ಸಂಪಾದಕೀಯ| ಕಠಿಣ ಕ್ರಮ ಕೈಗೊಳ್ಳಿ

medical
Published on

ವೈದ್ಯವೃತ್ತಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ಜೀವವನ್ನು ಬದುಕಿಸಲು ವೈದ್ಯರು ಅವರ ಜ್ಞಾನಕೌಶಲವನ್ನು ಬಳಸುತ್ತಾರಲ್ಲದೆ, ಸಮಾಜ ನಿರೋಗಿಯಾಗಿರಲು ಶ್ರಮಿಸುತ್ತಾರೆ. ಆದರೆ, ಸಮಾಜದಲ್ಲಿ ಕೆಲ ದುಷ್ಟಶಕ್ತಿಗಳ ವರ್ತನೆ ವ್ಯವಸ್ಥೆಗೆ ಹಾನಿ ಮಾಡುತ್ತದೆ. ಆಗಾಗ ಕೇಳಿಬರುತ್ತಿದ್ದ ನಕಲಿ ವೈದ್ಯರ ಹಾವಳಿ ಮತ್ತೆ ಹೆಚ್ಚಿರುವುದು ಆತಂಕಕಾರಿ ಸಂಗತಿಯಾದರೆ, ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಾದ ಆರೋಗ್ಯ ಇಲಾಖೆ ಗಂಭೀರ ಹಾಗೂ ಕಠಿಣ ಕ್ರಮ ಕೈಗೊಳ್ಳದಿರುವುದು ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ. ನಕಲಿ ವೈದ್ಯರು ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗಿದ್ದು, ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು, ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಇಂಥ ಪ್ರಕರಣಗಳು ಈ ಹಿಂದೆಯೂ ರಾಜ್ಯದಲ್ಲಿ ಪತ್ತೆಯಾಗಿದ್ದವು. ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಂಡಿದ್ದರೆ ಈ ಪಿಡುಗು ಮತ್ತೆ ವ್ಯಾಪಕವಾಗಿ ಬೆಳೆಯುತ್ತಿರಲಿಲ್ಲ.

ಪ್ರಸಕ್ತ, ರಾಜ್ಯದಲ್ಲಿ 1,436 ನಕಲಿ ವೈದ್ಯರು ಸಿಕ್ಕಿಬಿದ್ದಿದ್ದಾರೆ. ಇವರೆಲ್ಲ ರಾಜಾರೋಷವಾಗಿ ಕ್ಲಿನಿಕ್​ಗಳನ್ನು ನಡೆಸುತ್ತಿದ್ದರು ಮತ್ತು ಕೆಲವರು ಭ್ರೂಣ ಹತ್ಯೆಯ ಕರಾಳ ದಂಧೆಯಲ್ಲೂ ಶಾಮೀಲಾಗಿರುವ ಶಂಕೆ ಇದೆ ಎಂದಿದೆ ಆರೋಗ್ಯ ಇಲಾಖೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಕಲಿ ವೈದ್ಯರು ತಮ್ಮ ಬೇಳೆ ಬೇಯಿಸಿಕೊಳ್ಳಲು, ಇಲಾಖೆಯ ಕೆಲ ಹಿರಿಯ ಅಧಿಕಾರಿಗಳು ಸಹಕರಿಸಿದ್ದಾರೆ ಎಂಬ ಆರೋಪ ನಿಜಕ್ಕೂ ಆಘಾತಕಾರಿ. ಅಲೋಪಥಿ, ನ್ಯಾಚುರೋಪಥಿ, ಆಯುರ್ವೆದ ಹಾಗೂ ಹೋಮಿಯೋಪಥಿ ಹೆಸರಿನಲ್ಲಿ ದಂಧೆ ನಡೆಸುತ್ತಿರುವವರ ಪಟ್ಟಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದು, ಬೀದರ್​ನಲ್ಲಿ ಅತಿ ಹೆಚ್ಚು 423 ನಕಲಿ ವೈದ್ಯರು ಸಿಕ್ಕಿಬಿದ್ದಿದ್ದಾರೆ. ನಂತರದ ಸ್ಥಾನದಲ್ಲಿ ಕೋಲಾರ (179), ಬೆಳಗಾವಿ (170), ಕಲಬುರಗಿ (82) ಜಿಲ್ಲೆಗಳಿವೆ. ಇಂತಹ ಕ್ಲಿನಿಕ್​ಗಳಲ್ಲಿ ಚಿಕಿತ್ಸೆ ಪಡೆದಿರುವ ಸಾಕಷ್ಟು ರೋಗಿಗಳು ಪ್ರಾಣ ಕಳೆದುಕೊಂಡಿರುವ ನಿದರ್ಶನಗಳಿವೆ.

