

ನವದೆಹಲಿ: ಕೇಂದ್ರ ಬಜೆಟ್ನಲ್ಲಿ ವಿದ್ಯಾರ್ಥಿಗಳಿ ಬಂಪರ್ ಘೋಷಣೆ ಮಾಡಿರುವ ವಿತ್ತಸಚಿವೆ ನಿರ್ಮಲಾ ಸೀತಾರಾಮನ್, ದೇಶೀಯ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ರೂ.ವರೆಗಿನ ಸಾಲಗಳಿಗೆ ಸರ್ಕಾರವು ಹಣಕಾಸಿನ ನೆರವು ನೀಡುತ್ತದೆ ಎಂದು ಘೋಷಿಸಿದರು.
ದೇಶೀಯ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ರೂ.ವರೆಗಿನ ಸಾಲಕ್ಕಾಗಿ ಇ-ವೋಚರ್‌ಗಳನ್ನು ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ನೇರವಾಗಿ ಶೇ. 3% ವಾರ್ಷಿಕ ಬಡ್ಡಿ ರಿಯಾಯಿತಿಗಾಗಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.
ಉದ್ಯಮದ ಸಹಯೋಗದೊಂದಿಗೆ ಕೆಲಸ ಮಾಡುವ ಮಹಿಳೆಯರಿಗೆ ವಸತಿ ನಿಲಯಗಳು ಮತ್ತು ಶಿಶುವಿಹಾರಗಳನ್ನು ಸ್ಥಾಪಿಸಲಾಗುವುದು. ಪ್ರತಿ ವರ್ಷ 25,000 ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮಾದರಿ ಕೌಶಲ್ಯ ಸಾಲ ಯೋಜನೆಯನ್ನು ಪರಿಷ್ಕರಿಸಲು ಕೇಂದ್ರ ಬಜೆಟ್ 2024-25 ಪ್ರಸ್ತಾಪಿಸುತ್ತದೆ. ಇದರ ಅಡಿಯಲ್ಲಿ 7.5 ಲಕ್ಷ ರೂ.ವರೆಗಿನ ಸಾಲವನ್ನು ಸರ್ಕಾರ-ಉತ್ತೇಜಿತ ನಿಧಿಯಿಂದ ನೀಡಲಾಗುವುದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3ನೇ ಅವಧಿಯ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಇದಾಗಿದ್ದು, ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 7ನೇ ಬಜೆಟ್ ಆಗಿದೆ. ಈ ಬಾರಿಯು ಸೂಟ್ಕೇಸ್ ಸಂಪ್ರದಾಯವಿಲ್ಲ ಮತ್ತು ಮುದ್ರಣದ ಪ್ರತಿಗಳು ಇಲ್ಲ. ಕಳೆದ ಬಾರಿಯಂತೆ ಇ ಬಜೆಟ್ ಮಂಡನೆಯಾಗುತ್ತಿದೆ. ಕಳೆದ ಬಾರಿಯಂತೆ “ಬಹಿ ಖಾತಾ” ಸಂಪ್ರದಾಯವನ್ನು ಬದಿಗಿಟ್ಟು ಟ್ಯಾಬ್ ಮೂಲಕ ಆಯವ್ಯಯ ಮಂಡನೆ ಮಾಡುತ್ತಿದ್ದಾರೆ. (ಏಜೆನ್ಸೀಸ್)