪ್ಯೂಟರ್ ಸೈನ್ಸ್, ಮೆಕಾನಿಕಲ್ ಓದಿದ್ರೂ ಉದ್ಯೋಗ ಸಿಗುತ್ತೆ. ಆದರೆ, ವಿದ್ಯಾರ್ಥಿಗಳಲ್ಲಿ ಕೌಶಲವಿದ್ದರೆ ಸಹಜವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ವಿಟಿಯು ಸದ್ಯ ವಿವಿಧ ಕಂಪನಿಗಳೊಂದಿಗೆ ಚರ್ಚೆ ಮಾಡಲಾಗುತ್ತಿದೆ. ಕಂಪನಿಗಳು ತಮಗೆ ಯಾವ ರೀತಿಯ ಕೌಶಲ ಬೇಕು ಎಂಬುದನ್ನು ಮೊದಲೇ ತಿಳಿಸುವ ಜತೆಗೆ ಅವಶ್ಯವಿರುವ ಪಠ್ಯಕ್ರಮವನ್ನು ನೀಡಲಿದ್ದಾರೆ. ಅದರಂತೆ ಕಲಿಸಿದರೆ, ಉದ್ಯೋಗ ಪಡೆದುಕೊಳ್ಳುವುದು ಸುಲಭವಾಗಲಿದೆ. ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ವಲಯ, ಕೋರ್ ವಲಯ, ಮೆಕಾನಿಕಲ್ ಮತ್ತು ಸಿವಿಲ್ಗೆ ಬೇಕಾಗಿರುವ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಕೋರ್ಸ್ ಮುಗಿದ ಬಳಿಕ ಉದ್ಯೋಗ ಸಿಗಲಿದೆ. ಇತ್ತೀಚೆಗೆ ಕಾಲೇಜೊಂದರಲ್ಲಿ ನಡೆದ ಪ್ಲೇಸ್ವೆುಂಟ್ ಸಭೆಯಲ್ಲಿ 600 ಮೆಕಾನಿಕಲ್ ಹುದ್ದೆಗೆ ಅವಕಾಶವಿದೆ ಎಂಬ ಆಫರ್ ನೀಡಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಓದಿದವರಿಗೆ ಉತ್ಪಾದನಾ ವಲಯದಲ್ಲಿ ಕೆಲಸ ಸಿಗಲಿದೆ. ಆದ್ದರಿಂದ ಕೇವಲ ಕಂಪ್ಯೂಟರ್ ಸೈನ್ಸ್ ಓದಿದವರಿಗೆ ಮಾತ್ರ ಕೆಲಸ ಸಿಗಲಿದೆ ಎಂಬುದು ತಪು್ಪ ಕಲ್ಪನೆ ಎಂದು ವಿಟಿಯು ಕುಲಪತಿ ಹೇಳಿದರು.
ಪಾಲಕರು ವಿದ್ಯಾರ್ಥಿಗಳ ಆಸಕ್ತಿ ತಿಳಿಯಿರಿ: ಕೋರ್ಸ್ಗಳಿಗೆ ಸಂಬಂಧಿಸಿದೆ ಮಾಹಿತಿಗಳ ಕ್ರೋಡೀಕರಣಕ್ಕೆ ಈ ಮೊದಲು ಶಿಕ್ಷಕರು ಮತ್ತು ಗ್ರಂಥಾಲಯಗಳನ್ನಷ್ಟೇ ನೆಚ್ಚಿಕೊಳ್ಳಬೇಕಿತ್ತು. ಆದರೆ, ಪರಿಸ್ಥಿತಿ ಬದಲಾಗಿದೆ. ಆನ್ಲೈನ್ ಕಂಟೆಂಟ್, ಎನ್ಪಿಟಿಎಲ್ ಸೇರಿ ಹತ್ತಾರು ಮಾರ್ಗಗಳಿವೆ ಎಂದು ಹೇಳಿದರು. ಡ್ಯುಯಲ್ ಡಿಗ್ರಿ ಮಾಡಿಕೊಳ್ಳಬಹುದಾಗಿದೆ. ಇಂಜಿನಿಯರಿಂಗ್ ಜತೆಗೆ ಮತ್ತೊಂದು ಸಾಮಾನ್ಯ ಡಿಗ್ರಿ ಮಾಡಬಹುದು. ಒಂದು ಆನ್ಲೈನ್, ಮತ್ತೊಂದು ಆಫ್ಲೈನ್ ಡಿಗ್ರಿ ಮಾಡಿಕೊಳ್ಳಬಹುದಾಗಿದೆ. ಆದ್ದರಿಂದ ಪಾಲಕರು ಮೊದಲು ವಿದ್ಯಾರ್ಥಿಗಳ ಆಸಕ್ತಿಯನ್ನು ತಿಳಿಯಿರಿ. ಕಂಪ್ಯೂಟರ್ನಲ್ಲಿದ್ದರೆ ಮೆಕಾನಿಕಲ್ ಕೂಡ ಓದಬಹುದು.
