ವಿದ್ಯಾಮಂತ್ರಿಗೆ ಕನ್ನಡ ಬರಲ್ಲ !: ಸಚಿವ ಮಧು ಬಂಗಾರಪ್ಪ ಗರಂ

Education minister Madhu bangarappa
ಶಿಕ್ಷಣ ಸಚಿವ ಮಧು ಬಂಗಾರಪ್ಪ
Published on

ಬೆಂಗಳೂರು: ತಾಂತ್ರಿಕ ಅಡಚಣೆ ಮಧ್ಯೆ ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆದಿತ್ತು. ಸಂಪರ್ಕ ವ್ಯತ್ಯಾಸದ ಮಧ್ಯೆ ‘ವಿದ್ಯಾರ್ಥಿ ಮಂತ್ರಿ ಕನ್ನಡ ಬರಲ್ಲ !’ ಎಂಬ ಧನ್ವಿಯೊಂದು ತೂರಿಬಂದು ಕಾರ್ಯಕ್ರಮದ ಗಮನಸೆಳೆಯಿತು.

ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕನ್ನಡ ಬರಲ್ಲವೆಂದರೆ ಉರ್ದು ಮಾತಾಡ್ತೀಯಾ ? ಎಂದು ನಸುನಗು ಧಾಟಿಯಲ್ಲಿ ಕೇಳಿದವರು, ಮರು ಕ್ಷಣವೇ ತಮಗೆ ಹೇಳಿದ್ದಿದು ಎಂದು ಹೊಳೆದು, ಮುಜುಗರ ಉಂಟಾಗಿ ಗರಂ ಆದರು.

ವಿಧಾನಸೌಧದಲ್ಲಿ ನೀಟ್, ಜೆಇಇ, ಸಿಇಟಿ ಉಚಿತ ತರಬೇತಿಗೆ ಚಾಲನೆ ನೀಡಿದ ಬಳಿಕ ವಿದ್ಯಾರ್ಥಿಗಳ ಜತೆಗೆ ಆನ್‌ಲೈನ್‌ನಲ್ಲಿ ಸಂವಾದ ನಡೆಯುತ್ತಿರುವ ವೇಳೆ ಈ ಪ್ರಸಂಗ ನಡೆಯಿತು. ರಾಜ್ಯದ 670 ಪಿಯು ವಿಜ್ಞಾನ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಆನ್‌ಲೈನ್‌ನಲ್ಲಿ ಕೇಳಿ ಬಂದ ಧ್ವನಿಗೆ ಮಧು ಬಂಗಾರಪ್ಪ ಸಿಡಿಮಿಡಿಗೊಂಡು, ಮಹತ್ವದ ಕಾರ್ಯಕ್ರಮದಲ್ಲಿ ನೋ ನೋ, ಈ ತರಹದ ನಡವಳಿಕೆ ಸರಿಯಲ್ಲ, ಅವನಿಗೆ ನಾಚಿಕೆಯಾಗಬೇಕು ಎಂದು ಗಂಭೀರ ವದನರಾಗಿ ಹೇಳಿದರು.

ಅಕ್ಕಪಕ್ಕದಲ್ಲಿ ಕುಳಿತಿದ್ದ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ನಿರ್ದೇಶಕಿ ಸಿಂಧೂ ಬಿ.ರೂಪೇಶ್ ಅವರನ್ನು ಉದ್ದೇಶಿಸಿ, ಹೀಗೆ ಹೇಳಿದವರು ಯಾರು ? ಎಂದು ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಸೂಚಿಸಿದರು.

ನಂತರ ಮಾಧ್ಯಮದವರತ್ತ ಹೊರಳಿ, ಇದನ್ನೇ ಹೈಲೈಟ್ ಮಾಡಬೇಡಿ. ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಉಚಿತ ತರಬೇತಿ ನೀಡುವ ಉಪಕ್ರಮಕ್ಕೆ ಪ್ರಾಮುಖ್ಯತೆ ನೀಡಿ ಎಂದು ಮಧು ಬಂಗಾರಪ್ಪ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net