ಸಂಪಾದಕೀಯ | ಪ್ರತ್ಯೇಕತಾವಾದದ ಅಂತ್ಯ

-67e2e616e8013
Published on

ಜಮ್ಮು ಮತ್ತು ಕಾಶ್ಮೀರದ ಹುರಿಯತ್ ಕಾನ್ಪರೆನ್ಸ್​ನ ಎರಡು ಗುಂಪುಗಳು ಪ್ರತ್ಯೇಕತಾವಾದದೊಂದಿಗೆ ಎಲ್ಲ ಸಂಪರ್ಕಗಳನ್ನು ಕಡಿತಗೊಳಿಸುವುದಾಗಿ ತಿಳಿಸಿವೆ. ‘ಈ ನಡೆಯಿಂದ ಭಾರತದ ಏಕತೆಯಲ್ಲಿ ಬಲವರ್ಧನೆಯಾಗಲಿದೆ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಏಕೀಕರಣದ ನೀತಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದವು ಸಂಪೂರ್ಣವಾಗಿ ನಿರ್ನಾಮವಾಗಿದೆ’ ಎಂದು ಶ್ಲಾಘಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಅಭಿವೃದ್ಧಿ ಹೊಂದಿದ ಮತ್ತು ಏಕತೆಯ ಭಾರತ ನಿರ್ವಣದ ಕನಸಿನಲ್ಲಿ ಇದು ಬಹುದೊಡ್ಡ ಗೆಲುವಾಗಿದೆ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಸಂಘಟನೆಗಳ ನೇತೃತ್ವವನ್ನು ಹುರಿಯತ್ ಕಾನ್ಪರೆನ್ಸ್ ವಹಿಸಿಕೊಂಡಿತ್ತು ಎಂಬುದು ಗಮನಾರ್ಹ. ಕಣಿವೆ ಪ್ರದೇಶದಲ್ಲಿ ಆಲ್ ಪಾರ್ಟಿಸ್ ಹುರಿಯತ್ ಕಾನ್ಪರೆನ್ಸ್ (ಎಪಿಎಚ್​ಸಿ), ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್​ಎಫ್), ಲಷ್ಕರ್ ಇ ಜಬ್ಬಾರ್ (ಎಲ್​ಇಜೆ), ಲಷ್ಕರ್ ಇ ಉಮರ್ (ಎಲ್​ಇಒ), ತೆಹ್ರಿಕ್ ಉಲ್ ಮುಜಾಹಿದಿನ್ (ಟಿಯುಎಮ್ ಸೇರಿದಂತೆ ಹಲವು ಸಂಘಟನೆಗಳು ಪ್ರತ್ಯೇಕತಾವಾದ ಚಟುವಟಿಕೆಗಳಲ್ಲಿ ತೊಡಗಿದ್ದವು. ಈ ಪೈಕಿ ಬಹುಪಾಲು ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಪ್ರಸ್ತುತ, ಹುರಿಯತ್ ಕಾನ್ಪರೆನ್ಸ್​ನ ಎರಡು ಗುಂಪುಗಳು ಪ್ರತ್ಯೇಕತಾವಾದದ ದಾರಿ ತೊರೆದಿರುವುದು, ಕಾಶ್ಮೀರದ ಪಾಲಿಗೆ ಸಮಾಧಾನದ ಸಂಗತಿಯೇ ಹೌದು.

ಪಾಕಿಸ್ತಾನದಿಂದ ಬರುವ ಹಣ ಮತ್ತು ಸ್ಥಳೀಯ ಯುವಕರ ಬಲದ ಮೇಲೆ ಹಿಂಸೆಯನ್ನು ಪ್ರಚೋದಿಸುವ, ಅಭಿವೃದ್ಧಿಯನ್ನು ವಿರೋಧಿಸುವ ಪ್ರತ್ಯೇಕತಾವಾದಿಗಳ ಜಾಲ ಮುರಿಯಲು ಕೇಂದ್ರ ಸರ್ಕಾರ ಪರಿಣಾಮಕಾರಿ ತಂತ್ರ ಅನುಸರಿಸಿತು. ಪ್ರತ್ಯೇಕತಾವಾದಿ ಮುಖಂಡರಿಗೆ ಸಿಗುತ್ತಿದ್ದ ಸೌಲಭ್ಯಗಳಿಗೆ ಕತ್ತರಿ ಹಾಕಲಾಯಿತು.

