ಸಂಪಾದಕೀಯ: ವಕ್ಛ್ ಸುಧಾರಣೆಯ ದಾರಿ

-67f0139526bf5
Published on

ವಕ್ಛ್ ತಿದ್ದುಪಡಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯ ಅಂಗೀಕಾರ ಪಡೆದುಕೊಂಡಿರುವುದು ಐತಿಹಾಸಿಕ ಬೆಳವಣಿಗೆ. ರಾಷ್ಟ್ರಪತಿಗಳ ಅಂಕಿತದ ಬಳಿಕ ಕಾನೂನಾಗಿ ಜಾರಿಗೆ ಬರಲಿದೆ.

ಸಮರ್ಪಕ ಚರ್ಚೆ ನಡೆಸದೆ ವಿಧೇಯಕಗಳನ್ನು ಅಂಗೀಕರಿಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿತ್ತು. ಆದರೆ, ವಕ್ಛ್ ತಿದ್ದುಪಡಿ ಮಸೂದೆಯ ಬಗ್ಗೆ ಲೋಕಸಭೆಯಲ್ಲಿ 12 ಗಂಟೆ ಹಾಗೂ ರಾಜ್ಯಸಭೆಯಲ್ಲಿ 17 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದಿರುವುದು, ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಸಕ್ರಿಯವಾಗಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿರುವುದು ಸಂಸದೀಯ ಮೌಲ್ಯಗಳಿಗೆ ಪೂರಕ. ಕಾಲಕಾಲಕ್ಕೆ ಕಾಯ್ದೆಗಳಲ್ಲಿ ಬದಲಾವಣೆ, ಸುಧಾರಣೆ ಅಗತ್ಯ.

ಅದರಲ್ಲೂ, ದೇಶದ ಬೇರೆ-ಬೇರೆ ರಾಜ್ಯಗಳ ಹೈಕೋರ್ಟ್​ಗಳಲ್ಲಿ 2022ರಿಂದ 2025ರ ಜನವರಿವರೆಗೆ ವಕ್ಛ್ ಆಕ್ಟ್​ಗೆ ಸಂಬಂಧಿಸಿದಂತೆ 120 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 15 ಅರ್ಜಿ ಮುಸ್ಲಿಮರಿಂದಲೇ ಸಲ್ಲಿಕೆಯಾಗಿವೆ. ವಕ್ಛ್ ಆಕ್ಟ್​ನ ವಿಧಿ-40ರ ಅನ್ವಯ ಯಾವುದೇ ಆಸ್ತಿಯನ್ನು ವಕ್ಛ್ ಆಸ್ತಿ ಎಂದು ಘೋಷಿಸಲಾಗುತ್ತದೆ ಮತ್ತು ವಕ್ಛ್ ಟ್ರಿಬ್ಯೂನಲ್​ನ ಈ ಆದೇಶದ ವಿರುದ್ಧ ನ್ಯಾಯಾಲಯಕ್ಕೂ ಹೋಗಲು ಸಾಧ್ಯವಾಗುವುದಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.

ಅಲ್ಲದೆ, ಭಾರತದಲ್ಲಿ ಮುಸ್ಲಿಂ, ಜೈನ, ಕ್ರೖೆಸ್ತ, ಸಿಖ್ ಹೀಗೆ ಎಲ್ಲ ಅಲ್ಪಸಂಖ್ಯಾತರ ಧಾರ್ವಿುಕ ಟ್ರಸ್ಟ್ ಹಾಗೂ ಟ್ರಸ್ಟಿಗಳಿಗೆ ಒಂದು ಕಾನೂನು ಇರಬೇಕು, ಧಾರ್ವಿುಕ ಆಧಾರದಲ್ಲಿ ಯಾವುದೇ ಟ್ರಿಬ್ಯೂನಲ್ ಇರಬಾರದು ಎಂಬುದು ಇವರ ಆಗ್ರಹ.

ಇನ್ಮುಂದೆ ದಾಖಲೆಗಳಿಲ್ಲದೆ ಯಾವುದೇ ಜಮೀನನ್ನು ವಕ್ಛ್ ಆಸ್ತಿ ಎಂದು ಹೇಳುವಂತಿಲ್ಲ. ಜತೆಗೆ ವಕ್ಛ್ ಮಂಡಳಿಯಲ್ಲಿ ಮಹಿಳೆಯರಿಗೆ ಸ್ಥಾನ ಕಲ್ಪಿಸಲಾಗಿದೆ. ಆಸ್ತಿಯ ಪಾರದರ್ಶಕ ನಿರ್ವಹಣೆಗೆ ಸಮರ್ಪಕ ವ್ಯವಸ್ಥೆಯ ಅಗತ್ಯವಿತ್ತು, ವಕ್ಛ್ ತಿದ್ದುಪಡಿ ಮಸೂದೆ ಆ ಎಲ್ಲ ಕಳವಳಗಳಿಗೆ ಉತ್ತರ ನೀಡಿದೆ.

