

ಶಿವಮೊಗ್ಗ: ಪ್ರತಿಯೊಬ್ಬರು ಭಾರತೀಯ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಗರ ತಾಲೂಕಿನ ಆವಿನಹಳ್ಳಿ ಸಮೀಪ ಗಿಣಿವಾರದ ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಕೊಡಚಾದ್ರಿ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಸೋತಾಗ ಬೇಸರ ಮಾಡಿಕೊಳ್ಳದೆ ಜೀವನ ರೂಪಿಸಿಕೊಳ್ಳಬೇಕು. ನಿಜವಾಗಿ ನಮ್ಮವರಾರು ಎಂದು ತಿಳಿಯುವುದೇ ನಾವು ಬಿದ್ದಾಗ. ಹಣ ಬಂದಾಗ ಮಾತ್ರ ನಿನ್ನ ಅಕ್ಕ ಪಕ್ಕ ಸೇರುವವರು ಬಹಳ ಜನ ಇರುತ್ತಾರೆ. ಆದರೆ ನಿನಗೆ ರೋಗ ಬಂದಾಗ ನಿನ್ನನ್ನು ನೋಡಿಕೊಳ್ಳಲು ಒಬ್ಬರು ಬರುವುದಿಲ್ಲ ಎಂದರು.
ವಿದ್ಯಾರ್ಥಿಗಳಿಗೆ ನಿಜವಾದ ಸಂಪತ್ತು ವಿದ್ಯೆ. ಬಾಲ್ಯದಲ್ಲಿ ವಿದ್ಯೆ ಯೌವನದಲ್ಲಿ ಸಂಪತ್ತು ಗಳಿಸಬೇಕು. ಭೌತಿಕ ಶಿಕ್ಷಣದ ಜತೆಗೆ ಆಧ್ಯಾತ್ಮ ಶಿಕ್ಷಣವು ಅತ್ಯಂತ ಅವಶ್ಯಕವಾಗಿದೆ. ಮನೆ ಎಷ್ಟು ದೊಡ್ಡದಿದೆ ಎನ್ನುವುದಕ್ಕಿಂತ ಮನೆಯಲ್ಲಿ ಎಷ್ಟು ಸಂತೋಷವಾಗಿದ್ದೇವೆ ಎನ್ನುವುದು ಮುಖ್ಯ. ಬಾಲ್ಯದಲ್ಲಿ ಸಂಸ್ಕಾರ ಸಂಸ್ಕೃತಿಯನ್ನು ಕಲಿಸುವುದರ ಜತೆಗೆ ಶುದ್ಧವಾದ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಕೆಲಸ ಆಗಬೇಕು ಎಂದು ನುಡಿದರು.
ಆಪ್‌ಕೋಸ್ ಅಧ್ಯಕ್ಷ ಬಿ.ಎ.ಇಂದುಧರ ಗೌಡ ಮಾತನಾಡಿ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಗ್ರಾಮೀಣ ಪ್ರದೇಶದಲ್ಲಿನ ಜನರ ಬದುಕು ಸುಧಾರಿಸಲು ಶಿಕ್ಷಣ ತುಂಬಾ ಅಗತ್ಯ, ಸಾಂಸ್ಕೃತಿಕ ಮನಸುಗಳನ್ನು ಹೆಚ್ಚಿಸಬೇಕು, ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಅವಶ್ಯಕತೆ ಇದೆ. ಈ ಭಾಗದಲ್ಲಿ ಕೊಡಚಾದ್ರಿ ಶಾಲೆ ಮಾದರಿಯಾಗಿದೆ ಎಂದರು.
ಶಿಕ್ಷಣ ಸಂಯೋಜಕ ವಿ.ಟಿ.ಸ್ವಾಮಿ ಮಾತನಾಡಿ, ಪ್ರತಿಯೊಬ್ಬರು ಶಿಕ್ಷಣಕ್ಕೆ ಮೊದಲ ಆದ್ಯತೆಯನ್ನು ನೀಡಬೇಕು. ಉತ್ತಮ ಶಿಕ್ಷಣದಿಂದ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ. ಶಿಕ್ಷಣಕ್ಕಾಗಿ ಉತ್ತಮ ಪರಿಸರ ನಿರ್ಮಾಣ ಅತಿ ಮುಖ್ಯವಾಗಿದೆ. ಶಾಲೆ ಮಾತ್ರವಲ್ಲ ಮನೆಮನೆಗಳು ಶಾಲೆಗಳಾಗಬೇಕು ಪಾಲಕರೂ ಶಿಕ್ಷಕರಾಗಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಕೆ.ಆರ್.ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಶಾಲೆಯ ಸ್ಥಾಪಕ ಕೆ.ಎಚ್.ರಾಜಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಕೋಳೂರು ಗ್ರಾಪಂ ಅಧ್ಯಕ್ಷ ಜಿ.ವಿ.ನವೀನ್, ಜೈ ಕರ್ನಾಟಕ ಮಲ್ಲಕಂಬ ಅಕಾಡೆಮಿ ಸಂಸ್ಥಾಪಕ ಸಿದ್ಧಾರೂಡ ಹೂಗಾರ್, ಮುಖ್ಯ ಶಿಕ್ಷಕಿ ನಂದಕುಮಾರಿ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.