

ಔಷಧಗಳ ಗರಿಷ್ಠ ಮಾರಾಟ ಬೆಲೆ (ಎಂಆರ್ಪಿ) ಮತ್ತು ಚಿಲ್ಲರೆ ವ್ಯಾಪಾರಿಗಳಿಂದ (ರೀಟೇಲರ್) ಪಡೆಯಲಾಗುವ ದರಗಳ ನಡುವೆ 10 ಪಟ್ಟು ವ್ಯತ್ಯಾಸವಿರುವುದಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಧೋರಣೆಯನ್ನು ಎತ್ತಿ ತೋರಿಸಿದೆ. ನ್ಯಾಯಾಲಯವು ಇದನ್ನು ರೋಗಿಗಳಿಗೆ ಎಸಗುತ್ತಿರುವ ಹಗಲುದರೋಡೆ ಎಂದು ಕರೆದಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಕ್ಯಾನ್ಸರ್ ಔಷಧವೊಂದರ ಉದಾಹರಣೆಯನ್ನು ನೀಡಿದ್ದು, ಇದರ ಎಂಆರ್ಪಿ -ಠಿ;27,000 ಆಗಿದ್ದರೆ, ಚಿಲ್ಲರೆ ವ್ಯಾಪಾರಿಗೆ ಇದು ಕೇವಲ -ಠಿ;2,700ಕ್ಕೆ ಸಿಗುತ್ತಿದೆ ಎಂದು ಬೊಟ್ಟು ಮಾಡಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿಯುತ ಅಧಿಕಾರಿಗಳು ಮಾತ್ರ ಮೌನವಾಗಿ ಕುಳಿತಿರುವ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಔಷಧಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ದರ ನಿಯಂತ್ರಣಕ್ಕೆ ಒತ್ತಾಯಿಸಿ ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಜೀವ ಉಳಿಸಬೇಕಾದ ಔಷಧಗಳೇ ಇಂದು ಸಾಮಾನ್ಯ ಜನರ ಬದುಕನ್ನು ಬೀದಿಗೆ ತರುತ್ತಿರುವ ಕಟು ವಾಸ್ತವದತ್ತ ಸುಪ್ರೀಂ ಕೋರ್ಟ್ ಅತ್ಯಂತ ನಿಖರ ಮಾತುಗಳಲ್ಲಿ ಬೊಟ್ಟು ಮಾಡಿದೆ. ದುಬಾರಿ ಚಿಕಿತ್ಸೆ ಮತ್ತು ಔಷಧಗಳ ವೆಚ್ಚ ಭರಿಸಲು ಜನಸಾಮಾನ್ಯರು ತಮ್ಮ ಮನೆ, ಜಮೀನು, ಒಡವೆಗಳನ್ನು ಮಾರಿಕೊಳ್ಳುತ್ತಿದ್ದಾರೆ. ಗಂಭೀರ ಕಾಯಿಲೆ ಬಂದಾಗ ಕುಟುಂಬಗಳು ಮಾನಸಿಕವಾಗಿ ಮಾತ್ರವಲ್ಲ, ಆರ್ಥಿಕವಾಗಿಯೂ ಸಂಪೂರ್ಣವಾಗಿ ಕುಸಿದು ಬೀಳುತ್ತಿವೆ. ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಆರೋಗ್ಯ ವೆಚ್ಚವೇ ಬಡತನಕ್ಕೆ ದೂಡುವ ಪ್ರಮುಖ ಕಾರಣವಾಗುತ್ತಿರುವುದು ನಿಜಕ್ಕೂ ವಿಷಾದನೀಯ.
ಇಲ್ಲಿ ಕಾಡುವ ಗಂಭೀರ ಪ್ರಶ್ನೆಯೆಂದರೆ, ಇಷ್ಟೆಲ್ಲ ಅವ್ಯವಸ್ಥೆ ಇದ್ದರೂ ಆರೋಗ್ಯ ಇಲಾಖೆ ಹಾಗೂ ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರವು ಯಾರ ಹಿತಾಸಕ್ತಿ ಕಾಪಾಡಲು ಕಣ್ಣು ಮುಚ್ಚಿ ಕುಳಿತಿವೆ? ಔಷಧ ಕಂಪನಿಗಳು ತಮಗೆ ತೋಚಿದಂತೆ ಉತ್ಪಾದನಾ ವೆಚ್ಚಕ್ಕಿಂತ ಹತ್ತು ಪಟ್ಟು ಎಂಆರ್ಪಿ ನಿಗದಿಪಡಿಸಲು ಯಾರು ಅನುಮತಿ ನೀಡಿದರು? ತಯಾರಕರು, ವಿತರಕರು ಮತ್ತು ಆಸ್ಪತ್ರೆಗಳ ನಡುವಿನ ಈ ಕಮಿಷನ್ ದಂಧೆಯ ಬಗ್ಗೆ ನಿಯಂತ್ರಕ ಸಂಸ್ಥೆಗಳಿಗೆ ಮಾಹಿತಿ ಇಲ್ಲವೇ? ಇಂತಹ ಲೂಟಿಯ ವಿರುದ್ಧ ಸ್ವಯಂಪ್ರೇರಿತವಾಗಿ ಕಠಿಣ ಕಾನೂನು ರೂಪಿಸಿ ಜಾರಿಗೊಳಿಸಬೇಕಾಗಿತ್ತು. ಆದರೆ, ನ್ಯಾಯಾಲಯ ಛೀಮಾರಿ ಹಾಕುವವರೆಗೂ ಮೌನಕ್ಕೆ ಶರಣಾಗಿದ್ದು ಏಕೆ?
ಕೇವಲ ಬೆರಳೆಣಿಕೆಯ ಅತ್ಯಗತ್ಯ ಔಷಧಗಳಿಗೆ ಸೀಮಿತ ದರ ನಿಯಂತ್ರಣ ವಿಧಿಸಿ ಕೈತೊಳೆದುಕೊಂಡರೆ ಸಾಲದು. ಮಾರಕ ಕಾಯಿಲೆಗಳ ಔಷಧಗಳು ಸೇರಿದಂತೆ ಪ್ರತಿಯೊಂದು ಔಷಧದ ಉತ್ಪಾದನಾ ವೆಚ್ಚ ಹಾಗೂ ಗರಿಷ್ಠ ಮಾರಾಟ ಬೆಲೆಯ ನಡುವೆ ಸಮಂಜಸವಾದ ಲಾಭದ ಮಿತಿ ನಿಗದಿಪಡಿಸುವುದು ಇಂದಿನ ತುರ್ತು ಅಗತ್ಯ. ಆರೋಗ್ಯ ರಕ್ಷಣೆ ಎನ್ನುವುದು ನಾಗರಿಕರ ಮೂಲಭೂತ ಹಕ್ಕು. ಔಷಧ ತಯಾರಕರು ಮತ್ತು ವ್ಯಾಪಾರಿಗಳ ದುರಾಸೆಗೆ ಬಡ ರೋಗಿಗಳ ಪ್ರಾಣ ಹಾಗೂ ಬದುಕು ಬಲಿಯಾಗಬಾರದು. ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆಗಳು ಇನ್ನಾದರೂ ಎಚ್ಚೆತ್ತುಕೊಂಡು, ಎಂಆರ್ಪಿ ದಂಧೆಯನ್ನು ಮಟ್ಟಹಾಕಿ, ಔಷಧಗಳು ನೈಜ ಹಾಗೂ ಕೈಗೆಟುಕುವ ದರದಲ್ಲಿ ಜನರಿಗೆ ಸಿಗುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.