

ಕರೊನೋತ್ತರ ದಿನಗಳಲ್ಲಿ ಉತ್ಪಾದಕತೆ ಹೆಚ್ಚಿಸಲು, ಉದ್ಯಮಗಳನ್ನು, ಹೂಡಿಕೆಯನ್ನು ಆಕರ್ಷಿಸಲು ಎಲ್ಲ ಸರ್ಕಾರಗಳು ಹರಸಾಹಸ ಪಡುತ್ತಿವೆ. ಹಲವು ವಿನಾಯ್ತಿ, ಸೌಲಭ್ಯಗಳನ್ನು ನೀಡಿ ಕೈಗಾರಿಕೆಗಳನ್ನು ಆಕರ್ಷಿಸಲು ಯತ್ನಿಸುತ್ತವೆ. ಇದೇ ಕಾರಣಕ್ಕೆ ಮೂಲಸೌಕರ್ಯವನ್ನೂ ಹೆಚ್ಚಿಸುತ್ತಿವೆ. ಉದ್ಯೋಗಸೃಷ್ಟಿಯ ವೇಗ, ಪ್ರಮಾಣ ಮುಂದಿನ ದಿನಗಳಲ್ಲಿ ಏರಿಕೆ ಆಗಬೇಕಿದೆ. ಚೀನಾದಿಂದ ಕಾಲ್ತೆಗೆಯುವ ಕಂಪನಿಗಳು ಕರ್ನಾಟಕಕ್ಕೆ ಬರುವಂತೆ ಮಾಡಲು ರಾಜ್ಯ ಸರ್ಕಾರ ಹಲವು ಪ್ರಯತ್ನ ಮಾಡುತ್ತಿದೆ. ಭೌಗೋಳಿಕ ಪರಿಸರ, ಮೂಲಸೌಕರ್ಯ, ಕೌಶಲ, ಮಾನವ ಸಂಪನ್ಮೂಲ ಹೀಗೆ ವಿವಿಧ ಕಾರಣಗಳಿಂದ ಕರ್ನಾಟಕ ಬಂಡವಾಳ ಹೂಡಿಕೆಗೆ ಪ್ರಶಸ್ತವಾಗಿದೆ. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ಹೊಸ ಕೈಗಾರಿಕಾ ನೀತಿಯನ್ನು ಬಿಡುಗಡೆ ಮಾಡಿರುವ ಸರ್ಕಾರ, ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಂಬಂಧ ಮಂಗಳವಾರ ‘ಕೈಗಾರಿಕಾ ನೀತಿ 2020-25 ಕೈಪಿಡಿ’ಯನ್ನು ಬಿಡುಗಡೆ ಮಾಡಿದೆ.
ಮುಂದಿನ 5 ವರ್ಷದಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಆಕರ್ಷಣೆ, 20 ಲಕ್ಷ ಉದ್ಯೋಗ ಸೃಷ್ಟಿ, ಕೈಗಾರಿಕಾ ಬೆಳವಣಿಗೆ ದರ ಶೇಕಡ 10ರಷ್ಟು ಸಾಧಿಸುವುದು, ಕೈಗಾರಿಕೆಗೆ ಭೂಮಿ ಖರೀದಿ ಪ್ರಕ್ರಿಯೆ ಸರಳಗೊಳಿಸುವುದು ಸೇರಿ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತಿದೆ. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್, ಹುಬ್ಬಳ್ಳಿ-ಧಾರವಾಡದಲ್ಲಿ ಎಫ್ಎಂಸಿಜಿ ಕ್ಲಸ್ಟರ್, ಯಾದಗಿರಿ ಜಿಲ್ಲೆಯಲ್ಲಿ ಫಾರ್ವ ಕ್ಲಸ್ಟರ್ ಅಭಿವೃದ್ಧಿಪಡಿಸಲಾಗುತ್ತಿರುವುದು ಒಂದಿಷ್ಟು ಭರವಸೆ ಮೂಡಿಸಿದೆ. ರಾಜ್ಯದಲ್ಲಿ 2020ರ ಜನವರಿಯಿಂದ ಅಕ್ಟೋಬರ್ವರೆಗಿನ ಅವಧಿಯಲ್ಲಿ 1,54,937 ಕೋಟಿ ರೂ. ಮೊತ್ತದ 95 ಹೂಡಿಕೆ ಪ್ರಸ್ತಾವನೆಗಳು ನೋಂದಣಿಯಾಗಿವೆ. ದೇಶದಲ್ಲಿ ಒಟ್ಟಾರೆ ನೋಂದಣಿಯಾಗಿರುವ ಹೂಡಿಕೆ ಪ್ರಸ್ತಾವನೆಯ ಶೇಕಡ 41 ಕರ್ನಾಟಕಕ್ಕೇ ದಕ್ಕಿವೆ ಎಂದು ಕೈಗಾರಿಕಾ ಸಚಿವರು ಮಾಹಿತಿ ನೀಡಿದ್ದಾರೆ.