ಐಯುಸಿಸಿ ಜತೆ ಒಡಂಬಡಿಕೆ: ಇಂಜಿನಿಯರಿಂಗ್ನ ಪ್ರತಿ ವಿಷಯದಲ್ಲಿ ಕನಿಷ್ಠ 30ರಿಂದ 40 ತಜ್ಞ ಶಿಕ್ಷಕರನ್ನು ಸಿದ್ಧಪಡಿಸಿವುದಕ್ಕಾಗಿ ಟೀಚಿಂಗ್ ಸ್ಕಿಲ್ಸ್ ಆರಂಭಿಸ ಲಾಗುತ್ತಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಟೀಚಿಂಗ್ ಅನ್ನು ತರಲು ‘ಐಯುಸಿಸಿ’ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಶಿಕ್ಷಕರು ಪಾಠ ಮಾಡುವುದು ಮುಖ್ಯವಲ್ಲ. ವಿದ್ಯಾರ್ಥಿಗಳಿಗೆ ಅರ್ಥವಾಗಿದೆಯೇ ಎಂಬುದನ್ನು ತಿಳಿಯಲಾಗುತ್ತದೆ.
ಬ್ರಿಡ್ಜ್ ಕೋರ್ಸ್ ಪೂರ್ಣಗೊಳಿಸದೆ ಪ್ರಮಾಣಪತ್ರ ನೀಡಲ್ಲ: ಲ್ಯಾಟರಲ್ ಎಂಟ್ರಿ ಮೂಲಕ 3ನೇ ಸೆಮಿಸ್ಟರ್ಗೆ ನೇರವಾಗಿ ದಾಖಲಾ ಗುವ ವಿದ್ಯಾರ್ಥಿಗಳಿಗೆ ‘ಗಣಿತ 1 ಮತ್ತು 2’ ಎಂಬ ಬ್ರಿಡ್ಜ್ ಕೋರ್ಸ್ ಗಳಿವೆ. ಇವುಗಳನ್ನು ಪಾಸ್ ಮಾಡದೆ ಇಂಜಿನಿಯರಿಂಗ್ ಪೂರ್ಣಪ್ರಮಾಣವಾಗಿ ಮುಗಿದಿದೆ ಎಂಬ ಪ್ರಮಾಣ ಪತ್ರ ನೀಡುವುದಿಲ್ಲ. ಆದರೆ, ಅಂಕಪಟ್ಟಿ ತಡೆಹಿಡಿಯುವುದಿಲ್ಲ ಎಂದು ಬೆಂಗಳೂರಿನ ಅಭಿಲಾಷ್ ಎಂಬ ವಿದ್ಯಾರ್ಥಿ ಪ್ರಶ್ನೆಗೆ ಡಾ. ವಿದ್ಯಾಶಂಕರ್ ಉತ್ತರಿಸಿದರು.
ಡಾ. ಅಶ್ವತ್ಥ ನಾರಾಯಣಗೆ ಧನ್ಯವಾದ: ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ಡಾ. ಎಸ್. ವಿದ್ಯಾಶಂಕರ್ ಧನ್ಯವಾದ ತಿಳಿಸಿದರು. ಏಕೆಂದರೆ, ಹಗಲು ರಾತ್ರಿ ನಮ್ಮನ್ನು ನಿದ್ದೆ ಮಾಡಲು ಬಿಡದೆ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಇದರ ದೊಡ್ಡ ಲಾಭವನ್ನು ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ಈ ಲಾಭ ಸದ್ಯಕ್ಕೆ ತಿಳಿಯುವುದಿಲ್ಲ. ಮುಂದಿನ 4-5 ವರ್ಷದಲ್ಲಿ ಪೂರ್ಣಪ್ರಮಾಣದ ಲಾಭ ದೊರೆಯಲಿದೆ. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು, ‘ಇದನ್ನು ಇನ್ನೂ 10 ವರ್ಷ ಮೊದಲೇ ಜಾರಿಗೊಳಿಸಬೇಕಿತ್ತು’ ಎಂಬ ಅಭಿಪ್ರಾಯವನ್ನು ಹೇಳಲಿದ್ದಾರೆ ಎಂದರು.
