

ಜಿಎಸ್ಟಿ ನಕಲಿ ನೋಂದಣಿ ವಿರುದ್ಧ ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್್ಸ ಮಂಡಳಿ (ಸಿಬಿಐಸಿ) ದೇಶಾದ್ಯಂತ ಆರಂಭಿಸಿರುವ ಕಾರ್ಯಾಚರಣೆಗೆ ಭರ್ಜರಿ ಯಶಸ್ಸು ಸಿಕ್ಕಿದ್ದು, ಭಾರಿ ಪ್ರಮಾಣದ ವಂಚನೆ ಪತ್ತೆ ಆಗುತ್ತಿದೆ. ಈವರೆಗೆ 10,700 ನಕಲಿ ಕಂಪನಿಗಳನ್ನು ಪತ್ತೆ ಹಚ್ಚಲಾಗಿದ್ದು, ಒಟ್ಟು 10,179 ಕೋಟಿ ರೂ. ವಂಚನೆ ಬೆಳಕಿಗೆ ಬಂದಿದೆ. ಅಲ್ಲದೆ, ನಕಲಿ ಇನ್ವಾಯ್್ಸ ಸಲ್ಲಿಸಿ ಪಡೆದಿದ್ದ 2994 ಕೋಟಿ ರೂ. ಮೊತ್ತವನ್ನು ಪತ್ತೆ ಹಚ್ಚಲಾಗಿದ್ದು, ಈ ಪೈಕಿ 28 ಕೋಟಿ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಎಸ್ಟಿ ನಕಲಿ ನೋಂದಣಿ ವಿರುದ್ಧ ಹಮ್ಮಿಕೊಂಡಿರುವ ಈ ಎರಡನೇ ಹಂತದ ವಿಶೇಷ ಕಾರ್ಯಾಚರಣೆ ಅಕ್ಟೋಬರ್ 15ರವರೆಗೆ ಮುಂದುವರಿಯಲಿದೆ. ದೇಶದಲ್ಲಿ ಮೊದಲ ಹಂತದಲ್ಲಿ 2023ರ ಮೇ 16ರಿಂದ ಜುಲೈ 15ರವರೆಗೆ ನಕಲಿ ನೋಂದಣಿಯ ವಿರುದ್ಧ ಕಾರ್ಯಾಚರಣೆ ನಡೆದಿತ್ತು. 21,791 ನಕಲಿ ಕಂಪನಿಗಳನ್ನು ಪತ್ತೆ ಹಚ್ಚಿದ್ದ ಅಧಿಕಾರಿಗಳು 24,010 ಕೋಟಿ ರೂ. ವಂಚನೆಯನ್ನು ಬಯಲಿಗೆ ಎಳೆದಿದ್ದರು. ಕೇಂದ್ರ ಸರ್ಕಾರ ಉದ್ಯಮಿಸ್ನೇಹಿ ಕ್ರಮಗಳನ್ನು ಕೈಗೊಳುತ್ತಿದ್ದರೂ ತೆರಿಗೆವಂಚಕರ ಸಂಖ್ಯೆ ಕಡಿಮೆ ಆಗದಿರುವುದು ದುರದೃಷ್ಟಕರ ಸಂಗತಿ.
