

ಬೆಂಗಳೂರು: ಎಂಟರಿಂದ ಹತ್ತನೇ ತರಗತಿ ಮಕ್ಕಳಿಗಾಗಿ ಆರಂಭಿಸಿರುವ ಸೇತುಬಂಧ ಕಾರ್ಯಕ್ರಮದ ಲಾಭ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಸಿಗುವಂತಾಗಲು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್ಗಳನ್ನು ತೆರೆಯುವಂತೆ ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಕೆಲ ಗ್ರಾಮಗಳಿಗೆ ಭೇಟಿ ನೀಡಿದ್ದ ಶಿಕ್ಷಣ ಸಚಿವರು, ಅಲ್ಲಿನ ವಿದ್ಯಾರ್ಥಿಗಳ ಪಾಲಕರ ಒತ್ತಾಯದ ಮೇರೆಗೆ ಡಿಸಿಎಂಗೆ ಪತ್ರ ಬರೆದಿದ್ದಾರೆ. ಕರೊನಾದಿಂದ ಮಕ್ಕಳು ಗ್ರಾಮಗಳಲ್ಲಿಯೇ ಉಳಿದಿದ್ದು, ವಿದ್ಯುತ್ ಹಾಗೂ ಮೊಬೈಲ್ ಸಂಪರ್ಕ ಸಮಸ್ಯೆ ಕಾರಣಕ್ಕೆ ಸೇತುಬಂಧ ಕಾರ್ಯಕ್ರಮದಿಂದ ವಂಚಿತರಾಗಿದ್ದಾರೆ. ಕರೊನಾ ನಿಯಮಾವಳಿ ಪಾಲಿಸಿಕೊಂಡು ಹಾಸ್ಟೆಲ್ ತೆರೆಯಬಹುದಾಗಿದೆ. ಅರಣ್ಯ ಹಾಗೂ ಗುಡ್ಡಗಾಡುಗಳಲ್ಲಿಯಾದರೂ ಈ ಕ್ರಮ ಕೈಗೊಳ್ಳಿ ಎಂದು ಕೋರಿದ್ದಾರೆ. ಸುರೇಶ್ಕುಮಾರ್ ಪತ್ರವನ್ನು ಆಧಾರವಾಗಿಟ್ಟುಕೊಂಡು ಕಾರಜೋಳ ತಮ್ಮ ಇಲಾಖೆಯ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ.
ಸಿಬ್ಬಂದಿ ವಿರೋಧ: ಹಾಸ್ಟೆಲ್ ತೆರೆಯಬೇಕೆಂಬ ಚರ್ಚೆಗೆ ವಸತಿ ಶಾಲೆಗಳ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಬಹುತೇಕ ಹಾಸ್ಟೆಲ್ಗಳು ಕರೊನಾ ಆರೈಕೆ ಕೇಂದ್ರಗಳಾಗಿವೆ. ವಿದ್ಯಾರ್ಥಿಗಳು ಬೇರೆ ಬೇರೆ ತಾಲೂಕಿನಿಂದ ಬರುತ್ತಾರೆ. ಅವರಿಂದ ಕರೊನಾ ನಿಯಮಾವಳಿ ನಿರೀಕ್ಷೆ ಮಾಡುವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯ ನೀಡುತ್ತಿದ್ದಾರೆ.