ಆನ್ಲೈನ್ ಕೋರ್ಸ್ ಶೀಘ್ರ ಆರಂಭ: ಇಂಜಿನಿಯರಿಂಗ್ ಶಿಕ್ಷಣದಲ್ಲಿ ಆನ್ಲೈನ್ ಕೋರ್ಸ್ ಗಳನ್ನು ಆರಂಭಿಸಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಅನುಮತಿ ನೀಡಬೇಕು, ಇದಕ್ಕೆ ಮಾನ್ಯತೆ ಪಡೆಯಲು ಅಕಾಡೆಮಿಕ್ ಮತ್ತು ಆಡಳಿತ ಮಂಡಳಿಯಲ್ಲಿ ರ್ಚಚಿಸಿ ಅರ್ಜಿ ಸಲ್ಲಿಸಿದ್ದು, ಅನುಮತಿ ಸಿಕ್ಕ ತಕ್ಷಣ ಆರಂಭ ಮಾಡುತ್ತೇವೆ. ಆನ್ಲೈನ್ ಕೋರ್ಸ್ ಗಳನ್ನು ಆರಂಭಿಸಲು ಎಐಸಿಟಿಇ ಸಾಕಷ್ಟು ಬದಲಾವಣೆ ತರುತ್ತಿದೆ. ಪ್ರಾಕ್ಟಿಕಲ್ ಮತ್ತು ಥಿಯರಿ ವಿಷಯಗಳನ್ನು ಒಳಗೊಂಡ ವಿಷಯಗಳಿಗೆ ಆನ್ಲೈನ್ ಕೋರ್ಸ್ಗಳನ್ನು ಆರಂಭಿಸಲಿದೆ. ಎಂದು ಮಂಡ್ಯದಲ್ಲಿ ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕಾವ್ಯಾ ಎಂಬುವರಿಗೆ ಡಾ. ಎಸ್. ವಿದ್ಯಾಶಂಕರ್ ಮಾಹಿತಿ ನೀಡಿದರು.
ದಾವಣಗೆರೆಯಲ್ಲಿ ಕೋರ್ ಸಿಸ್ಟಂ ಶುರು: ನವೋದ್ಯಮ ಆರಂಭ ಮಾಡುವವರಿಗೆ ದಾವಣಗೆರೆಯಲ್ಲಿ ಪಿಪಿಪಿ ಮಾದರಿಯಲ್ಲಿ ಕೋರ್ ಸಿಸ್ಟಂ ಅನ್ನು ಆರಂಭಿಲಾಗುತ್ತಿದೆ. 8 ಎಕರೆಯಲ್ಲಿ ನವೋದ್ಯಮ ಸ್ನೇಹಿ ವಾತಾವರಣ ಕಲ್ಪಿಸಿಕೊಡಲಾಗುತ್ತಿದೆ. ನವೋದ್ಯಮ ಆರಂಭ ಮಾಡುವವರು ಮತ್ತು ಅದಕ್ಕೆ ಪ್ರೋತ್ಸಾಹ ನೀಡುವವರನ್ನು ಒಂದು ಕಡೆ ತರಲಾಗುತ್ತಿದೆ. ಈ ಸಂಬಂಧ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಜತೆ ರ್ಚಚಿಸಲಾಗಿದೆ. ತಜ್ಞರು, ಹೂಡಿಕೆದಾರ ಏಜೆನ್ಸಿಗಳು, ಪ್ರಾಯೋಜಕರನ್ನು ಒಗ್ಗೂಡಿಸಿ ನವೋದ್ಯಮ ಆರಂಭಿಸಬೇಕಾಗುತ್ತದೆ ಎಂದು ಡಾ. ಎಸ್. ವಿದ್ಯಾಶಂಕರ್ ತಿಳಿಸಿದರು.