ಸಂಪಾದಕೀಯ | ಮರಗಳ ಮಾರಣಹೋಮ ಸಲ್ಲ

3-67e43d1e9917c
Published on

ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಪರಿಸರದ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಇದರಿಂದ ಹವಾಮಾನ ಬದಲಾವಣೆಯಾಗಿ, ಭೂತಾಪಮಾನ ಚಿಂತೆ ಹುಟ್ಟಿಸುವ ಪ್ರಮಾಣದಲ್ಲಿ ಏರುತ್ತಿದ್ದರೂ ಸರ್ಕಾರಗಳಾಗಲಿ, ನಾಗರಿಕ ಸಮಾಜವಾಗಲಿ ಎಚ್ಚೆತ್ತುಕೊಳ್ಳುತ್ತಿಲ್ಲ.

ವಾಯುಮಾಲಿನ್ಯ, ಜಲಮಾಲಿನ್ಯದ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಇದರಿಂದ ಹೊಸ ಹೊಸ ಕಾಯಿಲೆಗಳು, ವೈರಸ್​ಗಳು ಹುಟ್ಟುಕೊಂಡು, ಜನರ ಆರೋಗ್ಯದ ಮೇಲೆ ದಾಳಿ ಮಾಡುತ್ತಿವೆ. ವಿವಿಧ ಉಚಿತ ಯೋಜನೆಗಳನ್ನು ಸ್ಪರ್ಧೆಗೆ ಬಿದ್ದವರಂತೆ ಘೋಷಿಸುವ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪರಿಸರ ರಕ್ಷಣೆಯ ವಿಷಯವನ್ನು ಪ್ರಸ್ತಾಪಿಸುವುದೂ ಇಲ್ಲ.

ಈ ವಿಷಯವನ್ನು ಆದ್ಯತೆಯಾಗಿಸಿಕೊಳ್ಳುವುದಿಲ್ಲ. ಜನರಿಂದಲೂ ಈ ಬಗ್ಗೆ ಆಗ್ರಹ ಹಾಗೂ ಪರಿಸರ ಕಾಳಜಿ ಹೆಚ್ಚಬೇಕಿದೆ. ಕೆರೆಗಳ ಜೀಣೋದ್ಧಾರ, ನದಿಗಳ ಸ್ವಚ್ಛತೆ. ಅರಣ್ಯದ ಉಳಿವು, ಬಯಲು ಪ್ರದೇಶಗಳಲ್ಲಿ ಗಿಡ ನೆಡುವ ಬಗ್ಗೆ ಸೂಕ್ತ ಯೋಜನೆಯೂ ಇಲ್ಲ. ಹೀಗಾಗಿ, ಪರಿಸರದ ಸ್ಥಿತಿ ಕಳವಳಕಾರಿಯಾಗುತ್ತಿದ್ದು, ಈ ಮಹಾ ನಿರ್ಲಕ್ಷ್ಯಕ್ಕೆ ಮನುಷ್ಯ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲವಾದಲ್ಲಿ ತಥಾಕಥಿತ ಅಭಿವೃದ್ಧಿಗೆ ಯಾವುದೇ ಅರ್ಥ ಇರುವುದಿಲ್ಲ.

ಮರಗಳ ಮಾರಣಹೋಮ ಸೃಷ್ಟಿಸುತ್ತಿರುವ ಹಾನಿಯಂತೂ ಅಷ್ಟಿಷ್ಟಲ್ಲ. ಯಾವುದೇ ಯೋಜನೆ ಬಂದರೂ ಮೊದಲು ಬಲಿಯಾಗುವುದು ಮರಗಳೇ. ಹಾಗಾಗಿಯೇ, ಸುಪ್ರೀಂ ಕೋರ್ಟ್ ಬುಧವಾರ ಈ ಬಗ್ಗೆ ತೀಕ್ಷ ್ಣವಾಗಿ ಪ್ರತಿಕ್ರಿಯಿಸಿದ್ದು, ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯುವುದು ಮನುಷ್ಯರನ್ನು ಕೊಲ್ಲುವುದಕ್ಕಿಂತಲೂ ಹೆಚ್ಚು ಘಾತುಕವಾದುದು ಎಂದು ಅಭಿಪ್ರಾಯಪಟ್ಟಿದೆ.