ಹಾಗಾಗಿ, ಇದನ್ನು ಎಲ್ಲ ರಾಜಕೀಯ ಪಕ್ಷಗಳು ಅವಲೋಕಿಸಬೇಕು. ವಕ್ಛ್ ಮಂಡಳಿ ಅಂದಾಜು 1.2 ಲಕ್ಷ ಕೋಟಿ ರೂ.ಮೌಲ್ಯದ 9.4 ಲಕ್ಷ ಎಕರೆ ಜಮೀನನ್ನು ಹೊಂದಿದೆ. ಆದರೆ, ಈ ಭೂಮಿಯನ್ನು ರಾಜಕಾರಣಿಗಳು, ಪ್ರಭಾವಿಗಳು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿದ್ದಾರೆ, ಬಡ ಮುಸ್ಲಿಮರ ಹಿತವನ್ನು ಕಾಪಾಡಲು, ಅವರ ಅಭಿವೃದ್ಧಿಗೆ ಶ್ರಮಿಸಲು ವಕ್ಛ್ ಆಡಳಿತ ಮಂಡಳಿ ವಿಫಲವಾಗಿದೆ ಎಂಬ ವ್ಯಾಪಕ ಆಕ್ಷೇಪ ಮುಸ್ಲಿಂ ಸಮುದಾಯದವರಿಂದಲೇ ದೊಡ್ಡ ದನಿಯಲ್ಲಿ ಕೇಳಿಬಂದಿತ್ತು. ಹಾಗಾಗಿಯೇ, ದೆಹಲಿ, ಭೋಪಾಲ್ ಸೇರಿದಂತೆ ದೇಶದ ಹಲವು ಮಹಾನಗರಗಳಲ್ಲಿ ಹಲವು ಮುಸ್ಲಿಂ ಸಂಘಟನೆಗಳು, ಅದರಲ್ಲೂ ಮುಸ್ಲಿಂ ಮಹಿಳೆಯರು ವಕ್ಛ್ ಸುಧಾರಣೆಯನ್ನು ಸ್ವಾಗತಿಸಿದ್ದಾರೆ.

ಇದು ಕಾನೂನು ಆದ ಮೇಲೂ ಅದರ ಸಮರ್ಪಕ ಮತ್ತು ಪರಿಣಾಮಕಾರಿ ಅನುಷ್ಠಾನದ ನಿಟ್ಟಿನಲ್ಲಿ ಸರ್ಕಾರದ ಮುಂದೆ ಹಲವು ಸವಾಲುಗಳಿರುವುದು ನಿಜ. ಪ್ರಭಾವಿಗಳ ಹಿಡಿತದಿಂದ ಭೂಮಿಯನ್ನು ಬಿಡಿಸಿಕೊಳ್ಳುವುದು ಮತ್ತು ವಕ್ಛ್ ಆಸ್ತಿ ಸಂರಕ್ಷಣೆಯ ಕಾರ್ಯ ನಡೆಯಬೇಕಿದೆ. ಅಲ್ಲದೆ, ಕೆಲ ರಾಜಕೀಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ, ಮತಬ್ಯಾಂಕ್ ತಪ್ಪಿಹೋಗುವ ಭಯದಿಂದ ಅಲ್ಪಸಂಖ್ಯಾತರಲ್ಲಿ ಗೊಂದಲ ಸೃಷ್ಟಿಸುವ ಯತ್ನ ನಡೆಸುತ್ತಿರುವುದು ದುರದೃಷ್ಟಕರ. ಹಾಗಾಗಿ, ವಕ್ಛ್ ಸುಧಾರಣೆ, ವಕ್ಛ್ ಮಂಡಳಿ ಕಾರ್ಯನಿರ್ವಹಣೆಯ ಕುರಿತಂತೆ ಸರ್ಕಾರ ಮುಸ್ಲಿಂ ಸಮುದಾಯದಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕಿದೆ. ಕೆಲ ರಾಜ್ಯಗಳಲ್ಲಿ ಪ್ರತಿಭಟನೆಯೂ ಆರಂಭವಾಗಿದ್ದು, ಶಾಂತಿ ಕದಡದಿರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net