ಸಮರ್ಥ ಜೀವನ ನಿರ್ವಹಣೆಗೆ ಶಿಕ್ಷಣ ಅಗತ್ಯ

28 KRN-2
Published on

ಕೆ.ಆರ್.ನಗರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮರ್ಥ ಜೀವನ ನಿರ್ವಹಣೆ ಮಾಡಲು ಶಿಕ್ಷಣ ಬಹಳ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಇದನ್ನು ಮನಗಂಡು ಶಿಕ್ಷಿತರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಹೇಳಿದರು.


ತಾಲೂಕಿನ ಕೆಸ್ತೂರುಕೊಪ್ಪಲು ಗ್ರಾಮದ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆಸುವ ಟ್ಯೂಷನ್ ತರಗತಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಇಂತಹ ಸಂಘ- ಸಂಸ್ಥೆಗಳು ಮತ್ತು ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಮಕ್ಕಳನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಮನೆಪಾಠ ಮಾಡುವ ಶಿಕ್ಷಕರು ಇಲ್ಲದಂತಾಗಿದ್ದು, ಇದನ್ನು ಅರಿತ ಗ್ರಾಮಾಭಿವೃದ್ಧಿ ಸಂಸ್ಥೆ ಹತ್ತನೇ ತರಗತಿ ಮಕ್ಕಳಿಗೆ ಮೂರು ತಿಂಗಳ ಕಾಲ ಟ್ಯೂಷನ್ ನಡೆಸುತ್ತಾರೆ. ವಿದ್ಯಾರ್ಥಿಗಳು ತಪ್ಪದೆ ಹಾಜರಾಗಿ ಈ ಬಾರಿ ಶೇ.100 ಫಲಿತಾಂಶ ಪಡೆಯುವ ಗುರಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗ್ರಾಮೀಣ ಜನರ ಉದ್ಧಾರಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುವುದರ ಜತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವ ಈ ರೀತಿಯ ಕಾರ್ಯಕ್ರಮ ಸೇರಿದಂತೆ ಬಡವರಿಗಾಗಿ ಉಪಯುಕ್ತ ಸವಲತ್ತುಗಳನ್ನು ನೀಡುತ್ತಿರುವುದರಿಂದ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಗ್ರಾಮೀಣ ಜನತೆ ಪೂಜ್ಯ ಮನೋಭಾವದಿಂದ ಕಾಣುತ್ತಿದ್ದಾರೆ ಎಂದು ಹೇಳಿದರು.
ತಾಲೂಕು ಯೋಜನಾಧಿಕಾರಿ ರಮೇಶ್ ಮಾತನಾಡಿ, 10ನೇ ತರಗತಿ ವಿದ್ಯಾರ್ಥಿಗಳಿಗೆ ತಿರುವಿನ ಘಟ್ಟವಾಗಿದ್ದು, ಹಳ್ಳಿಯ ಮಕ್ಕಳು ಶಿಕ್ಷಿತರಾಗಬೇಕು ಎಂಬ ಉದ್ದೇಶದಿಂದ ಟ್ಯೂಷನ್ ಕ್ಲಾಸ್‌ಗಳನ್ನು ಆರಂಭಿಸಲಾಗಿದೆ. ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಿಗೆ ಅವಶ್ಯವಿರುವ ಎಂಟು ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ವೃತ್ತಿಪರ ತರಗತಿಗಳು ಸೇರಿದಂತೆ ಉನ್ನತ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಪಾಲಕರು ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಸದಸ್ಯರಾಗಿರಬೇಕು. ಅಂತಹವರ ಮಕ್ಕಳಿಗೆ ತಿಂಗಳಿಗೆ ಒಂದು ಸಾವಿರ ರೂ. ನೀಡಲಾಗುತ್ತದೆ. ಸಂಸ್ಥೆ ವತಿಯಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾಲೇಜು ಪ್ರಾಂಶುಪಾಲ ನಾಗರಾಜು, ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮ, ಉಪಾಧ್ಯಕ್ಷೆ ಪ್ರಭಾವತಿ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಶಿಕ್ಷಣ ಸಂಯೋಜಕ ಜಗದೀಶ್, ಮುಖ್ಯ ಶಿಕ್ಷಕ ಧನಂಜಯ, ಶಿಕ್ಷಕರಾದ ಮಹದೇವ್, ರೂಪಾ, ಯೋಜನೆಯ ಭವ್ಯಾ, ವೀಣಾ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net