ಮಾತ್ರವಲ್ಲ, ಉತ್ತರಪ್ರದೇಶದಲ್ಲಿನ ಆಗ್ರಾದ ತಾಜ್​ವುಹಲ್ ಸುತ್ತಮುತ್ತಲ ಪ್ರದೇಶದಲ್ಲಿ 454 ಮರಗಳನ್ನು ಕತ್ತರಿಸಿದ್ದಕ್ಕಾಗಿ, ಕಡಿದ ಪ್ರತಿಯೊಂದು ಮರಕ್ಕೆ ತಲಾ 1 ಲಕ್ಷ ರೂ.ಗಳಂತೆ 4.54 ಕೋಟಿ ರೂ. ದಂಡವನ್ನು ವಿಧಿಸಿದೆ. ಸಂರಕ್ಷಿತ ತಾಜ್ ಟ್ರಪೇಜಿಯಂ ವಲಯದಲ್ಲಿ 454 ಮರಗಳು ಸೃಷ್ಟಿಸುವ ಹಸಿರು ಪರಿಸರವನ್ನು ಮರುಸೃಷ್ಟಿಸಲು ಕನಿಷ್ಠ 100 ವರ್ಷ ಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್​ನ ಪೀಠ ಹೇಳಿರುವುದು ಪ್ರಕರಣದ ಗಂಭೀರತೆಗೆ ಸಾಕ್ಷಿ.

‘ಪರಿಸರಕ್ಕೆ ಹಾನಿ ಒದಗಿಸುವ ವ್ಯಕ್ತಿಗಳ ಮೇಲೆ ಯಾವುದೇ ದಯೆ ತೋರಬಾರದು. ಯಾವುದೇ ವ್ಯಕ್ತಿ ಸಂಬಂಧಿತ ಅಧಿಕಾರಿ ಅಥವಾ ಸಂಸ್ಥೆಯ ಅನುಮತಿ ಇಲ್ಲದೆ ಮರ ಕಡಿಯುವಂತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಖಾ ಮತ್ತು ಉಜ್ಜಲ್ ಭುಯಾನ್ ಇದ್ದ ಪೀಠ ಸ್ಪಷ್ಟವಾಗಿ ತಿಳಿಸಿದೆ. ತಾಜ್ ಟ್ರಪೇಜಿಯಂ ವಲಯದಲ್ಲಿ ಹೆಚ್ಚು ಮರಗಳನ್ನು ಬೆಳೆಸಿ, ಹಸಿರು ಪ್ರದೇಶ ವಿಸ್ತರಿಸುವಂತೆ ಸುಪ್ರೀಂ ಕೋರ್ಟ್ 1996ರಲ್ಲಿ ಸೂಚಿಸಿತ್ತು. ಆದರೆ, ಈಗ ಅದೇ ಸಂರಕ್ಷಿತ ಪ್ರದೇಶದಲ್ಲಿ ನೂರಾರು ಮರಗಳನ್ನು ಕತ್ತರಿಸಿ ಹಾಕಲಾಗಿರುವುದು ನಿಜಕ್ಕೂ ವಿಪರ್ಯಾಸ.

ರಾಜಧಾನಿ ದೆಹಲಿಯಲ್ಲೂ ಇದೇ ರೀತಿ ಮರಗಳ ಮಾರಣಹೋಮ ಪ್ರಕರಣ ಬೆಳಕಿಗೆ ಬಂದಾಗ ದೆಹಲಿಯಲ್ಲಿ ಮರಗಳ ಗಣತಿ ನಡೆಸುವಂತೆ ಸುಪ್ರೀಂ ಕೋರ್ಟ್ 2024ರ ನವೆಂಬರ್​ನಲ್ಲಿ ಆದೇಶಿಸಿತು. ಆ ಬಳಿಕ ಪರಿಸರದ ಕುರಿತಂತೆ ಈಗ ಮತ್ತೊಮ್ಮೆ ಮಹತ್ವದ ಸೂಚನೆ ನೀಡಿದ್ದು,

ಸುಪ್ರೀಂನ ಈ ತೀರ್ಪು ಮತ್ತು ಅಭಿಪ್ರಾಯ ಸರ್ಕಾರ, ವ್ಯವಸ್ಥೆಯ ಕಣ್ಣು ತೆರೆಸಲಿ. ಪರಿಸರ ಸಂರಕ್ಷಣೆ ಆದ್ಯತೆಯಾಗಲಿ. ಸುಸ್ಥಿರ ಅಭಿವೃದ್ಧಿ ಆಳುಗರ ಗುರಿಯಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net