

ಶಿವಮೊಗ್ಗ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದು ಅದನ್ನು ತಮ್ಮ ಶಿಕ್ಷಕರಿಗೆ ಕೊಡುಗೆಯಾಗಿ ನೀಡಬೇಕೆಂದು ಜಿಪಂ ಸಿಇಒ ಹೇಮಂತ್ ಹೇಳಿದರು.
ದುರ್ಗಿಗುಡಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆ ಕುರಿತು ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಜೀವನದ ಮುಖ್ಯಘಟ್ಟ. ಇಲ್ಲಿ ಉತ್ತೀರ್ಣರಾದರೆ ಹೆಚ್ಚಿನ ವಿದ್ಯಾಭ್ಯಾಸ ಸಾಧ್ಯ. ದೇಶ ಅಭಿವೃದ್ಧಿಯಾದಂತೆ ವಿದ್ಯಾರ್ಹತೆಯು ಹೆಚ್ಚು ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಎಲ್ಲರೂ ಉತ್ತೀರ್ಣರಾಗಬೇಕು ಎಂದು ತಿಳಿಸಿದರು.
ಜೀವನದಲ್ಲಿ ಎಲ್ಲರಿಗೂ ಶಿಕ್ಷಣ ಮುಖ್ಯ. ಪಾಲಕರು ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಿಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆ ಹೋಗಬೇಕಾದರೆ ಅದಕ್ಕೆ ಶಿಕ್ಷಣ ಮಾನದಂಡವಾಗಿರುತ್ತದೆ. ಮಕ್ಕಳನ್ನು ಶಾಲೆಯಿಂದ ಬಿಡಿಸುವ ಆಲೋಚನೆಯನ್ನು ಪಾಲಕರು ಬಿಡಬೇಕೆಂದು ಹೇಳಿದರು.
ಪರೀಕ್ಷೆಗೆ ಇನ್ನೂ 30 ದಿನವಿದೆ. ವಿದ್ಯಾರ್ಥಿಗಳು ಶಿಕ್ಷಕರು ಹೇಳಿಕೊಟ್ಟಿರುವ ಪಾಠಗಳ ಮನನ ಮಾಡಿಕೊಳ್ಳಬೇಕು. ಪರೀಕ್ಷೆ ಹತ್ತಿರ ಇರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ತಪ್ಪಿಸದೆ ಶಿಕ್ಷಕರ ಬಳಿ ಪರೀಕ್ಷೆಯ ಕುರಿತಾಗಿ ಚರ್ಚೆ ನಡೆಸಬೇಕು ಎಂದರು.
ಬಿಇಒ ರಮೇಶ್ ಮಾತನಾಡಿ, ಪಾಲಕರು ಮಕ್ಕಳಿಗೆ ಬೆಂಬಲವಾಗಿ ನಿಲ್ಲಬೇಕು. ಓದುವಂತಹ ವಾತಾವರಣವನ್ನು ಮನೆಯಲ್ಲಿ ನಿರ್ಮಾಣ ಮಾಡಬೇಕು. ಮಕ್ಕಳ ವಿದ್ಯಾಭ್ಯಾಸ ಮುಗಿಯುವವರೆಗೂ ಪಾಲಕರು ತಮ್ಮ ಜವಾಬ್ದಾರಿ ಮರೆಯಬಾರದು. ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಸಲಹೆ ನೀಡಿದರು. ಮುಖ್ಯ ಶಿಕ್ಷಕ ಮೋಹನ್ ಉಪಸ್ಥಿತರಿದ್ದರು.