ಅವರ ಹಣಕಾಸಿನ ಮೂಲವನ್ನು ಮುಚ್ಚಲು ಬಿಗಿಕ್ರಮ ಕೈಗೊಳ್ಳಲಾಯಿತು. ಪ್ರತ್ಯೇಕತಾವಾದಿಗಳು ರಾಷ್ಟ್ರವಿರೋಧಿ ಕೃತ್ಯಗಳಲ್ಲಿ ತೊಡಗಿರುವುದರಿಂದ ಭಯೋತ್ಪಾದಕರ ವಿರುದ್ಧ ಕೈಗೊಳ್ಳಲಾಗುವ ಕ್ರಮಗಳನ್ನೇ ಇವರ ವಿರುದ್ಧವೂ ಕೈಗೊಳ್ಳಲು ಗೃಹ ಸಚಿವಾಲಯ ನಿರ್ಧರಿಸಿ, ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇರಿಸಿದ್ದು ಮಹತ್ವದ ತಿರುವು. ಅಲ್ಲದೆ, ಸ್ಥಳೀಯ ಯುವಕರಿಗೆ ವಾಸ್ತವ ಸ್ಥಿತಿಯನ್ನು ಮನದಟ್ಟು ಮಾಡಿಕೊಡಲಾಯಿತಲ್ಲದೆ, ಕೆಲ ವರ್ಷಗಳ ಹಿಂದೆ ರಾಜಭವನದ ವತಿಯಿಂದಲೇ ಮೊದಲ ಬಾರಿಗೆ ಯುವಕರಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜನೆಯಾಯಿತು.

ಅಲ್ಲದೆ, ಕಲ್ಲುತೂರಾಟದಲ್ಲಿ ತೊಡಗುವ ಯುವಕರಿಗೆ ಸರ್ಕಾರಿ ನೌಕರಿ ಇಲ್ಲ ಎಂದು ಸರ್ಕಾರ ಕಠಿಣ ನಿಲುವು ತಳೆಯಿತು. ಪರಿಣಾಮ, ಆ ಬಳಿಕ ಕಲ್ಲುತೂರಾಟದ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿ, ಈಗ ಸಂಪೂರ್ಣ ನಿಂತುಹೋಗಿವೆ.

ಜಮ್ಮು-ಕಾಶ್ಮೀರದ ಶಾಂತಿ ಮತ್ತು ಅಭಿವೃದ್ಧಿಗೆ ಪ್ರತ್ಯೇಕತಾವಾದ ದೊಡ್ಡ ಅಡ್ಡಿಯಾಗಿತ್ತು. ಚುನಾವಣಾ ಪ್ರಕ್ರಿಯೆಗಳಿಗೂ ಈ ವಿಧ್ವಂಸಕಾರಿ ಶಕ್ತಿಗಳು ಅಡ್ಡಿ ಹಾಕುತ್ತಿದ್ದರು. ಆದರೆ, ಪ್ರತ್ಯೇಕತಾವಾದಿಗಳ ಅಸಹಜ ಬೇಡಿಕೆಗಳಿಗೆ ಸೊಪು್ಪ ಹಾಕಿ, ಅವರನ್ನು ಬೆಳೆಸಿದ್ದು ಕೆಲ ರಾಜಕೀಯ ಪಕ್ಷಗಳೇ ಎಂಬುದು ಕಟುಸತ್ಯ.

ಆದರೆ, ಕಳೆದೊಂದು ದಶಕದಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ಕೈಗೊಳ್ಳಲಾದ ಕಠಿಣ ಕ್ರಮಗಳು, ಈಗ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಏಕತೆಯೇ ದೇಶದ ಉಸಿರು. ಪ್ರತ್ಯೇಕತಾವಾದಿಗಳಿಗೂ ಈಗ ವಾಸ್ತವದ ಅರಿವಾಗಿದ್ದು, ಇನ್ನಾದರೂ, ಶಾಂತಿ ಸ್ಥಾಪನೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಹಕರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net