

ಶಿವಮೊಗ್ಗ: ಶಿಕ್ಷಣವೆಂಬುದು ಜೀವನದಲ್ಲಿ ಸಿಗುವ ಮಹತ್ತರ ಅವಕಾಶ. ಅದನ್ನು ಕಳೆದುಕೊಳ್ಳಬಾರದು. ನಾವು ಓದಿದ ಶಿಕ್ಷಣ ಸಂಸ್ಥೆ ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದು ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾ ಕಾವೇರಿ ಹೇಳಿದರು.
ನಗರದ ಬಸವೇಶ್ವರ ಅಕಾಡೆಮಿ ಆಫ್ ಎಜುಕೇಶನ್‌ನ ಬಸವೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪಾಲಕರ ಕೆಟ್ಟ ಚಟಗಳು, ಮನೆಯಲ್ಲಿನ ಬಡತನ, ಆರ್ಥಿಕ ಸಮಸ್ಯೆಗಳಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಮನೆ ಕೆಲಸಕ್ಕೆ ಸೇರಿ ದೌರ್ಜನ್ಯಕ್ಕೆ ಒಳಗಾದವರಿದ್ದಾರೆ. ಅನೇಕ ಮಕ್ಕಳಿಗೆ ಸಮಾಲೋಚನೆಯ ಅವಶ್ಯಕತೆ ಇರುತ್ತದೆ. ಭವಿಷ್ಯದ ಒಳಿತಿಗೆ ಶಿಕ್ಷಣ ಅವಶ್ಯ ಎಂದರು.
ಮನೆಯವರ ಒತ್ತಾಯಕ್ಕಾಗಿ ಅಥವಾ ಅಂಕ ಪಡೆಯಬೇಕೆಂಬ ಕಾರಣಕ್ಕೆ ಶಿಕ್ಷಣದ ಹಾದಿ ಹಿಡಿಯುವ ಬದಲು ಭವಿಷ್ಯದ ದೃಷ್ಟಿಯಿಂದ ಕಲಿಕೆಯಲ್ಲಿ ತೊಡಗಬೇಕು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕರಾದ ಎಚ್.ಎಸ್.ಶಂಕರ್, ಗೌರವಾಧ್ಯಕ್ಷ ಕೆ.ಸಿ.ನಾಗರಾಜ್, ಕಾರ್ಯದರ್ಶಿ ಎಸ್.ಪಿ.ಜಗನ್ನಾಥ್, ಪ್ರಾಚಾರ್ಯರಾದ ಕೆ.ಎಚ್.ರಾಜು, ಉಪನ್ಯಾಸಕರಾದ ಅಂಬಿಕಾ, ಪ್ರತಿಭಾ, ಜಿ.ಲತಾ, ಕೆ.ಜಿ.ಮೀನಾಕ್ಷಿ ಮುಂತಾದವರಿದ್ದರು.