

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2024-25ನೇ ಸಾಲಿನಿಂದ ಕನ್ನಡ ಅಥವಾ ಇತರೆ ಮಾಧ್ಯಮದ ಜತೆಗೆ ಹೊಸದಾಗಿ ಆಂಗ್ಲ (ದ್ವಿಭಾಷಾ ಮಾಧ್ಯಮ) ಮಾಧ್ಯಮ ತರಗತಿ ಪ್ರಾರಂಭಿಸಲು ಹೊರಡಿಸಿರುವ ಆದೇಶಕ್ಕೆ ತೀವ್ರ ಆಕ್ಷೇಪ ಕೇಳಿಬಂದಿದೆ.
ಮುಖ್ಯವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಸಮಾಧಾನ ಹೊರಹಾಕಿದ್ದು, ತಕ್ಷಣವೇ ಆದೇಶ ಹಿಂಪಡೆಯುವಂತೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮೇಲೆ ಒತ್ತಡ ಹೇರಿದೆ.
ಬುಧವಾರ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸಚಿವರನ್ನು ಭೇಟಿಮಾಡಿ ಆಂಗ್ಲ (ದ್ವಿಭಾಷಾ ಮಾಧ್ಯಮ) ಮಾಧ್ಯಮ ತರಗತಿಗಳ ಪ್ರಾರಂಭದ ಬಗ್ಗೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಕುರಿತು ವಿವರವಾಗಿ ಚರ್ಚಿಸಿದರು.
ಮಕ್ಕಳ ಬೆಳವಣಿಗೆಯಲ್ಲಿ ಆರಂಭಿಕ ಕಲಿಕೆ ಮತ್ತು ಕಲಿಕೆಯ ಭಾಷೆ ನಿರ್ಣಾಯಕ ಪಾತ್ರ ವಹಿಸಲಿದೆ. ಮುಖ್ಯವಾಗಿ ಕಲಿಕೆಯು ಕನ್ನಡದಲ್ಲಿ ಇರಬೇಕು. ಮಗುವಿಗೆ ಗೊತ್ತಿರುವ ಭಾಷೆಯಲ್ಲಿ ಕಲಿಸಿದರೆ ಬೌದ್ಧಿಕ ಬೆಳವಣಿಗೆ ಸಾಧ್ಯವಾಗಲಿದೆ. ಭಾಷೆ ಎಂಬುದು ಸಂವಹನದ ಮಾಧ್ಯಮ ಮಾತ್ರವೇ ಅಲ್ಲ, ಸಂಸ್ಕೃತಿ ಮತ್ತು ಮೌಲ್ಯಯುತ ವ್ಯವಸ್ಥೆಯನ್ನು ಪರಿಚಯಿಸುವ ಸಾಧನವಾಗಿದೆ ಎಂದು ಸಚಿವರಿಗೆ ತಿಳಿಹೇಳಿದ್ದಾರೆ.
ಜತೆಗೆ ಕನ್ನಡ ಭಾಷೆಯ ನಿರಾಳತೆಯ ಸ್ವಾತಂತ್ರ್ಯವು ಮಗುವಿನಲ್ಲಿ ಆಸಕ್ತಿ, ಉತ್ಸಾಹ ಹಾಗೂ ಸಂಭ್ರಮಗಳನ್ನು ತಂದಿತ್ತರೆ, ಇಂಗ್ಲಿಷ್ ಅದನ್ನು ಮೌನಿ ಹಾಗೂ ದುಃಖಿಯನ್ನಾಗಿಸುತ್ತದೆ. ರಾಜ್ಯದ ಮಕ್ಕಳ ಚಿಂತನಶಕ್ತಿಗೆ ಕನ್ನಡ ಭಾಷೆಯೆ ಭದ್ರ ಬುನಾದಿ. ಅಷ್ಟೇ ಅಲ್ಲದೇ ತಾಯ್ನುಡಿಯಲ್ಲಿ ಶಿಕ್ಷಣ ನೀಡುವುದನ್ನು ಅಂತಾರಾಷ್ಟ್ರೀಯವಾಗಿ ಒಪ್ಪಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ 1419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2024-25ನೇ ಸಾಲಿನಿಂದ 1ನೇ ತರಗತಿಯಿಂದ ಹಾಲಿ ನಡೆಯುತ್ತಿರುವ ಕನ್ನಡ/ಇತರೆ ಮಾಧ್ಯಮದ ಜತೆಗೆ ಹೊಸದಾಗಿ ಆಂಗ್ಲ ಮಾಧ್ಯಮ (ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಾರಂಭಿಸಲು ಸರ್ಕಾರ ನಿರ್ಣಯ ಕೈಗೊಂಡಿದೆ. ಈ ಆದೇಶವು ಕನ್ನಡ ಭಾಷೆಯಲ್ಲಿ ಶಿಕ್ಷಣ ಒದಗಿಸುವುದಕ್ಕೆ ಹಿನ್ನಡೆಯನ್ನುಂಟು ಮಾಡುತ್ತದೆ. ಅಲ್ಲದೇ ಸದರಿ ಆದೇಶವು ಕನ್ನಡ ಭಾಷಾ ಕಲಿಕಾ ಅಧಿನಿಯಮ 2015ಕ್ಕೆ ವಿರುದ್ಧವಾಗಿದೆ ಎಂದು ವಿವರಿಸಿದ್ದಾರೆ.
ಅಲ್ಲದೇ ಈ ಆದೇಶವು ಕನ್ನಡ ಭಾಷೆಯ ಸಾರ್ವಭೌಮತ್ವಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಆದ್ದರಿಂದ ಈ ಆದೇಶವನ್ನು ಹಿಂಪಡೆದು ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮವನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.