ಹೊಸ ಕೈಗಾರಿಕಾ ನೀತಿ ಸಮರ್ಪಕವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕಿರುವುದು ಸರ್ಕಾರದ ಕರ್ತವ್ಯ. ಏಕೆಂದರೆ, ಬಂಡವಾಳ ಹೂಡಿಕೆ ಸಮಾವೇಶಗಳೂ ನಮ್ಮಲ್ಲಿ ಬಹು ಉತ್ಸಾಹದಿಂದ ನಡೆಯುತ್ತವೆ. ಸರ್ಕಾರದ ಆಶ್ವಾಸನೆಗಳನ್ನು ನಂಬಿ ಕಂಪನಿಗಳು ಒಡಂಬಡಿಕೆ ಮಾಡಿಕೊಳ್ಳುತ್ತವೆ. ಆದರೆ, ಅವು ಉದ್ಯಮ ಆರಂಭಿಸಲು ಮುಂದಾದಾಗ ಹಲವು ಪ್ರಾಯೋಗಿಕ ಸಮಸ್ಯೆಗಳು ಎದುರಾಗುತ್ತವೆ. ಮಂಜೂರಾತಿಗೆ ವಿಳಂಬ, ಭೂಮಿ ಸಿಗಬೇಕಾದರೆ ಅಲೆದಾಟ, ಸರ್ಕಾರಿ ಕಚೇರಿಗಳ ನಿಧಾನಗತಿ, ಅಧಿಕಾರಿಗಳು ನೀಡುವ ಸಬೂಬು ಇದರಿಂದ ರೋಸಿ ಹೋಗಿ ಎಷ್ಟೋ ಉದ್ಯಮಗಳು ಇತರ ರಾಜ್ಯಗಳತ್ತ ಮುಖ ಮಾಡುತ್ತವೆ.
ಈ ಕಹಿಸತ್ಯ ಸರ್ಕಾರಕ್ಕೆ ಗೊತ್ತೇ ಇದೆ. ಆದರೆ, ವ್ಯವಸ್ಥೆಯಲ್ಲಿನ ಜಡತ್ವ ಮತ್ತು ಲಂಚದ ಹಾವಳಿ ಸಂಪೂರ್ಣವಾಗಿ ತೊಡೆದು ಹಾಕುವವರೆಗೂ ಸಮರ್ಪಕವಾದ ಕೈಗಾರಿಕಾಸ್ನೇಹಿ ವಾತಾವರಣ ಸೃಷ್ಟಿಸುವುದು ಸುಲಭವಲ್ಲ. ಕೈಗಾರಿಕೋದ್ಯಮಿಗಳ ಸಮಸ್ಯೆಗೆ ಕಿವಿಯಾಗಿ, ತಕ್ಷಣ ಸ್ಪಂದಿಸುವುದು, ಉದ್ಯಮಗಳು ಇಲ್ಲಿನ ನೆಲದ ಕಾನೂನುಗಳಿಗೆ ಪೂರಕವಾಗಿ ನಡೆದುಕೊಂಡು ಸ್ಥಳೀಯರಿಗೆ ಕೆಲಸದಲ್ಲಿ ಹೆಚ್ಚಿನ ಆದ್ಯತೆ ನೀಡುವುದು, ಉತ್ಪಾದನೆಯಲ್ಲಿ ಸ್ಥಳೀಯ ಸಂಪನ್ಮೂಲವನ್ನು ಬಳಸುವುದು ಸೇರಿ ಹಲವು ಸಂಗತಿಗಳಿಗೆ ಪ್ರಾಮುಖ್ಯ ನೀಡಬೇಕು. ಹೊಸ ಕೈಗಾರಿಕಾ ನೀತಿಯ ಉತ್ಸಾಹದಲ್ಲಿರುವ ಸರ್ಕಾರ ಅದರ ಅನುಷ್ಠಾನದ ಹಂತದಲ್ಲಿ ಯಾವುದೇ ಲೋಪದೋಷಗಳು ಸುಳಿಯದಂತೆ ಎಚ್ಚರಿಕೆ ವಹಿಸಿದಲ್ಲಿ, ಕರ್ನಾಟಕದ ವರ್ಚಸ್ಸು ಹೆಚ್ಚುವುದರಲ್ಲಿ ಅನುಮಾನವಿಲ್ಲ.