ಸಂಪಾದಕೀಯ: ಕಠಿಣ ಕ್ರಮ ಕೈಗೊಳ್ಳಿ

psi
Published on

ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಬದ್ರಿಕೊಪ್ಪಲಿನಲ್ಲಿ ಬುಧವಾರ ರಾತ್ರಿ ಗಣೇಶ ಮೂರ್ತಿಯನ್ನು ವಿಸರ್ಜನೆಗಾಗಿ ಮೆರವಣಿಗೆಯ ಮೂಲಕ ಕೊಂಡೊಯ್ಯು ತ್ತಿರುವಾಗ ಕಿಡಿಗೇಡಿಗಳು ನಡೆಸಿದ ಕಲ್ಲುತೂರಾಟದಿಂದ ಕೋಮು ಗಲಭೆ ಸಂಭವಿಸಿದೆ. ಕಳೆದ ವರ್ಷವೂ ಇದೇ ಸ್ಥಳದಲ್ಲಿ ಇದಕ್ಕಿಂತ ಕಡಿಮೆ ತೀವ್ರತೆಯ ಗದ್ದಲ ಸಂಭವಿಸಿತ್ತು. ಈ ಬಾರಿ ಅದಕ್ಕೆ ಸೇಡು ತೀರಿಸಿಕೊಳ್ಳಲೆಂಬಂತೆ ಕೆಲವು ಯುವಕರು ಗಲಾಟೆ ಎಬ್ಬಿಸಿದ್ದು ಕಂಡುಬಂದಿದೆ. ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ 50ಕ್ಕೂ ಅಧಿಕ ಜನರನ್ನು ಬಂಧಿಸಿದ್ದಾರೆ. ಆದರೆ ಪೊಲೀಸರು ಗಲಭೆಯ ಬಳಿಕ ಸಕ್ರಿಯರಾಗುವ ಬದಲು, ಕಳೆದ ವರ್ಷದ ಕಹಿ ಘಟನೆಯ ಹಿನ್ನೆಲೆಯಲ್ಲಿ ಈ ಬಾರಿ ಇಂತಹ ಗಲಭೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರೆ ಭೇಷ್ ಎನ್ನಬಹುದಿತ್ತು. ಈ ವಿಷಯದಲ್ಲಿ ಗುಪ್ತಚರ ದಳ ವಿಫಲವಾಗಿದೆ ಎಂದೇ ಅರ್ಥ.

ಘಟನೆಯಿಂದ ಇಡೀ ನಾಗಮಂಗಲ ಪಟ್ಟಣ ಪ್ರಕ್ಷುಬ್ಧಗೊಂಡಿದ್ದು, ಜನರು ಆತಂಕಿತರಾಗಿದ್ದಾರೆ. ಗಲಭೆ ಬಳಿಕ ರಾಜಕೀಯ ಆರೋಪ- ಪ್ರತ್ಯಾರೋಪಗಳು ತೀವ್ರಗೊಂಡಿದ್ದು, ಗುರುವಾರ ಬಿಜೆಪಿ ನಾಯಕರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎರಡೂ ಸಮುದಾಯದವರಿಗೆ ಸೇರಿದ ಹಲವು ಅಂಗಡಿಗಳು ಬೆಂಕಿಗೆ ಸುಟ್ಟು ಕರಕಲಾಗಿದ್ದು, ಕಲ್ಲುತೂರಾಟದಲ್ಲಿ ಹಲವು ಯುವಕರಿಗೆ ಗಾಯಗಳಾಗಿವೆ. 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ’ ಎಂದು ಆರೋಪಿಸಿರುವ ಪ್ರತಿಪಕ್ಷ, ‘ಸರ್ಕಾರ ಒಂದು ಕೋಮಿನವರ ರಕ್ಷಣೆಗೆ ಯತ್ನಿಸುತ್ತಿದೆ’ ಎಂದಿದೆ. ಆದರೆ, ಈ ಆರೋಪವನ್ನು ಸರ್ಕಾರ ತಳ್ಳಿಹಾಕಿದ್ದು, ‘ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರು ಯಾವುದೇ ಜಾತಿ, ಧರ್ಮದವರು ಆಗಿರಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅದೇನಿದ್ದರೂ, ಸಮಾಜದಲ್ಲಿ ಶಾಂತಿ, ನೆಮ್ಮದಿಗೆ ಧಕ್ಕೆ ತರುವ ಕಿಡಿಗೇಡಿಗಳ ಕೃತ್ಯ ಇದಾಗಿದೆ ಎಂಬುದು ನಿಸ್ಸಂದೇಹ. ಈ ಘಟನೆಯನ್ನು ಗಮನಿಸಿದಾಗ ಹಲವು ಪ್ರಶ್ನೆಗಳು ಉದ್ಭವವಾಗುತ್ತವೆ. ನಾಗಮಂಗಲ ಗಲಭೆ ನಡೆದ ಸ್ಥಳಕ್ಕೆ ಸಾವಿರಾರು ಕಲ್ಲುಗಳು ಒಮ್ಮೆಲೆ ಎಲ್ಲಿಂದ ಬಂದವು? ಮಾರಕಾಸ್ತ್ರಗಳು ಸಂಗ್ರಹಗೊಂಡಿದ್ದು ಹೇಗೆ? ಯುವಕರನ್ನು ಪ್ರಚೋದಿಸಿದವರು ಯಾರು? ಶಾಂತಿಯಿಂದ ಸಾಗುತ್ತಿದ್ದ ಗಣೇಶ ಮೆರವಣಿಗೆಗೆ ಅಡ್ಡಿಪಡಿಸಿದವರು ಯಾರು? ಈ ಎಲ್ಲ ಪ್ರಶ್ನೆಗಳಿಗೆ ತನಿಖೆ ಬಳಿಕವೇ ಉತ್ತರ ಸಿಗಲಿದೆ. ಇದು ಪೂರ್ವನಿಯೋಜಿತ ಕೃತ್ಯವೇ, ಇದಕ್ಕಾಗಿ ಸಾಕಷ್ಟು ದಿನಗಳ ಮುಂಚೆಯೇ ತಯಾರಿ ನಡೆಸಲಾಗಿತ್ತೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಅಲ್ಲದೆ, ಕಳೆದ ವರ್ಷದ ಘಟನೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ಬಾರಿ ತುಂಬ ಕಟ್ಟೆಚ್ಚರ ವಹಿಸಬೇಕಿತ್ತು. ಈಗಲೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ತಪ್ಪಿತಸ್ಥರನ್ನು ಪತ್ತೆ ಮಾಡಿ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಿ ಮತ್ತು ಶಾಂತಿ, ಸಾಮರಸ್ಯ ಕದಡುವ ಯಾವುದೇ ಪ್ರಯತ್ನಗಳು ಮತ್ತೆ ತಲೆ ಎತ್ತದಂತೆ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇರಿಸಲಿ. ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ಸ್ಥಾಪನೆ ಆದ್ಯತೆಯಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net