ವಿಮೋಚನೆಗೊಂಡ ಶಿಕ್ಷಣದಿಂದ ಆತ್ಮವಿಶ್ವಾಸ; ಬರಗೂರು ರಾಮಚಂದ್ರಪ್ಪ ಅಭಿಮತ

Anandamarga
Published on

ಬೆಂಗಳೂರು: ಸೆರೆಮನೆಯಲ್ಲಿದ್ದ ಶಿಕ್ಷಣವನ್ನು ಅನೇಕ ಸಾಧಕರು ವಿಮೋಚನೆ ಮಾಡಿದರು. ವಿಮೋಚನೆಗೊಂಡ ಶಿಕ್ಷಣ ಮಣ್ಣಿನ ಮನೆಗಳಿಗೆ ಬಂತು, ಗುಡಿಸಲುಗಳಿಗೆ ಬಂತು, ಮಹಿಳೆಯರಿಗೆ ಬಂತು ಈ ಮುಖಾಂತರ ನಮಗೆಲ್ಲ ಆತ್ಮವಿಶ್ವಾಸವನ್ನು ತುಂಬಿತು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಇತ್ತೀಚೆಗೆ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಮಂಗಳ ಮಂಟಪ ಸಭಾಂಗಣದಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲಾ ಉಪನಿರ್ದೇಶಕ ಎ. ಆನಂದರಾಜ್ ಅವರ ಅಭಿನಂದನಾ ಸಮಾರಂಭದಲ್ಲಿ ‘ಆನಂದಮಾರ್ಗ’ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿ, ಮಾತನಾಡಿದರು.

ಶಿಕ್ಷಣದಿಂದ ಮಣ್ಣಿನ ಮನೆಗಳ ಮೌನ ಮಾತನಾಡಲು ಶುರು ಮಾಡಿತು. ಹೆಣ್ಣಿನ ಮನಸ್ಸು ಬಂಧಮುಕ್ತವಾಯಿತೆಂದು ಹೇಳುತ್ತಾ, ನಿಜವಾದ ಅರ್ಥದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವುದು ಶ್ರೇಷ್ಠವಾದ ಕೆಲಸ. ಶಿಕ್ಷಣದ ಮೂಲಕ ನಮ್ಮೊಳಗಿನ ಮೃಗೀಯತೆಯನ್ನು ಕಳೆದುಕೊಳ್ಳಬೇಕಾಗಿದೆ. ಮೃಗೀಯತೆಯನ್ನು ಕಳೆದುಕೊಳ್ಳುವ ಮಾನಸಿಕ ಸಿದ್ಧತೆಯನ್ನು ಶಿಕ್ಷಕರುಗಳು ಮಾಡಬೇಕಾಗಿದೆ ಎಂದು ಬರಗೂರು ವಿವರಿಸಿದರು.

ಕಾರ್ಯಕ್ರಮದಲ್ಲಿ ಆನಂದರಾಜ್ ದಂಪತಿಗಳನ್ನು ಸನ್ಮಾನಿಸಿ, ‘ಆನಂದಮಾರ್ಗ’ ಅಭಿನಂದನಾ ಗ್ರಂಥವನ್ನು ಅರ್ಪಿಸಲಾಯಿತು. ಸಮಾರಂಭದಲ್ಲಿ ಜಿ. ನಾಗಣ್ಣ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಶ್ವೇತ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಶೀಲಾ ಪ್ರಕಾಶ್,ರಾಜಗೋಪಾಲ್, ತಿಮ್ಮಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net