ಆನ್ಲೈನ್ ಗೇಮಿಂಗ್, ಬ್ಯಾಂಕಿಂಗ್ (ರಾಷ್ಟ್ರೀಕೃತವಲ್ಲದ), ಹಣಕಾಸು ಸೇವೆ ಮತ್ತು ವಿಮೆ (ಬಿಎಫ್ಎಸ್ಐ), ಕಬ್ಬಿಣ, ತಾಮ್ರ ಹಾಗೂ ಮಿಶ್ರಲೋಹದ ಸರಕು ವಲಯದಲ್ಲಿ ಅತಿ ಹೆಚ್ಚು ವಂಚನೆ ಕಂಡುಬಂದಿದೆ. ಅಲ್ಲದೆ, ಪಾನ್ ಮಸಾಲಾ, ತಂಬಾಕು, ಸಿಗರೇಟ್, ಬೀಡಿ ತಯಾರಿಕಾ ವಲಯದಲ್ಲೂ ತೆರಿಗೆ ವಂಚನೆ ಪ್ರಕರಣಗಳು ಹೆಚ್ಚಿವೆ. 2017-18ರಲ್ಲಿ 7,879 ಕೋಟಿ ರೂ., 2018-19ರಲ್ಲಿ 19,319 ಕೋಟಿ ರೂ., 2019-20ರಲ್ಲಿ 21,739 ಕೋಟಿ ರೂ., 2020-21ರಲ್ಲಿ 31,908 ಕೋಟಿ ರೂ., 2021-22ರಲ್ಲಿ 50,325 ಕೋಟಿ ರೂ. ಜಿಎಸ್ಟಿ ವಂಚನೆಯನ್ನು ಪತ್ತೆ ಹಚ್ಚಲಾಗಿದೆ.
2023-24ನೇ ಆರ್ಥಿಕ ವರ್ಷದಲ್ಲಿ ಜಿಎಸ್ಟಿ ಗುಪ್ತಚರ ಮಹಾನಿರ್ದೇಶನಾಲಯವು (ಡಿಜಿಜಿಐ) ಒಟ್ಟು 6,084 ಪ್ರಕರಣಗಳನ್ನು ಭೇದಿಸಿ, 2.01 ಲಕ್ಷ ಕೋಟಿ ರೂ. ಮೊತ್ತದ ಜಿಎಸ್ಟಿ ವಂಚನೆಯನ್ನು ಪತ್ತೆ ಹಚ್ಚಲಾಗಿತ್ತು. ಈ ಪೈಕಿ 26,605 ಕೋಟಿ ರೂ.ಗಳನ್ನು ವಂಚನೆ ಮಾಡಿದವರು ಮರುಪಾವತಿಸಿದ್ದರು. ವರ್ಷದಿಂದ ವರ್ಷಕ್ಕೆ ಜಿಎಸ್ಟಿ ವಂಚನೆಯ ಪ್ರಮಾಣ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ. ಈ ರೀತಿ ತೆರಿಗೆ ವಂಚಿಸುವ ಉದ್ಯಮಿಗಳಿಗೆ ಕೇಂದ್ರ ಸರ್ಕಾರ ದಂಡನೀಯ ನಿರ್ಬಂಧಗಳನ್ನು ವಿಧಿಸಬೇಕು. ಇಲ್ಲವಾದಲ್ಲಿ, ಮತ್ತಷ್ಟು ವಲಯಗಳಿಗೆ ಈ ವಂಚನೆ ಜಾಲ ವಿಸ್ತರಿಸುವ ಅಪಾಯ ತಪ್ಪಿದ್ದಲ್ಲ.
‘ತೆರಿಗೆ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಇದಕ್ಕೆ ಕಡಿವಾಣ ಹಾಕಲು ಕಸ್ಟಮ್್ಸ ಮಂಡಳಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ಸಿಬಿಐಸಿ ಸದಸ್ಯ ಶಶಾಂಕ್ ಪ್ರಿಯಾ ಹೇಳಿದ್ದು, ತೆರಿಗೆ ವಂಚನೆ ಎಸಗುವ ವರ್ತಕರಿಗೆ ಇಲಾಖೆಯು ಕೆಲ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಕಠಿಣ ಕ್ರಮ ಕೈಗೊಳ್ಳದೆ ತೆರಿಗೆ ವಂಚಕರ ಜಾಲ ನಿಯಂತ್ರಿಸುವುದು ಕಷ್ಟ. ಹಾಗಾಗಿ, ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟ ನೀತಿ ರೂಪಿಸಿ, ಅನುಷ್ಠಾನಕ್ಕೆ ತರುವ ಅಗತ್ಯವಿದೆ.