ಮೃತಪಟ್ಟವರು, ಹೊರ ರಾಜ್ಯ ಹಾಗೂ ಹೊರದೇಶಕ್ಕೆ ಹೋಗಿರುವ ಅಸಲಿ ವೈದ್ಯರ ಹೆಸರಲ್ಲಿ ನಕಲಿ ವೈದ್ಯರಿಗೆ ಕ್ಲಿನಿಕ್ ಆರಂಭಿಸಲು ಹಾಗೂ ಚಿಕಿತ್ಸೆ ನೀಡಲು ಕರ್ನಾಟಕ ಆಯುರ್ವೆದಿಕ್ ಮತ್ತು ಯುನಾನಿ ವೈದ್ಯ ಮಂಡಳಿಯೇ (ಕೆಎಯುಪಿ) ಅನುಮತಿ ನೀಡಿರುವ ಸಂಗತಿ ಕಳೆದ ವರ್ಷವೇ (2022) ಬೆಳಕಿಗೆ ಬಂದಿತ್ತು. ಪ್ರತಿ ನೋಂದಣಿ ಪ್ರಮಾಣಪತ್ರಕ್ಕೆ ಅಂದಾಜು 4 ರಿಂದ 5 ಲಕ್ಷ ರೂ.ವರೆಗೆ ಲಂಚ ಪಡೆದು ನೂರಾರು ನಕಲಿ ವೈದ್ಯರಿಗೆ ಮಂಡಳಿಯ ರಿಜಿಸ್ಟ್ರಾರ್​ಗಳೇ ಪರವಾನಗಿ ವಿತರಿಸಿದ್ದು ಆಯುಷ್ ಇಲಾಖೆಯ ತಾಂತ್ರಿಕ ಸಮಿತಿಯ ಆಂತರಿಕ ಹಾಗೂ ಸಿಐಡಿ ತನಿಖೆಯಲ್ಲಿ ದೃಢಪಟ್ಟಿತ್ತು. ಆದರೂ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಉದಾಸೀನ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಲಂಚ ಪಡೆದು ಇಲಾಖೆಯ ಕೆಲ ಅಧಿಕಾರಿಗಳೇ ನಕಲಿ ವೈದ್ಯರನ್ನು ರಕ್ಷಿಸುತ್ತಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ವಿಚಾರಣೆ ನಡೆಸಲಿ.

ಗ್ರಾಮೀಣ ಭಾಗಗಳಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ನಕಲಿ ವೈದ್ಯರ ಸಂಖ್ಯೆ ಹೆಚ್ಚುತ್ತಿದೆ. ಇವರು ಕಾನೂನಿನ ಭಯವಿಲ್ಲದೆ ಕಾರ್ಯಾಚರಿಸುತ್ತಿರುವುದು ಅಪಾಯಕಾರಿ ವಿದ್ಯಮಾನ ಎಂದೇ ಹೇಳಬಹುದು. ಜನರು ಸ್ವಾಸ್ಥ್ಯರಕ್ಷಣೆ ಹೆಸರಿನಲ್ಲೇ ಮೋಸ ಹೋಗುತ್ತಿರುವುದು ದುರದೃಷ್ಟಕರ. ಇಂಥ ಗಂಭೀರ ವಿಷಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ, ಅರಿವು ಹೆಚ್ಚಿಸುವ ಕೆಲಸವೂ ಅವಶ್ಯಕವಾಗಿ ಆಗಬೇಕಿದೆ. 1,436 ನಕಲಿ ವೈದ್ಯರ ವಿರುದ್ಧ ಸರ್ಕಾರ ಯಾವ ಬಗೆಯ ಕ್ರಮ ಕೈಗೊಳ್ಳಲಿದೆ? ಇಂಥ ಪ್ರಕರಣಗಳು ಮರುಕಳಿಸದಂತೆ ಬಿಗಿಯಾದ ನೀತಿ ಅನುಷ್ಠಾನಕ್ಕೆ ತರುವುದೆ ಎಂಬ ಪ್ರಶ್ನೆಗಳಿಗೆ ಸರ್ಕಾರ ಸಮರ್ಪಕ ಉತ್ತರ ನೀಡಬೇಕಿದೆ ಮತ್ತು ಈ ಪಿಡುಗನ್ನು ನಿವಾರಿಸಲು ಪರಿಣಾಮಕಾರಿ ಮದ್ದು ನೀಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net